ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಣ್ಮರೆ: ಸಾಂಕ್ರಾಮಿಕ ರೋಗದ ಭೀತಿ

ತಿಂಗಳಿಂದಲೂ ಕೊಳೆಯುತ್ತಿರುವ ಕಸ
Last Updated 23 ಏಪ್ರಿಲ್ 2018, 6:55 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಚರಂಡಿಗಳು ಗಬ್ಬು ನಾರುತ್ತಿವೆ. ಈಗ ಬೇಸಿಗೆ ಆರಂಭಗೊಂಡಿವುದರಿಂದ ನಾಗರಿಕರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ.

ನಗರಸಭೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತದೆ. ಆದರೆ, ಹಿಂದುಳಿದ ಪ್ರದೇಶಗಳಲ್ಲಿ ಕಸ ಸಂಗ್ರಹಣೆಗೆ ಒತ್ತು ನೀಡಿಲ್ಲ. ಇದರಿಂದ ನಗರದ ಯಾವುದೇ ವಾರ್ಡ್‌ಗಳಿಗೆ ಭೇಟಿ ನೀಡಿದರೂ ಕಸದ ರಾಶಿಗಳು ಎದ್ದುಕಾಣುತ್ತಿವೆ.

ಕಳೆದ ವರ್ಷ ಅನೈರ್ಮಲ್ಯ ಹಾಗೂ ಬೇಸಿಗೆ ವೇಳೆಯಲ್ಲಿ ಸುರಿದ ಆಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಡೆಂಗಿ, ಮಲೇರಿಯಾ, ಚಿಕನ್‌ಗುನ್ಯಾ ಹಾಗೂ ಜ್ವರ ಸಂಬಂಧಿತ ಕಾಯಿಲೆಗಳು ಉಲ್ಬಣಗೊಂಡು ಹಲವು ಜನರ ಪ್ರಾಣ ಕಸಿದುಕೊಂಡಿತ್ತು. ಪ್ರಸ್ತುತ ನಗರದಲ್ಲಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ದೂಳು, ಬಿಸಿಲಿನ ಝಳ ಹೆಚ್ಚಾಗಿದೆ. ಎಲ್ಲೆಡೆ ಅನೈರ್ಮಲ್ಯ ತಾಂಡವಾಡುತ್ತಿದೆ. ಜತೆಗೆ,  ಆಕಾಲಿಕ ಮಳೆ ಆಗುತ್ತಿದ್ದು, ಸಾರ್ವಜನಿಕರಲ್ಲಿ ಕಳೆದ ವರ್ಷದಂತೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಮೂಡಿಸಿದೆ.

‘ಜಿಲ್ಲಾ ಕೇಂದ್ರದ ವಿವಿಧೆಡೆ ಬಡಾವಣೆಗಳು ಅಭಿವೃದ್ಧಿ ಕಾಣುತ್ತಿವೆ. ಅಂತೆಯೇ ತ್ಯಾಜ್ಯ ವಿಲೇವಾರಿ ಕೂಡ ದೊಡ್ಡ ಸವಾಲಾಗಿದೆ. 7 ವರ್ಷ ಕಳೆದರೂ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಮುಖ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿವೆ. ಹಾಗಾಗಿ, ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹಗೊಂಡು ಕಲ್ಮಷ ನೀರು ಹೊರಹೋಗಲು ತೊಂದರೆಯಾಗುತ್ತಿದೆ. ಆದರೆ, ಚರಂಡಿ ಸ್ವಚ್ಛತೆಗೆ ನಗರಸಭೆ ಆಡಳಿತ ಮಾತ್ರ ಕ್ರಮ ಕೈಗೊಂಡಿಲ್ಲ’ ಎನ್ನುವುದು ನಾಗರಿಕರ ದೂರು.

‘ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರ ಬೆಳಿಗ್ಗೆ ತ್ಯಾಜ್ಯ ಸಂಗ್ರಹಿಸುವ ಕೆಲಸ ನಡೆಯುತ್ತದೆ. ಹಿಂದುಳಿದ ಬಡಾವಣೆಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುವುದಿಲ್ಲ. ಒಂದೆಡೆ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾ ಗುತ್ತಿವೆ. ಖಾಲಿ ನಿವೇಶನದಾರರಿಗೆ ಮನೆ ನಿರ್ಮಿಸಿ ಕೊಳ್ಳಬೇಕು ಅಥವಾ ಅದನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು ಎಂದು ನಗರಸಭೆ ಸೂಚಿಸುತ್ತಿಲ್ಲ. ಇದು ಕೂಡ ಅನೈರ್ಮಲ್ಯ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ನಗರದ ನಿವಾಸಿ ಮಹದೇವಪ್ಪ ದೂರಿದರು.

‘ಕೆಲವು ಬಡಾವಣೆಗಳಲ್ಲಿ ಮಾತ್ರ ಪೌರ ಕಾರ್ಮಿಕರು ಬೆಳಿಗ್ಗೆ ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸುತ್ತಾರೆ. ಆದರೆ, ಎಲ್ಲ ಬಡಾವಣೆಗಳಲ್ಲೂ ಇಂತಹ ವ್ಯವಸ್ಥೆಯಿಲ್ಲ. ಜತೆಗೆ, ಒಂದು ತಿಂಗಳು ಕಳೆದರೂ ಬಡಾವಣೆಗಳಿಗೆ ಬಂದು ತ್ಯಾಜ್ಯ ಸಂಗ್ರಹಿಸುವುದಿಲ್ಲ’ ಎಂದು ದೂರುತ್ತಾರೆ ಗಾಳೀಪುರದ ಮಹೇಶ್.

‘ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಂಡು ಪ್ರತಿದಿನ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಗೆ ನಗರಸಭೆ ಆಡಳಿತ ಕ್ರಮ ಕೈಗೊಳ್ಳಬೇಕು’ ಎನ್ನುವುದು ಅವರ ಒತ್ತಾಯ.

‘21ನೇ ವಾರ್ಡ್‌ನಲ್ಲಿ ಒಂದು ತಿಂಗಳ ಹಿಂದೆಯೇ ಚರಂಡಿಯಿಂದ ತ್ಯಾಜ್ಯ ತೆಗೆದು ರಸ್ತೆ ಬದಿಯಲ್ಲಿ ಹಾಕಿದ್ದಾರೆ. ಅದನ್ನು ಇನ್ನೂ ವಿಲೇವಾರಿ ಮಾಡಿಲ್ಲ. ಪೌರಕಾರ್ಮಿಕರು ವಾರ್ಡ್‌ನ ಪಕ್ಕದಲ್ಲಿಯೇ ಹೋಗುತ್ತಾರೆ ಅವರಿಗೆ ಬಂದು ಕಸ ತೆಗೆಯಿರಿ ಎಂದು ಹೇಳಿದರು ಅವರು ಬರುವುದಿಲ್ಲ’ ಎಂದು ಸವಿತಾ ಸಮಾಜದ ಮುಂಖಡರೊಬ್ಬರು ದೂರಿದರು.

**

ನಗರದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಶೀಘ್ರದಲ್ಲಿಯೇ ತೆರವುಗೊಳಿಸಲು ಕ್ರಮಕೈಗೊಳ್ಳುತ್ತೇನೆ - 
ಗಿರಿಜಾ,ನಗರಸಭೆ ಎಂಜಿನಿಯರ್‌.

**

ಎಸ್‌.ಪ್ರತಾಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT