ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಯಲ್ಸ್‌ಗೆ ಜಯ

ಸಂಜು ಸ್ಯಾಮ್ಸನ್‌, ಬೆನ್ ಸ್ಟೋಕ್ಸ್‌ ಅಬ್ಬರ; ಮುಂಬೈ ಇಂಡಿಯನ್ಸ್‌ಗೆ ಸೋಲು
Last Updated 22 ಏಪ್ರಿಲ್ 2018, 20:26 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಸಂಜು ಸ್ಯಾಮ್ಸನ್ ಮತ್ತು ಬೆನ್ ಸ್ಟೋಕ್ಸ್ ಅವರ ಅಬ್ಬರ ಹಾಗೂ ಅಂತಿಮ ಓವರ್‌ಗಳಲ್ಲಿ ಕನ್ನಡಿಗ ಕೆ.ಗೌತಮ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿತು.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್‌ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು.

ಆರಂಭಿಕ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ (72; 47ಎ, 6ಬೌಂ, 3ಸಿ) ಮತ್ತು ಇಶಾನ್ ಕಿಶನ್ (58; 42ಎ, 4ಬೌಂ, 3ಸಿ) ಅವರ ಅರ್ಧಶತಕಗಳ ನೆರವಿನಿಂದ ಈ ತಂಡ ಹೋರಾಟದ ಮೊತ್ತ ಪೇರಿಸಿತು.

ಮೊದಲ ಓವರ್‌ನಲ್ಲಿಯೇ ತಂಡ ಆಘಾತ ಅನುಭವಿಸಿತ್ತು. ರಾಯಲ್ಸ್ ತಂಡದ ಮಧ್ಯಮವೇಗಿ ಧವಳ್ ಕುಲಕರ್ಣಿ ಅವರು ಎವಿನ್ ಲೂಯಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸಂಭ್ರಮಿಸಿದರು.

ಇನ್ನೊಂದು ಬದಿಯಲ್ಲಿದ್ದ ಸೂರ್ಯಕುಮಾರ್ ಅವರೊಂದಿಗೆ ಜೊತೆಗೂಡಿದ ಇಶಾನ್ ಕಿಶನ್ ರನ್‌ ಗಳಿಕೆ ಹೆಚ್ಚಿಸಿದರು.

ಇವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 129 ರನ್‌ಗಳನ್ನು ಸೇರಿಸಿದರು. ಎದುರಾಳಿ ಬೌಲರ್‌ಗಳ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ಇಬ್ಬರೂ ತಂಡವು ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

14 ಓವರ್‌ಗಳವರೆಗೂ ಇಬ್ಬರೂ ಪಾರಮ್ಯ ಮೆರೆದರು. 15ನೇ ಓವರ್‌ನಲ್ಲಿ ಇಶಾನ್ ಅವರು ಧವಳ್ ಕುಲಕರ್ಣಿ ಎಸೆತದಲ್ಲಿ ವಿಕೆಟ್‌ ಕೀಪರ್ ಜಾಸ್ ಬಟ್ಲರ್‌ಗೆ ಕ್ಯಾಚಿತ್ತರು.  16ನೇ ಓವರ್‌ನಲ್ಲಿ ಯಾದವ್ ಔಟಾದ ನಂತರ ಕೀರನ್ ಪೊಲಾರ್ಡ್‌ ಮಾತ್ರ 21 ರನ್‌ಗಳ ಕಾಣಿಕೆ ನೀಡಿದರು.

ನಾಯಕರ ರೋಹಿತ್ ಶರ್ಮಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಉಳಿದವರು ಎರಡಂಕಿ ಗಳಿಸಲಿಲ್ಲ. ಇದರಿಂದಾಗಿ ಹಾಲಿ ಚಾಂಪಿಯನ್ ಮುಂಬೈ ತಂಡವು ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಗುರಿ ಬೆನ್ನತ್ತಿದ ಆತಿಥೇಯ ರಾಯಲ್ಸ್‌ ತಂಡವು ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿತು.   ಅಜಿಂಕ್ಯ ರಹಾನೆ (ಬ್ಯಾಟಿಂಗ್ 1) ಮತ್ತು ರಾಹುಲ್ ತ್ರಿಪಾಠಿ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 (ಸೂರ್ಯಕುಮಾರ್ ಯಾದವ್ 72, ಇಶಾನ್ ಕಿಶನ್ 58, ಕೀರನ್ ಪೊಲಾರ್ಡ್ 21, ಧವಳ್ ಕುಲಕರ್ಣಿ 32ಕ್ಕೆ2, ಜೋಫ್ರಾ ಆರ್ಚರ್ 22ಕ್ಕೆ3; ಜಯದೇವ್ ಉನದ್ಕತ್ 31ಕ್ಕೆ1). ರಾಜಸ್ಥಾನ ರಾಯಲ್ಸ್‌: 19.4 ಓವರ್‌ಗಳಲ್ಲಿ 7ಕ್ಕೆ 168 (ಸಂಜು ಸ್ಯಾಮ್ಸನ್‌ 52, ಸ್ಟೋಕ್ಸ್‌ 40, ಕೆ.ಗೌತಮ್‌ 33; ಜಸ್‌ಪ್ರೀತ್ ಬೂಮ್ರಾ 28ಕ್ಕೆ2, ಹಾರ್ದಿಕ್‌ ಪಾಂಡ್ಯ 25ಕ್ಕೆ2).

ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ ಮೂರು ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಜೊಫ್ರಾ ಆರ್ಚರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT