ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಓಲಾ ಕ್ಯಾಬ್ ರದ್ದುಪಡಿಸಿದ ವಿಎಚ್‌ಪಿ ಸದಸ್ಯ: ಟ್ವಿಟರ್‌ನಲ್ಲಿ ವ್ಯಾಪಕ ಚರ್ಚೆ

Last Updated 23 ಏಪ್ರಿಲ್ 2018, 7:14 IST
ಅಕ್ಷರ ಗಾತ್ರ

ಲಖನೌ: ಚಾಲಕ ಮುಸ್ಲಿಂ ಆದ್ದರಿಂದ ಓಲಾ ಕ್ಯಾಬ್ ರದ್ದುಪಡಿಸಿದೆ ಎಂದು ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಸಂದೇಶ ಪ್ರಕಟಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

‘ಚಾಲಕ ಮುಸ್ಲಿಂ ಆದ್ದರಿಂದ ಓಲಾ ಕ್ಯಾಬ್ ಬುಕಿಂಗ್ ರದ್ದುಪಡಿಸಿದೆ. ನನ್ನ ಹಣವನ್ನು ಜಿಹಾದಿಗಳಿಗೆ ನೀಡಲು ಬಯಸುವುದಿಲ್ಲ’ ಎಂದು ಅಭಿಷೇಕ್ ಮಿಶ್ರಾ ಎಂಬ ವ್ಯಕ್ತಿ ಶುಕ್ರವಾರ (ಏಪ್ರಿಲ್ 20) ಟ್ವೀಟ್ ಮಾಡಿದ್ದರು. ಟ್ವೀಟ್ ಜತೆಗೆ ಓಲಾ ಕ್ಯಾಬ್ ಬುಕಿಂಗ್ ರದ್ದುಪಡಿಸಿದ ಸ್ಕ್ರೀನ್‌ಶಾಟ್‌ ಅನ್ನೂ ಪ್ರಕಟಿಸಿದ್ದರು. ಅದರಲ್ಲಿ ಚಾಲಕನ ಹೆಸರು ಮಸೂದ್ ಅಸ್ಲಾಂ ಎಂದು ಕಂಡುಬಂದಿದೆ.

ತಾನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಸಕ್ರಿಯ ಸದಸ್ಯ ಎಂದು ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅಭಿಷೇಕ್‌ ಹೇಳಿಕೊಂಡಿದ್ದಾರೆ. ವಿಎಚ್‌ಪಿಯ ಉತ್ತರ ಪ್ರದೇಶ ಘಟಕದ ಐಟಿ ಸೆಲ್‌ನ ಜವಾಬ್ದಾರಿ ನಿರ್ವಹಿಸುತ್ತಿರುವುದಾಗಿಯೂ ನಮೂದಿಸಿದ್ದಾರೆ. ಫೇಸ್‌ಬುಕ್‌ನಲ್ಲಿರುವ ಮಾಹಿತಿ ಪ್ರಕಾರ ಅಭಿಷೇಕ್‌ ಅಯೋಧ್ಯೆಯವರಾಗಿದ್ದು, ಲಖನೌನಲ್ಲಿ ಐಟಿ ಉದ್ಯೋಗಿ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಸಹ ಟ್ವಿಟರ್‌ನಲ್ಲಿ ಅಭಿಷೇಕ್‌ ಫಾಲೋವರ್ಸ್‌ಗಳಾಗಿದ್ದಾರೆ.

ಅಭಿಷೇಕ್ ಟ್ವೀಟ್‌ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು, ಅಭಿಷೇಕ್‌ಗೆ ಪ್ರಯಾಣಿಕನ ಪಟ್ಟಿಯಲ್ಲಿ ನಿಷೇಧ ಹೇರುವಂತೆ ಓಲಾವನ್ನು ಒತ್ತಾಯಿಸಿದ್ದಾರೆ.

‘ಜಾತ್ಯತೀತ ಸಂಸ್ಥೆ’: ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಓಲಾ, ‘ನಮ್ಮದು ಜಾತ್ಯತೀತ ಸಂಸ್ಥೆ. ಚಾಲಕರು ಮತ್ತು ಪ್ರಯಾಣಿಕರನ್ನು ನಾವು ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ತಾರತಮ್ಯದಿಂದ ನೋಡುವುದಿಲ್ಲ. ಎಲ್ಲರನ್ನೂ ಎಲ್ಲ ಸಮಯದಲ್ಲಿಯೂ ಗೌರವದಿಂದ ಕಾಣಬೇಕು ಎಂದು ನಮ್ಮ ಎಲ್ಲ ಪ್ರಯಾಣಿಕರು ಮತ್ತು ಚಾಲಕರನ್ನು ನಾವು ಆಗ್ರಹಿಸುತ್ತೇವೆ’ ಎಂದು ಹೇಳಿದೆ.

ಸಮರ್ಥನೆ: ಓಲಾ ಕ್ಯಾಬ್‌ಗಳಲ್ಲಿರುವ ಹನುಮಾನ್ ಚಿತ್ರವನ್ನು ತೆಗೆಸಬೇಕು ಎಂದು ಮಹಿಳೆಯೊಬ್ಬರು ಮಾಡಿರುವ ಫೇಸ್‌ಬುಕ್‌ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಪ್ರಕಟಿಸಿ ತನ್ನ ಕೃತ್ಯವನ್ನು ಅಭಿಷೇಕ್ ಸಮರ್ಥಿಸಿಕೊಂಡಿದ್ದಾರೆ. ‘ಇದನ್ನು ಒಪ್ಪಬಹುದಾದರೆ ನನ್ನ ಕ್ರಮವನ್ನು ಏಕೆ ಒಪ್ಪಿಕೊಳ್ಳಲಾಗದು’ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT