ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡ್ಕೊ ಕಾಲೊನಿ: ನೀರಿನ ಸಮಸ್ಯೆ ಉಲ್ಬಣ

ಮೂಲ ಸೌಕರ್ಯಗಳ ಕೊರತೆ: ನಗರಸಭೆ ಕಾರ್ಯವೈಖರಿಗೆ ನಿವಾಸಿಗಳ ಆಕ್ರೋಶ
Last Updated 23 ಏಪ್ರಿಲ್ 2018, 5:39 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ನವನಗರದ ಹುಡ್ಕೊ ಕಾಲೊನಿಯಲ್ಲಿ ಬಹುದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಹಿಳೆಯರು, ಮಕ್ಕಳು ನೀರಿಗಾಗಿ ಉರಿಬಿಸಿಲಿನಲ್ಲಿ ಅಲೆದಾಡಬೇಕಾದ. ಕುಡಿಯಲು ನೀರು ಕೊಡದ ಸ್ಥಳೀಯ ಆಡಳಿತದ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಇಲ್ಲಿನ ಮನೆಗಳಿಗೆ ನಳ ಅಳವಡಿಸಿಲ್ಲ. ಸಾರ್ವಜನಿಕ ನಳದಲ್ಲಿಯೇ ನೀರು ಹಿಡಿಯಬೇಕಿದೆ. ಕಾಲೊನಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿವೆ. 700 ಜನ ವಾಸವಾಗಿದ್ದಾರೆ. ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನಳಗಳ ಸಂಖ್ಯೆ ಕಡಿಮೆ ಇದ್ದು, ನೀರು ಬರುವ ಅವಧಿಯೂ ಕಡಿಮೆ. ಹಾಗಾಗಿ ನೀರಿಗಾಗಿ ಇಲ್ಲಿ ನಿತ್ಯ ಕೊಡಗಳ ಸಾಲು. ನಿವಾಸಿಗಳ ಹೋರಾಟ ಸಾಮಾನ್ಯ. ಈ ಬಗ್ಗೆ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯೂ ನೋಡದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕಾಲೊನಿ ನಿವಾಸಿ ರಾಜು ಶ್ರೀರಾಮ್ ದೂರುತ್ತಾರೆ.

‘ಪ್ರತಿದಿನ ನಮ್ಮ ಎಲ್ಲ ಕೆಲಸಕಾರ್ಯಗಳನ್ನು ಬದಿಗೊತ್ತಿ ನೀರಿಗಾಗಿ ಕಾಯುವುದು ಅನಿವಾರ್ಯ. ಕಾಲೊನಿ ನಿವಾಸಿಗಳ ಗೋಳು ಕೇಳುವವರಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ಬಂದು ವೋಟು ಕೇಳುವ ಇವರು ನಮ್ಮ ಕಷ್ಟವನ್ನು ಆಲಿಸುವುದಿಲ್ಲ. ಹೀಗಾಗಿ, ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿದಿಲ್ಲ. ನಿವಾಸಿಗಳ ಪಡಿಪಾಟಲು ತಪ್ಪಿಲ್ಲ’ ಎಂಬುದು ಹಜರತ್ ಬೀ ಹಾಗೂ ನೂರ್‌ಜಹಾನ್‌ ಅಳಲು ತೋಡಿಕೊಳ್ಳುತ್ತಾರೆ.

ಸಾರ್ವಜನಿಕ ನಳಗಳ ಸಂಖ್ಯೆ ಹೆಚ್ಚಿಸುವಂತೆ ಹಾಗೂ ನೀರು ಪೂರೈಕೆ ಅವಧಿ ಹೆಚ್ಚಿಸುವಂತೆ ನಗರಸಭೆಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಕಾಲೊನಿ ನಿವಾಸಿಗಳ ದೂರು.

ಇಲ್ಲಿ ನೀರಿನ ಸಮಸ್ಯೆ ಮಾತ್ರವಲ್ಲ ಚರಂಡಿ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಸಮಯಕ್ಕೆ ಸರಿಯಾಗಿ ಚರಂಡಿ ಸ್ವಚ್ಛಗೊಳಿಸದಿರುವುದರಿಂದ ಕೊಳಚೆ ನೀರು ಸಂಗ್ರಹವಾಗಿದೆ. ಇದರಿಂದ ಸೊಳ್ಳೆ ಹಾಗೂ ನೊಣಗಳ ಕಾಟ ಅಧಿಕವಾಗಿದೆ. ಹಂದಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ರೋಗ–ರುಜಿನಗಳು ಹರಡಲು ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಯಾರು ಕೂಡ ನಮ್ಮ ಕಾಲೊನಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಖಾಲಿ ಕೊಡಗಳೊಂದಿಗೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸುವ ಸ್ಥಳೀಯರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸುತ್ತಾರೆ.

ಮಹಾಂತೇಶ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT