ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌.ಆರ್.ಪುರ: ಹೆಚ್ಚಿದ ವಾಹನ ದಟ್ಟಣೆ

ಸುಗಮ ಸಂಚಾರಕ್ಕೆ ಸಂಚಕಾರ ನೆನೆಗುದಿಗೆ ಬಿದ್ದ ರಸ್ತೆ ವಿಸ್ತರಣೆಯ ಕಾರ್ಯ
Last Updated 23 ಏಪ್ರಿಲ್ 2018, 7:23 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಖ್ಯ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೂ ರಸ್ತೆ ವಿಸ್ತರಣೆ ಮಾಡಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮುಖ್ಯ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೂ ರಸ್ತೆ ತುಂಬಾ ಕಿರಿದಾಗಿದ್ದು, 18 ಅಡಿ ಮಾತ್ರ ಅಗಲವಿದೆ, ಈ ರಸ್ತೆಯ ಮೂಲಕವೇ ಪ್ರವಾಸಿ ಮಂದಿರ, ಖಾಸಗಿ ಶಾಲಾ, ಕಾಲೇಜು, ಭಾರತದ ಆಹಾರ ನಿಗಮದ ಗೋದಾಮು, ದೇವಾಲಯ, ಚರ್ಚ್, ಗ್ಯಾಸ್ ಗೋದಾಮು, ರಾವೂರು, ಲಿಂಗಾಪುರ ಗ್ರಾಮಗಳಿಗೆ ಹೋಗುವ ಮಾರ್ಗವೂ ಇದಾಗಿದೆ. ಹಾಗಾಗಿ ವಾಹನ ದಟ್ಟಣೆಯಿಂದ ಕೂಡಿದ ಪ್ರದೇಶವಾಗಿರುವುದರಿಂದ ಪಾದಾಚಾರಿ ಮಾರ್ಗವೂ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳ ಓಡಾಟಕ್ಕೂ ಸಹ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

ಅಲ್ಲದೆ ಪಟ್ಟಣದ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿಯಿಂದ ಬಸ್ ನಿಲ್ದಾಣದವರೆಗೆ ರಸ್ತೆ ವಿಸ್ತರಣೆಯನ್ನು ಈಗಾಗಲೇ ಮಾಡಿದ್ದು, ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ಹಾಗೂ ಪಟ್ಟಣ ಪಂಚಾಯಿತಿಯಿಂದ ಸುಂಕದಕಟ್ಟೆವರೆಗೆ ರಸ್ತೆ ವಿಸ್ತರಣೆ ಕಾರ್ಯ ನಡೆದಿಲ್ಲ. ಇಲ್ಲಿ ಯಾವಾಗ ಬೇಕಾದರೂ ಸಹ ರಸ್ತೆ ವಿಸ್ತರಣೆಯಾಗಬಹುದೆಂಬ ಆತಂಕ ನಿವಾಸಿಗಳನ್ನು ಕಾಡುತ್ತಿದೆ.

ಬಸ್ ನಿಲ್ದಾಣದಿಂದ ಈ ಭಾಗದಲ್ಲಿ ರಸ್ತೆ ವಿಸ್ತರಣೆಯಾಗದಿರುವುದರಿಂದ ವಾಹನ ನಿಲುಗಡೆಗೆ ಸ್ಥಳವಕಾಶವಿಲ್ಲದಂತಾಗಿದ್ದು,  ವ್ಯಾಪಾರ ವಹಿವಾಟುಗಳು ಕುಸಿದಿದೆ ಎಂಬುದು ಕೆಲವು ಹೋಟೆಲ್ ಮಾಲೀಕರು ಹಾಗೂ ದಿನಸಿ ಮಾಲೀಕರ ಅಳಲು.

‘ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ವಿಸ್ತರಣೆ ಮಾಡಬೇಕೆಂಬ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಇಲ್ಲಿ ವಾಹನದಟ್ಟಣೆ ಅಧಿಕವಾಗಿರುವುದರಿಂದ ತುರ್ತು ರಸ್ತೆ ವಿಸ್ತರಣೆ ಮಾಡಬೇಕು. ಸಾಕಷ್ಟು ಬಡ ಕುಟುಂಬಗಳು ಇಲ್ಲಿ ವಾಸಿಸುತ್ತಿರುವುದರಿಂದ ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಧ್ರುವತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಕ್ಷೇತ್ರಾಧ್ಯಕ್ಷ ದೇವರಾಜ್.

ಪಟ್ಟಣದ ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರ ನೀಡಿ ಸರ್ಕಾರ ರಸ್ತೆ ವಿಸ್ತರಣೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಟೈಲರ್ ಗಿರೀಶ್.

ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೂ ರಸ್ತೆ ಸಾಕಷ್ಟು ಕಿರಿದಾಗಿರುವುದರಿಂದ ವಾಹನ, ಜನ ಎಲ್ಲರೂ ರಸ್ತೆಯ ಮೇಲೆ ಓಡಾಡುವ ಸ್ಥಿತಿಯಿದೆ. ರಸ್ತೆ ವಿಸ್ತರಣೆಯಾದರೆ ವಾಹನ ಸವಾರರಿಗೂ ಅನುಕೂಲವಾಗಲಿದೆ. ಊರಿನ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎನ್ನುತ್ತಾರೆ ಆಟೊ ಚಾಲಕ ವಿ.ಮಧುಸೂದನ್.

‘ಪಟ್ಟಣದ ವ್ಯಾಪ್ತಿಯಲ್ಲಿ ಸಾಕಷ್ಟು ಕಟ್ಟಡಗಳು ಹಳೇಯದಾಗಿರುವುದರಿಂದ ಕನಿಷ್ಠ 25ರಿಂದ 30 ಅಡಿ ರಸ್ತೆ ವಿಸ್ತರಣೆ ಮಾಡಿದರೆ ಸಮಸ್ಯೆಯಾಗುವುದಿಲ್ಲ. ಇದರ ಜತೆಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ’ ಎಂಬುದು ಸಾರ್ವಜನಿಕ ಅಭಿಪ್ರಾಯ.

**

ಈ ಹಿಂದೆ ಮುಖ್ಯಮಂತ್ರಿಗಳು ಎನ್‌.ಆರ್‌.ಪುರಕ್ಕೆ ಭೇಟಿ ನೀಡಿದ್ದಾಗ ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಬೇಕೆಂದು ಪಟ್ಟಣ ಪಂಚಾಯಿತಿಯಿಂದ ಮನವಿ ಸಲ್ಲಿಸಲಾಗಿತ್ತು – ಕುರಿಯಾಕೋಸ್ ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿ.

**

ಕೆ.ವಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT