ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆಗೆ ಅನುಮತಿ ಕಡ್ಡಾಯ

Last Updated 23 ಏಪ್ರಿಲ್ 2018, 6:40 IST
ಅಕ್ಷರ ಗಾತ್ರ

ಬೀದರ್: ‘ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮೆರವಣಿಗೆ ನಡೆಸಲು ಮಾದರಿ ನೀತಿ ಸಂಹಿತೆಯ ಅನುಸಾರ ಸಂಬಂಧಪಟ್ಟ ಅಧಿಕಾರಿ ಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ ಶ್ರವಣ್‌ ತಿಳಿಸಿದ್ದಾರೆ.

‘ಬೀದರ್‌, ಬಸವಕಲ್ಯಾಣ ಉಪವಿಭಾಗಾಧಿಕಾರಿ ಕಚೇರಿ, ಬೀದರ್‌. ಔರಾದ್, ಹುಮನಾಬಾದ್, ಹಾಗೂ ಭಾಲ್ಕಿ ತಹಶೀಲ್ದಾರ್‌ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರು ನಿಯಮ ಪಾಲಿಸಬೇಕು’ ಎಂದು ಹೇಳಿದ್ದಾರೆ.

‘ಚುನಾವಣಾಧಿಕಾರಿ ಕಚೇರಿ ಯೊಳಗೆ ಪ್ರವೇಶಿಸಲು ಅಭ್ಯರ್ಥಿ ಸೇರಿ ಕೇವಲ ಐದು ಜನರಿಗೆ ಮಾತ್ರ ಅವಕಾಶವಿದೆ. ಚುನಾವಣಾಧಿಕಾರಿಗಳ ಕಚೇರಿಯಿಂದ 100 ಮೀಟರ್ ಒಳಗಿನ ಆವರಣಕ್ಕೆ ಮೂರಕ್ಕಿಂತ ಹೆಚ್ಚಿನ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಮಾದರಿ ನೀತಿ ಸಂಹಿತೆಯನುಸಾರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದೆ ಯಾರೇ ವ್ಯಕ್ತಿ ಇಲ್ಲವೇ ಗುಂಪುಗಳು ಮೆರವಣಿಗೆ ನಡೆಸಬಾರದು’ ಎಂದು ತಿಳಿಸಿದ್ದಾರೆ.

‘ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ಹಿಂಪಡೆಯುವ ಸಂದರ್ಭದಲ್ಲಿ ಬೀದರ್‌ ಹಾಗೂ ಬಸವಕಲ್ಯಾಣದ ಉಪವಿಭಾಗಾಧಿಕಾರಿ ಕಚೇರಿ, ಬೀದರ್‌, ಔರಾದ್, ಹುಮನಾಬಾದ್ ಹಾಗೂ ಭಾಲ್ಕಿ ತಹಶೀಲ್ದಾರ ಕಚೇರಿಗಳಲ್ಲಿ ಬೆಳಗಿನ 11 ರಿಂದ ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ 100 ಮೀಟರ್ ಒಳಗಿನ ಆವರಣದಲ್ಲಿ ಐದಕ್ಕಿಂತ ಹೆಚ್ಚು ಜನರು ಒಟ್ಟುಗೂಡಿ ಪ್ರವೇಶಿಸಲು ಅವಕಾಶ ಇಲ್ಲ’ ಎಂದು ಹೇಳಿದ್ದಾರೆ.

‘ಪೊಲೀಸ್ ಹಾಗೂ ಪ್ಯಾರಾಮಿಲಿಟರಿ ಸಿಬ್ಬಂದಿ ಹೊರತುಪಡಿಸಿ, ಯಾರೇ ಆಗಲಿ ಮತಗಟ್ಟೆ ಆವರಣ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಕೆಲಸ ನಡೆಯುವ ಯಾವುದೇ ಕಚೇರಿಯ 100 ಮೀಟರ್ ಒಳಗಿನ ಆವರಣಕ್ಕೆ ಯಾವುದೇ ತರಹದ ಮಾರಕಾಸ್ತ್ರ ಕೊಂಡೊಯ್ಯಬಾರದು.  ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಆ ಪಕ್ಷಗಳ ಪ್ರತಿನಿಧಿಗಳು ಕಡ್ಡಾಯ ಅನುಸರಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT