ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ಕ್ಕೆ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 20 ಲಕ್ಷ ಏರಿಕೆ

‘ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗಳ ವಿದ್ಯುದ್ದೀಕರಣ ಯೋಜನೆ’ ವರದಿಯಿಂದ ಮಾಹಿತಿ
Last Updated 22 ಏಪ್ರಿಲ್ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ದೈನಂದಿನ ಪ್ರಯಾಣಿಕರ ಸಂಖ್ಯೆ ಸುಮಾರು 20 ಲಕ್ಷದಷ್ಟು ಏರಿಕೆಯಾಗಲಿದೆ.

ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರ (ಸಿಸ್ಟೆಪ್‌) ಸಿದ್ಧಪಡಿಸಿರುವ ‘ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗಳ ವಿದ್ಯುದ್ದೀಕರಣ ಯೋಜನೆ’ ವರದಿಯಿಂದ ಇದು ತಿಳಿದು ಬಂದಿದೆ.

ಪ್ರಸಕ್ತ ದಿನ ಪ್ರತಿ ಟ್ರಿಪ್‌ನಲ್ಲಿ 45ರಿಂದ 50 ಲಕ್ಷದಷ್ಟು ಜನ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದಾರೆ. 2021ಕ್ಕೆ ಈ ಸಂಖ್ಯೆ 67 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

800 ಚದರ ಕಿ.ಮೀ ವಿಸ್ತೀರ್ಣವಿರುವ ಬೆಂಗಳೂರಿನಲ್ಲಿ 1.2 ಕೋಟಿ ಜನಸಂಖ್ಯೆ ಇದೆ. ನಗರ ಹಾಗೂ ಉಪನಗರಗಳಿಗೆ ಬಿಎಂಟಿಸಿ ಸೇವೆ ಒದಗಿಸುತ್ತಿದೆ. ಅತಿ ಹೆಚ್ಚು ಬಸ್‌ ಸೇವೆ ನೀಡುತ್ತಿರುವ ದೇಶದ ಎರಡನೇ ನಗರ ಇದಾಗಿದೆ. ಒಟ್ಟು 2,400 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, 6,400 ಬಸ್‌ಗಳನ್ನು ಹೊಂದಿದೆ.‌

ಎಲೆಕ್ಟ್ರಿಕ್‌ ಬಸ್‌ನಲ್ಲಿ ಬೆಂಗಳೂರು ಮೊದಲು: ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್‌ಚಾಲಿತ ಬಸ್‌ಗಳನ್ನು ಪರಿಚಯಿಸಿದ ಮೊದಲ ನಗರ ಎಂಬ ಹೆಗ್ಗಳಿಗೆ ಬೆಂಗಳೂರಿಗಿದೆ. ನಗರದ ವಾಯುಮಾಲಿನ್ಯ ‍ಪ್ರಮಾಣ ಹಾಗೂ ವೆಚ್ಚ ತಗ್ಗಿಸುವಲ್ಲಿ ವಿದ್ಯುತ್‌ಚಾಲಿತ ಬಸ್‌ಗಳು ಗಮನಾರ್ಹ ಕೊಡುಗೆ ನೀಡಲಿವೆ.

ದೆಹಲಿ, ಮುಂಬೈ, ನವಿ ಮುಂಬೈ ಹಾಗೂ ಲೂಧಿಯಾನದಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳ ಅಳವಡಿಕೆಗೆ ಕ್ರಮ ಕೈಗೊಂಡಿವೆ. 2014ರಲ್ಲಿಯೇ ಬಿಎಂಟಿಸಿ ಬಿವೈಡಿ ಬಸ್‌ಗಳ ಪ್ರಾಯೋಗಿಕ ಸಂಚಾರ ನಡೆಸಿತ್ತು. ಈಗಾಗಲೇ 150 ಬಸ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಇಲ್ಲಿನ ರಸ್ತೆಗಳ ಮೇಲೆ ಕಾಣಸಿಗಲಿವೆ.

ಸದ್ಯ ಸಾರಿಗೆ ಕ್ಷೇತ್ರದಿಂದ ಶೇ 68ರಷ್ಟು ಸಾರಜನಕದ ಆಕ್ಸೈಡ್‌ ಹಾಗೂ ಶೇ 42ರಷ್ಟು ಧೂಳಿನಕಣಗಳು ವಾತಾವರಣವನ್ನು ಸೇರುತ್ತಿದೆ. ಇದರಲ್ಲಿ ಬಸ್‌ಗಳ ಪಾಲು ಅತಿ ಹೆಚ್ಚು (ಶೇ 27ರಷ್ಟು) ಇದೆ. ಜೊತೆಗೆ ಹಸಿರುಮನೆ ಅನಿಲವನ್ನು (ಜಿಎಚ್‌ಜಿ) ಹೊರಸೂಸುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್‌ಚಾಲಿತ್‌ ಬಸ್‌ಗಳನ್ನು ಪರಿಚಯಿಸುವ ಮೂಲಕ ಇದನ್ನು ತಗ್ಗಿಸಬಹುದಾಗಿ ಎಂದು ವರದಿ ಹೇಳಿದೆ.

ಒಂದು ಡೀಸೆಲ್‌ ಬಸ್‌ ಬದಲಾಗಿ ಕೇವಲ ಒಂದು ವಿದ್ಯುತ್‌ಚಾಲಿತ ಬಸ್‌ ಬಳಸಿದರೆ, ಸುಮಾರು 25 ಟನ್‌ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಕಡಿಮೆಯಾಗಲಿದೆ. ಇದರ ಲಾಭಗಳಿಕೆಯೂ ಉತ್ತಮವಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂರು ತಿಂಗಳು ನಡೆಸಿದ ಪ್ರಾಯೋಗಿಕ ಸಂಚಾರದಲ್ಲಿ ಎಲೆಕ್ಟ್ರಿಕ್‌ ಬಸ್‌ ₹10,393 ಗಳಿಸಿದರೆ, ಡೀಸೆಲ್‌ ಬಸ್‌ ₹5,692 ಗಳಿಸಿತ್ತು.
**
ಪ್ರಯಾಣದರ ಕಡಿಮೆ
ಡೀಸೆಲ್‌ ಬಸ್‌ಗಳಿಗೆ ಹೋಲಿಸಿದರೆ, ವಿದ್ಯುತ್‌ಚಾಲಿತ ಬಸ್‌ಗಳ ಪ್ರಯಾಣದರವೂ ಕಡಿಮೆಯಾಗಲಿದೆ. ಉತ್ತಮ ಮೈಲೇಜ್‌ ನೀಡುವ ಈ ಬಸ್‌ನ ವೆಚ್ಚ ಹೆಚ್ಚಿರುವುದರಿಂದ ಒಮ್ಮೆಗೆ ಹೆಚ್ಚು ಬಸ್‌ಗಳನ್ನು ಖರೀದಿಸಲು ದುಬಾರಿಯಾಗುತ್ತದೆ. ಅಧಿಕ ಪ್ರಮಾಣದಲ್ಲಿ ಬಸ್‌ಗಳ ಬಳಕೆ ಪ್ರಾರಂಭವಾದರೆ, ದರವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಿದೆ.

**
ಅಂಕಿಅಂಶ

6,310
ಬಿಎಂಟಿಸಿ ಬಸ್‌ಗಳ ಸಂಖ್ಯೆ

801
ವೊಲ್ವೊ ಬಸ್‌ಗಳ ಸಂಖ್ಯೆ

11.89 ಲಕ್ಷ ಕಿ.ಮೀ
ಬಸ್‌ ಸಂಚಾರದ ವ್ಯಾಪ್ತಿ

74,697
ಪ್ರತಿದಿನದ ಬಸ್‌ ಟ್ರಿಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT