ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್ ಯೋಜನೆ: ವಿವಿಧೆಡೆ ಉದ್ಯಾನ ಭಾಗ್ಯ

ಸಿ.ಕೆ.ಪುರ ಸಮೀಪ ಭರದಿಂದ ಸಾಗಿದೆ ನೂತನ ಉದ್ಯಾನದ ಕಾಮಗಾರಿ
Last Updated 23 ಏಪ್ರಿಲ್ 2018, 8:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಉದ್ಯಾನಗಳು ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ವಾಯು ವಿಹಾರ ಮಾಡಲು ಹಾಗೂ ಯುವಸಮೂಹದವರಿಗೆ ವ್ಯಾಯಾಮ, ಯೋಗಾಭ್ಯಾಸದಲ್ಲಿ ತೊಡಗಲು ನೆಚ್ಚಿನ ತಾಣ. ಈ ಕಾರಣದಿಂದಾಗಿ ಪ್ರತಿ ನಗರ – ಪಟ್ಟಣ ಪ್ರದೇಶಗಳಲ್ಲಿ ಇರಬೇಕಾದಂಥ ಮೂಲ ಸೌಲಭ್ಯಗಳಲ್ಲಿ ಇದೂ ಒಂದು...

ಉದ್ಯಾನಗಳು ಜನರ ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ ಮಾರ್ಪಟ್ಟಿವೆ. ನಗರ ಸೌಂದರ್ಯಕ್ಕೂ ಶೋಭೆ ತರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯ ಅನುದಾನದಲ್ಲಿ ನೂತನ ಮೂರು ಉದ್ಯಾನಗಳ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕೈದು ತಿಂಗಳೊಳಗೆ ಅಂದ – ಚೆಂದದೊಂದಿಗೆ ನಾಗರಿಕರಿಗೆ ನೆಮ್ಮದಿ, ನೆರಳು ನೀಡಲಿವೆ.

‘ಸಿ.ಕೆ.ಪುರ ಹೌಸಿಂಗ್ ಬೋರ್ಡ್‌ ಸಮೀಪ ನಿರ್ಮಾಣವಾಗುತ್ತಿರುವ ನೂತನ ಉದ್ಯಾನದ ಕಾಮಗಾರಿ ಈಗಾಗಲೇ ಭರದಿಂದ ಸಾಗಿದ್ದು, ಪಾರ್ಕ್ ಸುತ್ತಲೂ ಟೈಲ್ಸ್‌ ಅಳವಡಿಸಲಾಗುತ್ತಿದೆ. ಗಿಡ, ಮರ, ಸಸ್ಯ, ಪುಷ್ಪ ರಾಶಿಯೊಂದಿಗೆ ಸುಂದರ ಉದ್ಯಾನವಾಗಿ ರೂಪಿಸಲು ಸಂಬಂಧಪಟ್ಟ ಗುತ್ತಿಗೆದಾರರು ನಮ್ಮನ್ನು ಸಂಪರ್ಕಿಸಿದ್ದಾರೆ’ ಎಂದು ದಾವಣಗೆರೆಯ ಎನ್.ಆರ್.ಗಾರ್ಡನ್ ಲ್ಯಾಂಡ್ ಸ್ಕೇಪ್ ಡಿಸೈನರ್‌ನ ವಿ.ಕೆ.ನಾಗರಾಜ್ ತಿಳಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ನಗರ ವ್ಯಾಪ್ತಿಯಲ್ಲಿ ಸಿ.ಕೆ.ಪುರ ಹೌಸಿಂಗ್ ಬೋರ್ಡ್‌ ಸಮೀಪದ ಉದ್ಯಾನ ಸೇರಿ ರಾಜೇಂದ್ರ ನಗರ ಬಡಾವಣೆ ಹಾಗೂ ಐಯುಡಿಪಿ ಬಡಾವಣೆಯ ಆರನೇ ತಿರುವು ಸಮೀಪ ತಲಾ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲು ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಈ ಮೂರು ಕಡೆ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟ ಪರಿಶೀಲಿಸುವಂತೆ ನಗರಸಭೆಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯೂನಿಯನ್ ಪಾರ್ಕ್‌ನಲ್ಲಿ ₹ 77 ಲಕ್ಷ ವೆಚ್ಚದಲ್ಲಿ ಹಾಗೂ ಐಯುಡಿಪಿ ಬಡಾವಣೆಯ ಐದನೇ ತಿರುವಿನಿಂದ ಹನ್ನೊಂದನೇ ತಿರುವು ಮಾರ್ಗ ಮಧ್ಯೆ ₹ 73 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಅಂತಿಮವಾಗಿದ್ದರೂ ಚುನಾವಣೆ ಘೋಷಣೆಯಾದ ಬಳಿಕವಾದ್ದರಿಂದ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸಿಲ್ಲ ಎನ್ನುತ್ತಾರೆ ನಗರಸಭೆಯ ಸಹಾಯಕ ಎಂಜಿನಿಯರ್ ಆರ್. ಕೃಷ್ಣಮೂರ್ತಿ.

2020 ರೊಳಗೆ ಮುಗಿಸಲು ಗಡುವು: ‘ಅಮೃತ್ ಯೋಜನೆಯಡಿ ನಗರಸಭೆಗೆ 2016 – 17 ನೇ ಸಾಲಿನಲ್ಲಿ ಬಂದ ಅನುದಾನದಲ್ಲಿ ₹ 3 ಕೋಟಿಯನ್ನು ಉದ್ಯಾನ ನಿರ್ಮಾಣದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ನೀಡಿರುವ ಗಡುವು 2020 ಆಗಿದ್ದು, ಅದಕ್ಕಿಂತ ಮುಂಚಿತವಾಗಿಯೇ ನಾಗರಿಕರ ಅನುಕೂಲಕ್ಕಾಗಿ ಐದು ಕಡೆಗಳಲ್ಲಿ ಪಾರ್ಕ್‌ಗಳನ್ನು ನಿರ್ಮಿಸುತ್ತೇವೆ’ ಎನ್ನುತ್ತಾರೆ ಅವರು.

ಗುಣಮಟ್ಟದಿಂದ ಕೂಡಿರಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ದೇಶದ ವಿವಿಧೆಡೆ ಸುಂದರ ನಗರ ನಿರ್ಮಾಣಕ್ಕಾಗಿ ಅಮೃತ್ ಮತ್ತು ಸ್ಮಾರ್ಟ್‌ಸಿಟಿಯಂತಹ ಯೋಜನೆ ಜಾರಿಗೊಳಿಸಿದೆ. ಚಿತ್ರದುರ್ಗವೂ ಅಮೃತ್‌ಗೆ ಆಯ್ಕೆಯಾಗಿದ್ದು, ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಗುಣಮಟ್ಟದ ಉದ್ಯಾನ, 24 ಗಂಟೆ ಕುಡಿಯುವ ನೀರಿನ ಸೌಲಭ್ಯ, ಉತ್ತಮ ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸಿ.ಕೆ. ಪುರ ನಿವಾಸಿ ಮಂಜುನಾಥ್.

ಯಾವುದೇ ಉದ್ಯಾನವಾಗಲಿ ಮಕ್ಕಳಿಗೆ ಆಟವಾಡುವ ಉತ್ತಮ ತಾಣಗಳಾಗಬೇಕು. ವಿವಿಧ ವಯೋಮಾನದವರ ಹಾಗೂ ಹಿರಿಯರಿಗೆ ಸುಖ-ದುಃಖ ಹಂಚಿಕೊಳ್ಳಲು, ಹರಟೆಗೆ ಸೂಕ್ತ ಸ್ಥಳವಾಗಬೇಕು. ಆರೋಗ್ಯಕ್ಕೆ ಪೂರಕವಾದ ಎಲ್ಲ ರೀತಿಯ ಉತ್ತಮ ವಾತಾವರಣ ಹೊಂದಿರಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

‘ವಾಯುವಿಹಾರಿಗಳಿಗೆ, ಮಕ್ಕಳಿಗೆ, ಯುವಸಮೂಹಕ್ಕೆ ಅನುಕೂಲವಾಗುವ ಉದ್ಯಾನಗಳ ನಿರ್ಮಾಣಕ್ಕೆ ನಗರಸಭೆ ಮುಂದಾಗಬೇಕು ಎಂಬುದು ನಾಗರಿಕರ ಬಹುದಿನಗಳ ಬೇಡಿಕೆ ಆಗಿತ್ತು. ಈ ಕಾರಣದಿಂದಾಗಿ ಅಮೃತ್ ಯೋಜನೆಯಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ನಗರ ಹಸಿರೀಕರಣ ಆಗಬೇಕಾದರೆ, ಉದ್ಯಾನಗಳು ಅಗತ್ಯವಿದೆ. ಅದೇ ರೀತಿ ನಾಗರಿಕರು ತಮ್ಮ ಮನೆಗಳ ಮುಂದೆ ಒಂದೆರಡು ಗಿಡಗಳನ್ನು ನೆಟ್ಟು ಪೋಷಿಸಿ’ ಎಂದು ಮಂಜುನಾಥ್‌ ಗೊಪ್ಪೆ ಮನವಿ ಮಾಡಿದ್ದಾರೆ.

**

ನಗರಸಭೆ ಉದ್ಯಾನಗಳ ಅಭಿವೃದ್ಧಿಗೆ ಗಮನ ಹರಿಸಿದೆ. ಆದರೆ, ಸದ್ಯ ಐದು ಉದ್ಯಾನಗಳಿಗೆ ಮಾತ್ರ ವಿಶೇಷ ಅನುದಾನ ಲಭಿಸಿದೆ –
ನಲವಡಿ, ಪೌರಾಯುಕ್ತ, 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT