ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರಸೆ’ ಬದಲಿಸಿದ ಗಂಗರೇಕಾಲುವೆ ನಾರಾಯಣಸ್ವಾಮಿ

‘ದಿಢೀರ್’ ಬೆಳವಣಿಗೆಯಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಮುಖಂಡ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ನಿರ್ಧಾರ
Last Updated 23 ಏಪ್ರಿಲ್ 2018, 7:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಈವರೆಗೆ ನಮ್ಮ ತಾಲ್ಲೂಕಿನಲ್ಲಿ ಕಾರ್ಖಾನೆಗಳಿಗಾಗಿ ಒಂದೇ ಒಂದು ಅಡಿಗಲ್ಲು ಹಾಕಿಲ್ಲ. ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಜತೆಗೆ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿ, ಹೂಳೆತ್ತಿ ನೀರು ತುಂಬುವುದು ನನ್ನ ಮುಖ್ಯ ಉದ್ದೇಶ. ಅದಕಷ್ಟೇ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎಂದು ಪಣ ತೊಟ್ಟಿರುವೆ. ಒಂದೊಮ್ಮೆ ಗೆದ್ದು ಬಂದರೆ ಖಂಡಿತ ಮಾತು ನಡೆಸಿಕೊಡುತ್ತೇನೆ’

–ನಿನ್ನೆ ಮೊನ್ನೆಯವರೆಗೆ ಹೋದಲೆಲ್ಲ ಇದೇ ರೀತಿ ಹೇಳುತ್ತ, ತಮ್ಮ ಬೆಂಬಲಿಗರೊಂದಿಗೆ ಹಳ್ಳಿಗಳನ್ನು ಸುತ್ತಾಡಿ, ಬೆಂಬಲಿಗರ ಸಭೆಗಳನ್ನು ಆಯೋಜಿಸಿದ್ದ ಕಾಂಗ್ರೆಸ್ ಮುಖಂಡ ಗಂಗರೇಕಾಲುವೆ ನಾರಾಯಣಸ್ವಾಮಿ ಅವರು ‘ದಿಢೀರ್’ ಬೆಳವಣಿಗೆಯಲ್ಲಿ ಭಾನುವಾರ ತಮ್ಮ ‘ವರಸೆ’ ಬದಲಿಸಿ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಈ ಚುನಾವಣೆಯಲ್ಲಿ ‘ಜೈಕಾರ’ ಹಾಕುವ ತೀರ್ಮಾನ ಘೋಷಿಸಿದ್ದಾರೆ.

ಕಾಂಗ್ರೆಸ್‌ನಲ್ಲೇ ಇದ್ದರೂ ಸುಧಾಕರ್ ಅವರ ಬಣದವರನ್ನು ಕಡುವೈರಿಗಳಂತೆ ಕಾಣುತ್ತಿದ್ದ ನಾರಾಯಣಸ್ವಾಮಿ, ತಮ್ಮ ಪ್ರತಿ ಕಾರ್ಯಕ್ರಮಗಳಿಗೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನು ಆಹ್ವಾನಿಸಿದರೂ ಶಾಸಕರ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲಿ ಇಬ್ಬರು ವೇದಿಕೆ ಹಂಚಿಕೊಳ್ಳುತ್ತಿರಲಿಲ್ಲ.

ಕಳೆದ ನವೆಂಬರ್‌ನಲ್ಲಿ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿ ಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತುಕೊಳ್ಳಲು ಕುರುಬ ಸಮುದಾಯ ಮುಖಂಡರೂ ಆದ ನಾರಾಯಣಸ್ವಾಮಿ ಅವರಿಗೆ ಶಿಷ್ಟಾಚಾರದ ಹೆಸರಿನಲ್ಲಿ ಅಧಿ ಕಾರಿಗಳು ಅವಕಾಶ ನಿರಾಕರಿಸಿದ್ದರು.

ಇದರಿಂದ ಆಕ್ರೋಶಗೊಂಡ ಕುರುಬ ಸಮುದಾಯದವರು ಕಾರ್ಯ ಕ್ರಮವನ್ನೇ ಬಹಿಷ್ಕರಿಸಿದರು. ಬಳಿಕ ಅಧಿಕಾರಿಗಳು ಖಾಲಿ ಕುರ್ಚಿಗಳು, ಬೆರಳೆಣಿಕೆ ಜನರ ನಡುವೆಯೇ ಕಾರ್ಯ ಕ್ರಮದ ‘ಶಾಸ್ತ್ರ’ ಮುಗಿಸಿದ್ದರು. ಅದೇ ವೇದಿಕೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕುಳಿತಿದ್ದ ಶಾಸಕರು ನಾರಾಯಣಸ್ವಾಮಿ ಅವರನ್ನು ವೇದಿಕೆಗೆ ಆಹ್ವಾನಿಸುವ ಸೌಜನ್ಯ ತೋರಿಸಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ನಾರಾಯಣಸ್ವಾಮಿ ಅವರು ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ಕೊಂಡಿರುವ ಕಾರಣಕ್ಕೆ ‘ರಾಜಕೀಯ ಷಡ್ಯಂತ್ರ’ದ ಭಾಗವಾಗಿ ಇಂತಹ ಕೆಲಸ ಗಳನ್ನು ಮಾಡಿಸಲಾಗುತ್ತಿದೆ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು.

ಅದೇ ತಿಂಗಳಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ, ‘ಚುನಾವಣೆಗೆ ಸ್ಪರ್ಧಿಸಬೇಕು ಎಂದು ಎಂಟು ತಿಂಗಳ ಹಿಂದೆಯೇ ನಿರ್ಧಾರ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಯಾರ ಸ್ವಂತ ಆಸ್ತಿಯಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ದಲ್ಲಿ ಯಾರಿಗೆ ಬೇಕಾದರೂ ಕಾಂಗ್ರೆಸ್ ಟಿಕೆಟ್‌ ಸಿಗಬಹುದು’ ಎಂದು ಹೇಳುವ ಮೂಲಕ ಕೂತೂಹಲ ಮೂಡಿಸಿದ್ದರು.

ಅಷ್ಟೇ ಅಲ್ಲದೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆಯಲು ಕಾಂಗ್ರೆಸ್ ವೀಕ್ಷಕರು ನಗರಕ್ಕೆ ಬಂದಾಗ ಮುಖಂಡರಾದ ಕೆ.ವಿ.ನವೀನ್ ಕಿರಣ್ ಹಾಗೂ ಗಂಗರೇಕಾಲುವೆ ನಾರಾಯಣ ಸ್ವಾಮಿ ಅರ್ಜಿ ಸಲ್ಲಿಸಲು ಹೋದ ವೇಳೆ ಶಾಸಕರು ಮತ್ತು ಇಬ್ಬರು ಮುಖಂಡರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಗುಂಪು ಚದುರಿಸಲು ಪೊಲೀಸರು ನಡೆ ಸಿದ ಲಾಠಿ ಪ್ರಹಾರದ ಘಟನೆಯಲ್ಲಿ ಚಾಮರಾಜಪೇಟೆಯ ಯುವಕನೊಬ್ಬ ಬಲಿಯಾಗಿದ್ದ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕರಷ್ಟೇ ಹೈಕಮಾಂಡ್‌ ಅಲ್ಲ. ಈ ಬಾರಿ ಹೈಕಮಾಂಡ್ ನನಗೆ ಟಿಕೆಟ್ ಭರವಸೆ ನೀಡಿದೆ. ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಚುನಾವಣೆ ನಿಲ್ಲುವುದಂತೂ ಖಚಿತ’ ಎಂದು ಹೇಳುತ್ತ ಬಂದಿದ್ದ ನಾರಾಯಣ ಅವರ ನಿಲುವು ಚುನಾವಣೆಯ ಕೊನೆಯ ಕ್ಷಣದಲ್ಲಿ ಬದಲಾದದ್ದು ಅವರ ಬೆಂಬಲಿಗರಿಗೆ ಇರುಸುಮುರುಸು ಉಂಟು ಮಾಡಿದೆ ಎನ್ನಲಾಗಿದೆ.

ದ್ರೋಹ ಬಗೆಯಲಾರೆ

ಈ ಕುರಿತು ನಾರಾಯಣ ಸ್ವಾಮಿ ಅವರನ್ನು ಕೇಳಿದರೆ, ‘ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದೇನೆ ಎಂದು ಈ ಹಿಂದೆ ಹೇಳಿದ್ದೆ ಹೊರತು ಪಕ್ಷೇತರನಾಗಿ ನಿಲ್ಲುತ್ತೇನೆ ಎಂದು ಹೇಳಿರಲಿಲ್ಲ. ಕಾಂಗ್ರೆಸ್ ನನ್ನ ತಾಯಿ ಇದ್ದಂತೆ. ಟಿಕೆಟ್ ಆಸೆ ಪಟ್ಟೆ ಆದರೆ ಅದು ಸಿಗಲಿಲ್ಲ ಎಂದು ತಾಯಿಗೆ ದ್ರೋಹ ಬಗೆಯಲು ಮನಸು ಬರಲಿಲ್ಲ. ಆದ್ದರಿಂದ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಿದೆ. ಸುಧಾಕರ್ ಮತ್ತು ನಾನು ಒಂದೇ ತಾಯಿ ಮಕ್ಕಳಂತೆ ಇರುತ್ತೇವೆ’ ಎಂದರು.

ಏಕಾಏಕಿ ಬದಲಾದ ಬಣ ನಿಷ್ಠೆ

ಈವರೆಗೆ ಕಾಂಗ್ರೆಸ್ ಮುಖಂಡರಾದ ಜಿ.ಎಚ್.ನಾಗರಾಜ್‌ ಮತ್ತು ನವೀನ್ ಕಿರಣ್‌ ಅವರ ಬಣದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಗಂಗರೇಕಾಲುವೆ ನಾರಾಯಣ ಅವರು ಇದೀಗ ಏಕಾಏಕಿ ಬಣ ಬದಲಿಸಿರುವುದು ರಾಜಕೀಯವಾಗಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಲು ಹೊರಟಿರುವ ನವೀನ್ ಕಿರಣ್ ಅವರನ್ನು ಕೇಳಿದರೆ, ‘ಈ ಕ್ಷೇತ್ರದಲ್ಲಿ ನನಗಿಂತಲೂ ಮೊದಲು ಶಾಸಕರು ಮತ್ತು ಭ್ರಷ್ಟಾಚಾರದ ವಿರೋಧ ಹೋರಾಡುತ್ತ ಬಂದಿದ್ದ ನಾರಾಯಣಸ್ವಾಮಿ ಅವರು ಸಹ ನಮ್ಮೊಂದಿಗೆ ಬರುತ್ತಾರೆ ಎಂದು ಆಸೆ ಇಟ್ಟುಕೊಂಡಿದ್ದೆವು. ಆದರೆ ಅವರು ಮುಖ್ಯಮಂತ್ರಿಗಳ ಒತ್ತಡವೋ ಅಥವಾ ಅಧಿಕಾರದ ಆಸೆಗೆ ಬಲಿಯಾಗಿ ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎನಿಸುತ್ತಿದೆ. ಇನ್ನು ಸಾಮಾನ್ಯ ವ್ಯಕ್ತಿಯ ಕಣ್ಣಲ್ಲಿ ಅವರ ವ್ಯಕ್ತಿತ್ವ ಪ್ರಶ್ನೆ ಮಾಡಬೇಕಾಗುತ್ತದೆ. ಯಾರೊಬ್ಬರೂ ಅವರಿಗೆ ಗೌರವ ಕೊಡುವುದಿಲ್ಲ’ ಎಂದು ತಿಳಿಸಿದರು.

**

ರಾಜಕಾರಣಿಗಳು ಊಸರವಳ್ಳಿ ಜಾತಿಯವರು. ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಬಣ, ಪಕ್ಷ ಬದಲಾಯಿಸುತ್ತಾರೆ. ತಮ್ಮ ನಾಯಕರಿಗಾಗಿ ನಾಯಿಯಂತೆ ಕಚ್ಚಾಡುವವರು ಇದನ್ನು ಅರಿತುಕೊಳ್ಳಬೇಕಿದೆ – ಸುಹಾಸ್, ಕಂದವಾರ ಬಾಗಿಲು ನಿವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT