ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಿದ ಬೃಹತ್‌ ಆಲದ ಮರ

‘ವಿಶ್ವ ಭೂಮಿ ದಿನ’ ಉರುಳಿಬಿದ್ದ ಮರ
Last Updated 23 ಏಪ್ರಿಲ್ 2018, 7:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಪುರಾತನವಾದ ಆಲದಮರ ಭಾನುವಾರ ಬೆಳಗಿನ ಜಾವ ಒಂದು ಕೊಂಬೆಯನ್ನು ಉಳಿಸಿ ಮುರಿದು ಬಿದ್ದಿದೆ. ಸಂಪೂರ್ಣ ಟೊಳ್ಳಾಗಿದ್ದ ಮರ ಎರಡು ದಿನದ ಹಿಂದೆ ಬೀಸಿದ ಗಾಳಿಗೆ ಬಿರುಕು ಬಿಟ್ಟು ನಿಧಾನವಾಗಿ ವಾಲುತ್ತಾ ನೆಲಕ್ಕೆ ಅಪ್ಪಳಿಸಿದೆ.

ಈ ಪುರಾತನವಾದ ಆಲದ ಮರ ಹಲವು ವೈಶಿಷ್ಠ್ಯಗಳಿಂದ ಕೂಡಿತ್ತು. ಈ ಆಲದ ಮರ ಒಮ್ಮೆಗೇ ಚಿಗುರುತ್ತಿರಲಿಲ್ಲ. ಮರದ ಒಂದು ಭಾಗ ಒಮ್ಮೆ ಚಿಗುರಿ ಹಣ್ಣು ಬಿಟ್ಟರೆ ಇನ್ನೊಂದು ಭಾಗ ಇನ್ನೊಮ್ಮೆ ಚಿಗುರುತ್ತಿತ್ತು.

ಬೆಂಗಳೂರು ರಸ್ತೆಯಲ್ಲಿ ಅಪ್ಪೇಗೌಡನಹಳ್ಳಿ ಗೇಟ್ ಬಳಿ ಇರುವ ಈ ಮರದ ಕೆಳಗೆ ಬಯಲಾಂಜನೇಯಸ್ವಾಮಿ ದೇವಾಲಯವಿದೆ. ಈ ಪುರಾತನ ಆಲದ ಮರದ ಬುಡದಲ್ಲಿ ಪ್ರಕೃತಿ ವಿಸ್ಮಯ ವೆಂಬಂತೆ ಗಣೇಶನ ಪ್ರತಿರೂಪ ಪೂರ್ವಾಭಿಮುಖವಾಗಿ ಉದ್ಭವಿಸಿದ್ದು ಅದಕ್ಕೂ ಪೂಜೆ ನಡೆಯುತ್ತದೆ.

ಪ್ರತಿ ವರ್ಷ ಶ್ರೀರಾಮ ನವಮಿಯಂದು ಇಲಿ ಉಟ್ಲು ಪರಿಷೆ ನಡೆಯುತ್ತದೆ. ಪೌರ್ಣಮಿಯಂದು ಸತ್ಯನಾರಾಯಣ ವ್ರತ ಆಚರಿಸಲಾಗುತ್ತದೆ. ಅಮಾವಾಸ್ಯೆಯಂದು ನಡೆಯುವ ಪೂಜೆ ಮತ್ತು ಭಜನೆ ಕಾರ್ಯಕ್ರಮಕ್ಕೆ ಮಳ್ಳೂರು, ಕಾಚಹಳ್ಳಿ, ಮುತ್ತೂರು, ಮೇಲೂರು, ಕಂಬದಹಳ್ಳಿ, ಚೌಡಸಂದ್ರ, ಬೆಳ್ಳೂಟಿ, ಗಂಗನಹಳ್ಳಿ, ನೆಲಮಾಕನಹಳ್ಳಿ, ಕೇಶವಪುರ, ಕೇಶವಾರ, ಹಂಡಿಗನಾಳ, ಹೊಸಹುಡ್ಯ, ಭಕ್ತರಹಳ್ಳಿ, ಜಂಗಮಕೋಟೆ, ಕಾಕಚೊಕ್ಕಂಡಹಳ್ಳಿ, ಕೊಂಡೇನಹಳ್ಳಿ, ಕಡೆಶೀಗನಹಳ್ಳಿ, ಕಣಿತಹಳ್ಳಿ ಹಾಗೂ ಶಿಡ್ಲಘಟ್ಟದಿಂದ ಭಕ್ತಾದಿಗಳು ಬರುವರು.

‘ಪ್ರತಿ ಅಮಾವಾಸ್ಯೆಯಂದು ಮತ್ತು ಶ್ರೀರಾಮ ನವಮಿಯಂದು ಅನ್ನಸಂತರ್ಪಣೆ ಇರುತ್ತದೆ. ಭಕ್ತಾದಿಗಳೇ ಮುಂದೆ ನಿಂತು ಎಲ್ಲ ಹಬ್ಬ ಹರಿದಿನಗಳಲ್ಲೂ ಉತ್ಸವ ಹಾಗೂ ವಿಶೇಷ ಪೂಜೆಗಳಿಗೆ ನೆರವಾಗುತ್ತಾರೆ. ಈ ಮರವು ಹಲವು ನೂರು ವರ್ಷಗಳಿಂದ ನೆರಳನ್ನು ನೀಡುತ್ತಾ ಈ ಭಾಗದ ಆಧ್ಯಾತ್ಮಿಕ ಕೇಂದ್ರವಾಗಿತ್ತು. ಮರ ಉರುಳಿರುವುದು ತುಂಬಲಾಗದ ನಷ್ಟ’ ಎಂದು ಅರ್ಚಕ ರಮೇಶ್ ಶರ್ಮ ತಿಳಿಸಿದರು.

‘ಆಲದ ಮರ ನೂರಾರು ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿತ್ತು. ಬಿಸಿಲಿನ ತಾಪ, ಮಳೆ, ಗಾಳಿಯಲ್ಲೂ ಇದು ನೆರಳಾಗಿ ವಿಶ್ರಾಂತಿ ತಾಣವಾಗಿತ್ತು. ವಿಶ್ವ ಭೂಮಿ ದಿನದಂದೆ ಈ ಮರ ಮುರಿದು ಬಿದ್ದಿರುವುದು ಹಸಿರು ಬೆಳೆಸಲು ನೀಡಿರುವ ಎಚ್ಚರಿಕೆ ಗಂಟೆಯಂತೆ ಇದೆ’ ಎಂಬುದು ಸ್ಥಳೀಯ ಪರಿಸರವಾದಿಗಳ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT