ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನುಗಳು ಆಂದೋ‌ಲನಗಳ ಫಲ

‘ಉದ್ಯೋಗಕ್ಕಾಗಿ ಯುವಜನರು’ ಸಮಾವೇಶದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ಡಾ.ಎಚ್‌.ವಿ.ವಾಸು
Last Updated 23 ಏಪ್ರಿಲ್ 2018, 8:32 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದ ಹೋರಾಟಗಳ ಫಲವಾಗಿ, ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಿವೆ. ಯಾವ ರಾಜಕೀಯ ಪಕ್ಷಗಳು ಸ್ವಯಂಪ್ರೇರಿತರಾಗಿ ಜಾರಿ ಮಾಡಿಲ್ಲ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ಡಾ.ಎಚ್‌.ವಿ.ವಾಸು ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.

8 ಗಂಟೆ ಮಾತ್ರ ದುಡಿಯುವ ಹೋರಾಟ ನಡೆದಿದ್ದು ಅಮೆರಿಕಾದಲ್ಲಿ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ರಚನೆಗೆ ಹೋರಾಟ ನಡೆದಿದ್ದು ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ. ಆದರೆ, ಹೋರಾಟದ ಫಲ ಮಾತ್ರ ಪ್ರತಿಯೊಬ್ಬರಿಗೂ ಲಭ್ಯವಾಯಿತು. ಆಂದೋಲನಗಳಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.

ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಲ್ಲಿದ್ದರೂ ಮಾಲೀಕರ ಹಾಗೂ ಸರ್ಕಾರಗಳ ಒಳ ಒಪ್ಪಂದದಿಂದಾಗಿ ಕಾನೂನುಗಳು ಪಾಲನೆಯಾಗುತ್ತಿಲ್ಲ. ಸರ್ಕಾರ ಕಾಯ್ದೆಗಳನ್ನೇ ಸಡಿಲಗೊಳಿಸುವ ಮೂಲಕ ಬಂಡವಾಳಶಾಯಿಗಳ ಪರವಾಗಿ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕರ ನೇಮಕಾತಿ ಸಂಬಂಧ 1946ರಲ್ಲಿ ‘ಇಂಡಸ್ಟ್ರಿಯಲ್‌ ಎಂಪ್ಲಾಯ್‌ಮೆಂಟ್‌ ಸ್ಟ್ಯಾಂಡಿಂಗ್ ಆರ್ಡರ್ ಆ್ಯಕ್ಟ್‌’ ಜಾರಿಗೆ ತರಲಾಯಿತು. ಅಂದಿನ ಕಾರ್ಮಿಕ ಸಚಿವರಾಗಿದ್ದ ಅಂಬೇಡ್ಕರ್ ಇದನ್ನು ಜಾರಿಗೆ ತಂದಿದ್ದರು. ಈ ಕಾಯ್ದೆಯ ಪ್ರಕಾರ ಕಾರ್ಮಿಕರನ್ನು ಬೇಕೆಂದಾಗ ಕೆಲಸದಿಂದ ತೆಗೆಯುವಂತಿಲ್ಲ. ಹುದ್ದೆಗಳಿಗೆ ಭದ್ರತೆ ಇತ್ತು.

ಆದರೆ, ಕೇಂದ್ರ ಸರ್ಕಾರ ಕಳೆದ ಫೆಬ್ರುವರಿ 16ರಂದು ಈ ಕಾಯ್ದೆಗೆ ತಿದ್ದುಪಡಿ ತಂದು ‘ನಿಗದಿತ ಅವಧಿಯ ಉದ್ಯೋಗ’ ಎಂಬ ನಿಯಮವನ್ನು ಸೇರಿಸಿದೆ. ಇದರ ಅನ್ವಯ ಯಾವುದೇ ಕ್ಷೇತ್ರದಲ್ಲಿ ಸೀಮಿತ ಅವಧಿಗೆ ಮಾತ್ರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು. ಯಾವುದೇ ಸಂದರ್ಭ ಅವರನ್ನು ಕೆಲಸದಿಂದ ಕಿತ್ತುಹಾಕಬಹುದು. ಕೆಲಸ ಬಿಟ್ಟಾಗ ಯಾವುದೇ ಸೌಲಭ್ಯಗಳೂ ದೊರೆಯುವುದಿಲ್ಲ. ಈ ತಿದ್ದುಪಡಿ ಭವಿಷ್ಯದಲ್ಲಿ ದೊಡ್ಡ ಆತಂಕವನ್ನು ತಂದೊಡ್ಡಲಿದೆ ಎಂದರು.

ಸರ್ಕಾರದ ಪ್ರತಿಯೊಂದು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಸರ್ಕಾರ ಕೂಡ ಕಾರ್ಮಿಕ ಕಾನೂನುಗಳ ಪರವಾಗಿ ನಿಲ್ಲುತ್ತಿಲ್ಲ. ಈ ಸಮಸ್ಯೆಗೆ ಎಲ್ಲರೂ ಸಂಘಟಿತರಾಗಿ ಪರಿಹಾರ ಹುಡುಕಿಕೊಳ್ಳಬೇಕಿದೆ ಎಂದರು.

ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಕಸಿಯುವಂತಹ ಕೆಲಸವನ್ನು ಜನಪ್ರತಿನಿಧಿಗಳೇ ಮಾಡುತ್ತಿರುವುದು ದುರಂತ. ಅವರಿಗೆಲ್ಲ ಚುನಾವಣೆಯಲ್ಲಿ ಪಾಠ ಕಲಿಸಬೇಕು. 2018ರ ವಿಧಾನಸಭಾ ಚುನಾವಣೆಯನ್ನು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ವೇದಿಕೆಯನ್ನಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

‘ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗ ಭದ್ರತೆಯ ಖಾತ್ರಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲೇಬೇಕು. ಇಲ್ಲವಾದರೆ, ದೇಶದಲ್ಲಿ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿ ಇಲ್ಲ. ಜೀತ ಪದ್ಧತಿ ಜಾರಿಯಲ್ಲಿದೆ ಎಂದು ಸರ್ಕಾರಗಳು ಬಹಿರಂಗವಾಗಿ ಒಪ್ಪಿಕೊಳ್ಳಲಿ’ ಎಂದು ವಾಸು ಸವಾಲು ಹಾಕಿದರು.

ವಕೀಲ ಎಸ್‌.ಜಗನ್ನಾಥ್‌ ಮಾತನಾಡಿ, ‘ಚುನಾವಣೆಗೂ ನಮಗೂ ಸಂಬಂಧವಿಲ್ಲ ಎಂದು ಮನೆಯಲ್ಲಿ ಕುಳಿತರೆ ಬದಲಾವಣೆ ಸಾಧ್ಯವಿಲ್ಲ. ಉದ್ಯೋಗ ಕೊಡುವವರಿಗೆ ಹಾಗೂ ಉದ್ಯೋಗ ಭದ್ರತೆ ನೀಡುವವರಿಗೆ ಮಾತ್ರ ಮತ ಹಾಕುತ್ತೇವೆ ಎಂಬ ದೃಢ ಸಂಕಲ್ಪ ತಾಳಬೇಕು’ ಎಂದು ಸಲಹೆ ನೀಡಿದರು.

ಎಲ್ಲ ಕ್ಷೇತ್ರಗಳಲ್ಲೂ ಗುತ್ತಿಗೆ ನೌಕರರನ್ನು 2ನೇ ದರ್ಜೆಯ ನೌಕರರನ್ನಾಗಿ ನೋಡಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಆತ್ಮಗೌರವ ಸಿಗುತ್ತಿಲ್ಲ. ಮತದಾನ ಎಂಬ ಅಸ್ತ್ರವನ್ನು ಬಳಸಿಕೊಂಡು ಈ ತಾರತಮ್ಯವನ್ನು ನಿವಾರಿಸಿಕೊಳ್ಳಬೇಕಿದೆ ಎಂದರು.

ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ‘ಧರ್ಮ ಜಾತಿ, ಹಣ, ಹೆಂಡದಿಂದ ರಾಜಕಾರಣಿಗಳು ಮತದಾರರನ್ನು ಮರುಳು ಮಾಡುತ್ತಿದ್ದಾರೆ. 70 ವರ್ಷ ಮತ ಮಾರಿಕೊಂಡಿದ್ದು ಸಾಕು. ಅಪಾಯದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಾದರೂ ರಕ್ಷಿಸೋಣ’ ಎಂದರು.

ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮಿ, ಸತೀಶ್‌ ಅರವಿಂದ್, ಎನ್‌.ಸಿ.ಹಾಲಸ್ವಾಮಿ, ಎಸ್‌.ಶ್ರುತಿ ಇದ್ದರು.

‘ಅಭಿಯಾನ ಕೈಗೊಳ್ಳಿ’

‘ನಾವು ಜಾತಿ, ಧರ್ಮ, ಆಮಿಷಕ್ಕೆ ಬಲಿಯಾಗಿ ಮತ ಹಾಕುವುದಿಲ್ಲ. ದೇಶವನ್ನು ಕಟ್ಟುವ ವ್ಯಕ್ತಿಗೆ ನಿಜವಾದ ಅಭಿವೃದ್ಧಿ ಮಾಡುವವರಿಗೆ, ಪ್ರತಿಯೊಬ್ಬರಿಗೂ ಸುಭದ್ರ ಉದ್ಯೋಗ ನೀಡುವ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ಎಲ್ಲರೂ ಸಂಕಲ್ಪ ಮಾಡಿ. ಈ ಬರಹವನ್ನು ಮನೆಯ ಗೇಟ್‌ ಮುಂಭಾಗದಲ್ಲಿ ಹಾಕಿದರೆ ಖಂಡಿತ ಬದಲಾವಣೆ ಸಾಧ್ಯ’ ಎಂದು ಡಾ.ವಾಸು ಸಲಹೆ ನೀಡಿದರು.ಮನೆ ಮನೆಗೆ ಮತ ಯಾಚಿಸಲು ರಾಜಕಾರಣಿಗಳು ಬಂದಾಗ ಬೇಡಿಕೆಗಳನ್ನು ಈಡೇರಿಸುವ ಪಕ್ಷಕ್ಕೆ ಮಾತ್ರ ಮತ ಹಾಕುತ್ತೇವೆ ಎಂದು ಧೈರ್ಯವಾಗಿ ಹೇಳಿ. ಅಕ್ಕಪಕ್ಕದವರಿಗೂ ತಿಳಿಹೇಳಿ ಎಂದರು.

ಪ್ರಧಾನಿಗೆ ಮನವಿ

ಏಪ್ರಿಲ್‌ 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿನೀಡುವ ಸಾಧ್ಯತೆಗಳಿವೆ. ಈ ಸಂದರ್ಭ ‘ಇಂಡಸ್ಟ್ರಿಯಲ್‌ ಎಂಪ್ಲಾಯ್‌ಮೆಂಟ್‌ ಸ್ಟ್ಯಾಂಡಿಂಗ್ ಆರ್ಡರ್ ಆ್ಯಕ್ಟ್‌’ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ 2019ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಡಾ.ವಾಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT