ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಸೌಲಭ್ಯಕ್ಕಾಗಿ ಕಾದಿರುವ ಜನರು

ಅನಗೋಳ: 4ನೇ ವಾರ್ಡ್‌ನಲ್ಲಿ ಹತ್ತಾರು ಸಮಸ್ಯೆ, ಇಲ್ಲಿನ ನಿವಾಸಿಗಳ ಗೋಳು ಕೇಳೋರಿಲ್ಲ
Last Updated 23 ಏಪ್ರಿಲ್ 2018, 6:10 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ದಕ್ಷಿಣ ಭಾಗದ ಕೊನೆಯಲ್ಲಿರುವ ಅನಗೋಳದ ವ್ಯಾಪ್ತಿಯಲ್ಲಿರುವ 4ನೇ ವಾರ್ಡ್‌ ಜನರು ಸಮರ್ಪಕ ಮೂಲಸೌಲಭ್ಯಕ್ಕಾಗಿ ಇನ್ನೂ ಕಾಯುತ್ತಿದ್ದಾರೆ.

1970ರ ಅವಧಿಯಲ್ಲಿ ಅಭಿವೃದ್ಧಿಯ ಕನಸು ಕಂಡಿದ್ದ ಇಲ್ಲಿನ ಜನರಿಗೆ ಸೌಕರ್ಯಗಳು ಸಿಕ್ಕಿಲ್ಲ. ಸುಸಜ್ಜಿತ ರಸ್ತೆಗಳು, ಚರಂಡಿಗಳು ಇಲ್ಲದಿರುವುದೇ ಇಲ್ಲಿಯ ಪ್ರಮುಖ ಸಮಸ್ಯೆ. ನಗರವೂ ಅಲ್ಲದ, ಗ್ರಾಮವೂ ಅಲ್ಲದ ಅತಂತ್ರ ಸ್ಥಿತಿ ಇಲ್ಲಿದೆ.

ಜೋಡೆತ್ತುಗಳನ್ನು ಸಾಕಿ ಉಳುಮೆ ಮಾಡಲಾಗದ ಸ್ಥಿತಿಯಲ್ಲಿರುವ ರೈತರು ಪವರ್‌ ಟಿಲ್ಲರ್‌, ಮಿನಿ ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ನಡೆಸುತ್ತಿರುವುದಕ್ಕೆ ಇಲ್ಲಿನ ಗಲ್ಲಿಗಳಲ್ಲಿ ನಿಲ್ಲುವ ವಾಹನಗಳೇ ಸಾಕ್ಷಿಯಾಗಿವೆ. ನಗರೀಕರಣ ಕೈಬೀಸಿದ್ದರೂ ನಾಗರಿಕ ಸೌಲಭ್ಯಗಳ ಕೊರತೆ ಜನರನ್ನು ಕಾಡುತ್ತಿವೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಸೌಲಭ್ಯಗಳು ಇಲ್ಲ. ಪಕ್ಕದ ವಾರ್ಡ್‌ನಲ್ಲಿರುವ ಶಾಲೆಗಳು, ಫೌಂಡ್ರಿ ಉದ್ದಿಮೆಗಳು ಈ ವಾರ್ಡ್‌ನ ಜನರಿಗೆ ಆಸರೆಯಾಗಿವೆ. ವಾಸ ಇಲ್ಲಿ, ಕೂಲಿ ಕೆಲಸ ಅಲ್ಲಿ ಎನ್ನುವ ಸ್ಥಿತಿ ಇದೆ.

16 ಶೌಚಾಲಯಗಳನ್ನು ಒಂದೇ ಜಾಗದಲ್ಲಿ ನಿರ್ಮಿಸಿ, ಆ ಪ್ರದೇಶಕ್ಕೆ ನಿರ್ಮಲನಗರ ಎಂದು ಹೆಸರಿಡಲಾಗಿದೆ. ಆದರೆ, ಅದರ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಮಲಿನ ನಗರ ಎನ್ನುವಂತಾಗಿದೆ. ಮುಖ್ಯವಾಗಿ ನಿರ್ವಹಣೆ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕ ಶೌಚಾಲಯದ ಸುತ್ತಲಿನ ಭಾಗದ ವಾತಾರಣವೇ ಹಾಳಾಗಿದೆ ಎಂದು ಇಲ್ಲಿಯ ನಿವಾಸಿ ಅಸೀಫ್‌ ಬಾಬಲೆ ಹೇಳಿದರು.

ಹಲವು ವರ್ಷಗಳಿಂದ ಇಲ್ಲಿ 24X7 ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದೆ. ನೀರಿಗೆ ಕೊರತೆ ಇಲ್ಲ. ಆದರೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೇ ಇರುವುದರಿಂದ ಕೊಳಚೆ ಪ್ರದೇಶದಂತಾಗಿದೆ. ರೋಗ ಹರಡಲು ಸೊಳ್ಳೆಗಳು ಪೈಪೋಟಿ ನಡೆಸಿವೆ. ಅತ್ತ ಸಾರ್ವಜನಿಕ ಶೌಚಾಲಯದ ಬಳಿ ಹಂದಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.

‘ಮೂರು ದಶಕದ ಹಿಂದೆ ಹಾಕಲಾದ ಸಣ್ಣ ಪೈಪ್‌ಗಳ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮನೆಗಳ ಮುಂದೆ ನಿಲ್ಲುವುದರಿಂದ ಮಾಲಿನ್ಯ ಉಂಟು ಮಾಡುತ್ತಿದೆ’ ಎನ್ನುವುದು ಸೈಕಲ್‌ ಅಂಗಡಿಯ ರಾಜು ರಾಮೋಜಿ ಅವರ ಅಭಿಪ್ರಾಯ.

‘ಅಮೃತ್‌’ ಯೋಜನೆ ಕಾಮಗಾರಿ ಎರಡು ವಾರದಿಂದ ಆರಂಭವಾಗಿದೆ. ಬಾಬಲೆ ಗಲ್ಲಿ ಮುಖ್ಯ ವೃತ್ತ, 1ರಿಂದ 4ನೇ ಅಡ್ಡ ರಸ್ತೆಗಳನ್ನು ಅಗಿದು, ಮಣ್ಣನ್ನು ಗುಡ್ಡೆ ಹಾಕಲಾಗಿದೆ.

ಮಾರುತಿ ಮತ್ತು ವಿಠ್ಠಲ ದೇವರ ಮಂದಿರದ ಮುಂದಿನ 5.16 ಎಕರೆ ವ್ಯಾಪ್ತಿಯ ಸಾರ್ವಜನಿಕ ಕೆರೆಯನ್ನು ₹ 1 ಕೋಟಿಯಲ್ಲಿ ಅಭಿವೃದ್ಧಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಕೆರೆ ಮತ್ತಷ್ಟು ಪುನರುಜ್ಜೀವನಕ್ಕೆ ಕಾದಿದೆ.

ಇಲ್ಲಿಗೆ ಸಮೀಪದಲ್ಲಿ 26 ಎಕರೆ ವಿಸ್ತಾರದ ಕೆರೆ ಪುನರುಜ್ಜೀವನಗೊಂಡಿಲ್ಲ. ಅನೇಕ ಸಲ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ನಾರಾಯಣ ಪಾಟೀಲ.1975ರಿಂದ ಇಲ್ಲಿ ವಾಸವಾಗಿರುವ ಅನಂತ ಕಟಿಗೆನ್ನವರ, ‘ಆಗ ಅನೇಕ ಕಷ್ಟಗಳನ್ನು ಅನುಭವಿಸಿ ಜೀವನ ಕಟ್ಟಿಕೊಂಡಿದ್ದೇವೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಓಡಾಡಲು ಆಗದಂತಹ ಸ್ಥಿತಿ ಇತ್ತು. ಆಗಿನ ದಿನಗಳನ್ನು ನೆನೆದರೆ ಈಗ ಎಷ್ಟೋ ಸುಧಾರಣೆ ಆಗಿದೆ. ಕೆಲ ಗಲ್ಲಿಗಳ ಹಾಗೂ ಹೊಲಗದ್ದೆಗಳಿಗೆ ಹೋಗುವ ರಸ್ತೆಗಳ ಡಾಂಬರೀಕರಣ ಆಗಿದೆ. ನಿರಂತರ ನೀರು ಬಂದಿದೆ. ಆದರೂ ಸುತ್ತಲಿನ ವಾರ್ಡ್‌ಗಳನ್ನು ನೋಡಿದಾಗ ಗಲ್ಲಿಗಳು, ಚರಂಡಿಗಳು ಸುಧಾರಿಸಿಲ್ಲ ಎನಿಸುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿ ಜನರು ತಮ್ಮ ಜಾಗದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳಲು ಅನೇಕ ಅಡಚಣೆಗಳಿವೆ. ಪಾಲಿಕೆಯಿಂದ ಅನುಮತಿ ಸಿಗುವುದಿಲ್ಲ. ಅಭಿವೃದ್ಧಿ ತೆರಿಗೆ ತುಂಬಿದರೂ ವರ್ಷಗಟ್ಟಲೆ ಕಾಯಬೇಕು. ರಾಜಕಾರಣಿಗಳ ಪ್ರಭಾವ ಇಲ್ಲದಿದ್ದರೆ ಮನೆ ಕಟ್ಟಿಕೊಳ್ಳಲಾಗದು ಎಂದು ಹೇಳಿದರು.

ಪ್ರಗತಿ ಹಂತದ ಕಾರ್ಯಗಳು:
ಈ ವಾರ್ಡ್‌ದಲ್ಲಿ, 1980ಕ್ಕಿಂತ ಮೊದಲು ಗ್ರಾಮ ಪಂಚಾಯ್ತಿ ಇರುವಾಗ ಸಣ್ಣ ಪೈಪ್‌ಗಳ ಚರಂಡಿ ನಿರ್ಮಿಸಲಾಗಿತ್ತು. ಪಾಲಿಕೆಗೆ ಒಳಪಟ್ಟ ಬಳಿಕ ಅವುಗಳ ಬದಲಾವಣೆ ಆಗಿರಲಿಲ್ಲ. ಈಗ ಅಮೃತ್‌ ಯೋಜನೆಯಡಿ ಬಾಂದೂರ ಗಲ್ಲಿ, ಬಾಬಲೆ ಗಲ್ಲಿ, ನಾಥ ಪೈ ನಗರ, ಹನಮಣ್ಣವರ ಗಲ್ಲಿಗಳಲ್ಲಿ ಹೊಸ ಚರಂಡಿ, ರಸ್ತೆ ನವೀಕರಣ ಕಾರ್ಯ ಆರಂಭವಾಗಿದೆ. ನಿರ್ಮಲನಗರದ ಶೌಚಾಲಯ ನವೀಕರಣಕ್ಕೆ ₹ 6 ಲಕ್ಷ ಮಂಜೂರಾಗಿದೆ. ಬೀದಿದೀಪ ಅಳವಡಿಕೆ ನಡೆದಿದೆ.

ಗಾಂಧಿಸ್ಮಾರಕ ಬಸ್‌ ಮಾರ್ಗದ ಸಿಸಿ ರಸ್ತೆಗಾಗಿ ₹ 80 ಲಕ್ಷ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ನಗರಪಾಲಿಕೆ ಸದಸ್ಯ ಮೋಹನ ಬಾಂಧುರ್ಗೆ ಪ್ರತಿಕ್ರಿಯಿಸಿದರು.

ವಾರ್ಡ್‌ ವಾಪ್ತಿ
ಅನಗೋಳದ 4ನೇ ರೇಲ್ವೆ ಗೇಟ್‌, ಬಾಬಲೆ ಗಲ್ಲಿ ಸರ್ಕಲ್‌, ನಿರ್ಮಲನಗರ ಸಾರ್ವಜನಿಕ ಶೌಚಾಲಯ, ಮಾರುತಿ ಗಲ್ಲಿ, ಬಡಮಾಜ ನಗರ, ಗಾಂಧಿ ಸ್ಮಾರಕ ಬಸ್‌ ಮಾರ್ಗ, ಲೋಹಾರ ಗಲ್ಲಿ, ನಾಥ ಪೈ ನಗರ, ಜಾಧವ ಕಾಲೊನಿ, ಎಂ.ಐ. ಟ್ಯಾಂಕ್‌, ಅಂಗನವಾಡಿ, ಎಂ.ಬಿ. ಮರಗಾಳ ಮನೆ, ವಿಠ್ಠಲ– ಮಾರುತಿ ಮಂದಿರ.

**

ಮಳೆಗಾಲದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಿರ್ಮಲನಗರದ ಸಾರ್ವಜನಿಕ ಶೌಚಾಲಯದ ಸಮರ್ಪಕ ನಿರ್ವಹಣೆ ಮಾಡಬೇಕು. ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಬೇಕು – ಆಸೀಫ್‌ ಬಾಬಲೆ, ನಿವಾಸಿ.

**

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT