ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಲ್ಲದವರಿಗೆ ಕೂಡಿ ಬಂತು ಕಂಕಣ ಬಲ

ವಾಟ್ಸ್‌ಆ್ಯಪ್‌ ಗ್ರೂಪ್ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಮೂಕ ಜೋಡಿ
Last Updated 23 ಏಪ್ರಿಲ್ 2018, 6:27 IST
ಅಕ್ಷರ ಗಾತ್ರ

ಕೊಟ್ಟೂರು: ಅವರಿಬ್ಬರೂ ಮಾತು ಬಾರದವರು. ಖಾಸಗಿ ಕಂಪೆನಿ ಉದ್ಯೋಗಿಗಳು. ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಆದ ಪರಿಚಯ ಇಬ್ಬರನ್ನೂ ದಾಂಪತ್ಯಕ್ಕೆ ಕರೆತಂದಿತು.

ಹುಟ್ಟಿನಿಂದ ಮೂಕರಾಗಿರುವ ಪಟ್ಟಣದ ಮೈದೂರು ಅಶ್ವಿನಿ ಮತ್ತು ರಾಯಚೂರು ನಗರದ ಈಶ್ವರ  ದಾಂಪತ್ಯಕ್ಕೆ ಕಾಲಿಟ್ಟ ಜೋಡಿ. ಬನಶಂಕರಿ ಸಮುದಾಯ ಭವನದಲ್ಲಿ ಎರಡೂ ಕಡೆಯ ಪೋಷಕರು, ಬಂಧು ಮಿತ್ರರು ಸಮ್ಮುಖದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದರು. ಈ ಜೋಡಿಗೆ 70ಕ್ಕೂ ಹೆಚ್ಚು ಮೂಕ ಆತ್ಮೀಯರು ತಮ್ಮದೇ ಸಂಜ್ಞೆಯಲ್ಲಿ ಶುಭಾಶಯ ಕೋರಿ ಸಂಭ್ರಮಿಸಿದರು.

ತಮ್ಮನ್ನು ಬೆಸೆದ ವಾಟ್ಸ್‌ಆ್ಯಪ್‌ ಗ್ರೂಪ್ ಹಾಗೂ ಸ್ನೇಹಿತರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡು ಹರ್ಷಿಸಿದರು. ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ದಿ.ಮೈದೂರು ತಿಪ್ಪೇಸ್ವಾಮಿ, ರತ್ನಮ್ಮ ದಂಪತಿ 2ನೇ ಮಗಳು ಅಶ್ವಿನಿ. ಲಕ್ಷ್ಮೇಶ್ವರದ ಕಿವುಡ ಮೂಕರ ಶಾಲೆಯಲ್ಲಿ 10ನೇ ತರಗತಿ ತೇರ್ಗಡೆ ಹೊಂದಿ, ಬೆಂಗಳೂರಿನ ಸಮರ್ಥನಂ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದಿದ್ದಾರೆ. ಈಗ ಅಲ್ಲಿನ ಟೆಕ್ಸ್ ಪೋರ್ಟ್ ಓವರ್‌ಸೀಸ್ ಗಾರ್ಮೆಂಟ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಯಾರ ಸಹಾಯ ಇಲ್ಲದೆ ಚಿತ್ರಕಲೆ ಪ್ರತಿಭೆ ರೂಢಿಸಿಕೊಂಡಿರುವ ಈಕೆ ಅನೇಕ ಚಿತ್ರಗಳನ್ನು ಬಿಡಿಸುತ್ತಿದ್ದರು.

ರಾಯಚೂರು ನಗರದ ನ್ಯಾಯಾಂಗ ಇಲಾಖೆ ನಿವೃತ್ತ ನೌಕರ ತಿಪ್ಪಣ್ಣ, ಮಂಜುಳ ದಂಪತಿ ಮೊದಲ ಮಗ ಈಶ್ವರ. ಮೂಕನಾಗಿದ್ದರೂ ಧೃತಿಗೆಡದೇ ತಂದೆ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಕೊಡಿಸಿದ್ದರು. ಐಟಿಐ (ಎಲೆಕ್ಟ್ರಿಕಲ್) ತರಬೇತಿ ಹೊಂದಿ ಮೈಸೂರಿನ ಎಚ್‌ಆರ್‌ಬಿಎಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಮಕ್ಕಳ ಮದುವೆ ನೋಡಿ ಪೋಷಕರಲ್ಲಿ ಸಂಭ್ರಮ ಮನೆ ಮಾಡಿತ್ತು.

ವಾಟ್ಸ್‌ಆ್ಯಪ್‌ ಗ್ರೂಪ್ : ಈಶ್ವರ ಹಾಗೂ ಸ್ನೇಹಿತರು ಡೆಫ್ ಹೆಸರಿನಲ್ಲಿ, ಅಶ್ವಿನಿ ಸಂಗಡಿಗರು ಆಲ್ ದಿ ಫ್ರೆಂಡ್ಸ್ ಎಲ್‌ಎಕ್ಸ್‌ಆರ್ (ಲಕ್ಷ್ಮೇಶ್ವರ) ಹೆಸರಿನಲ್ಲಿ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್ ಹೊಂದಿದ್ದರು. ಗ್ರೂಪ್‌ನಲ್ಲಿ 120ಕ್ಕೂ ಹೆಚ್ಚು ಕಿವುಡ ಮೂಕರಿದ್ದಾರೆ. ಈ ಗ್ರೂಪ್‌ನಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ವಿಡಿಯೋ ಮೂಲಕ ತಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. 3 ತಿಂಗಳ ಹಿಂದೆ ಅಶ್ವಿನಿ ಬೆಂಗಳೂರಿಗೆ ಪ್ರಯಾಣಿಸುವಾಗ ಮತ್ತಿಬ್ಬರು ಮೂಕಿಯರು ಸ್ನೇಹಿತರಾಗಿ, ಡೆಫ್ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. ಇದರಲ್ಲಿ ಅಶ್ವಿನಿ, ಈಶ್ವರ ತಮ್ಮ ಸ್ವ ವಿವರ ಹಾಕಿದ್ದರು. ಈಶ್ವರನ ಸ್ವ ವಿವರ ನೋಡಿದ ಅಶ್ವಿನಿ ತಾಯಿ ರತ್ನಮ್ಮ ಮನೆಯ ಹಿರಿಯರೊಂದಿಗೆ ಚರ್ಚಿಸಿ ಈಶ್ವರ ತಂದೆ ತಾಯಿಗೆ ಮಗಳನ್ನು ನೋಡಲು ಬರುವಂತೆ ತಿಳಿಸಿದ್ದರು. ಎರಡೂ ಮನೆಯವರು ಒಟ್ಟಿಗೆ ಸೇರಿ ವಧು ವರ ಪರೀಕ್ಷೆ ನಡೆಸಿ ಮಾತುಕತೆ ನಡೆಸಿ ಮಕ್ಕಳ ಮದುವೆಗೆ ಮುಹೂರ್ತ ನಿಗದಿ ಮಾಡಿದ್ದರು.

**

ಅಶ್ವಿನಿ ಒಳ್ಳೆಯ ಚಿತ್ರಕಲೆ ಹೊಂದಿದ್ದಾಳೆ. ಗುಣವಂತೆ. ಅವಳ ಸ್ವ ವಿವರವನ್ನು ಮಗನ ಢೆಪ್ ಗ್ರೂಪ್‌ನಲ್ಲಿ ನೋಡಿ ಅವನ ಇಚ್ಛೆಯಂತೆ ಮದುವೆ ಮಾಡಿದ್ದೇವೆ. ಎರಡು ವಧು ಪರೀಕ್ಷೆ ನಡೆದಿದ್ದರೂ ಅವನು ಒಪ್ಪಿರಲಿಲ್ಲ. ಅಶ್ವಿನಿಗೆ ಬಾಳು ನೀಡಲು ನಿಶ್ಚಯಿಸಿದ. ತುಂಬಾ ಸಂತೋಷವಾಗಿದೆ – 
ತಿಪ್ಪಣ, ಮಂಜುಳ, ಈಶ್ವರ ತಂದೆ ತಾಯಿ, ರಾಯಚೂರು.

**

ಮಗಳು ಒಳ್ಳೆಯ ಚಿತ್ರಕಲೆ, ಜ್ಞಾಪಕ ಶಕ್ತಿ ಹೊಂದಿದ್ದಾಳೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಮಾತು ಬರುತ್ತಿಲ್ಲ ಎಂಬ ಕೊರತೆ ಬಿಟ್ಟರೆ ಮತ್ತೇನೂ ಇಲ್ಲ. ಅವಳ ಕಾಲ ಮೇಲೆ ನಿಂತಿದ್ದಾಳೆ. ತಾಯಿಯಾಗಿ ನನ್ನ ಕರ್ತವ್ಯ ಪೂರ್ಣಗೊಳಿಸಿದ ಸಂತೋಷ ನನಗಿದೆ – 
ಮೈದೂರು ರತ್ನಮ್ಮ, ಅಶ್ವಿನಿ ತಾಯಿ. ಕೊಟ್ಟೂರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT