ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರಿಗೆ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯ

ಕೋರ್ಟ್‌ ಮಂಜೂರು ಮಾಡಲು ಕ್ರಮ: ನ್ಯಾಯಾಧೀಶ ಹೊಸಗೌಡರ್
Last Updated 23 ಏಪ್ರಿಲ್ 2018, 8:41 IST
ಅಕ್ಷರ ಗಾತ್ರ

ಜಗಳೂರು: ಜಗಳೂರು ತಾಲ್ಲೂಕಿನ ಬಹುದಿನಗಳ ಬೇಡಿಕೆಯಾಗಿರುವ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಅಶ್ರಯದಲ್ಲಿ ಈಚೆಗೆ ಅಯೋಜಿಸಿದ್ದ ಲೋಕ್ ಅದಾಲತ್ ಪೂರ್ವಭಾವಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಭಾಗದ ಕಕ್ಷಿದಾರರ ಹಿತದೃಷ್ಟಿಯಿಂದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆಗಾಗಿ ವಕೀಲರು ಬೇಡಿಕೆ ಸಲ್ಲಿಸಿರುವುದು ಸಮಂಜಸವಾಗಿದೆ. ನ್ಯಾಯಾಲಯ ಮಂಜೂರಾತಿಗಾಗಿ ಹೈಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಿವಿಲ್ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡ ಮತ್ತು ಪೀಠೋಪಕರಣ ಹಾಗೂ ಇತರ ಮೂಲ ಸೌಕರ್ಯ ಇಲ್ಲಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಲಯ ಸ್ಥಾಪನೆಗೆ ವಿಳಂಬ ಮಾಡುವ ಅಗತ್ಯವಿಲ್ಲ. ನ್ಯಾಯಾಲಯಕ್ಕೆ ತ್ವರಿತವಾಗಿ ಚಾಲನೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

‘ನಾನು ಇಂದು ಜಿಲ್ಲಾ ನ್ಯಾಯಾಧೀಶನಾಗುವ ಹಂತಕ್ಕೆ ಬೆಳವಣಿಗೆ ಹೊಂದಲು ಜಗಳೂರಿನ ನಾಲಂದ ಕಾಲೇಜು ಹಾಗೂ ಇಲ್ಲಿನ ಸಾಂಸ್ಕೃತಿಕ, ಸಾಹಿತಿಕ ಪರಿಸರ ಮುಖ್ಯ ಕಾರಣ. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರ  ಚಳವಳಿಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಹಾಗೂ ಅಂದಿನ ಕಾಲಘಟ್ಟದಲ್ಲಿ ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಟಿ. ತಿಪ್ಪೇಸ್ವಾಮಿ ಅವರ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದೆ. ಹೀಗಾಗಿ ನಾನು ವಕೀಲನಾಗಿ ಹಾಗೂ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಲು ಕಾರಣ’ ಎಂದು ಸ್ಮರಿಸಿದರು.

ಲೋಕ್‌ಅದಾಲತ್‌ಗಳಲ್ಲಿ ರಾಜೀ ಸಂದಾನಗಳ ಮೂಲಕ ವ್ಯಾಜ್ಯಗಳು ಇತ್ಯರ್ಥ ಆಗುವುದರಿಂದ ಹೆಚ್ಚು ಜನರು ನ್ಯಾಯ ಪಡೆಯುವುದಕ್ಕಾಗಿ ನ್ಯಾಯಾಲಯಗಳಿಗೆ ಬರಲು ಅವಕಾಶ ಸಿಗುತ್ತದೆ ಎಂದು ಹೇಳಿದರು.

ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಂ. ಮಹೇಂದ್ರ ಮಾತನಾಡಿ, ‘ಕಳೆದ ಬಾರಿ ನಡೆದ ಲೋಕ್‌ ಅದಾಲತ್‌ನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಜಗಳೂರಿನ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದೆ. ಇಲ್ಲಿನ ವಕೀಲರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಚ್. ಬಸವರಾಜ್ ಶೆಟ್ಟಿಗೊಂಡನಹಳ್ಳಿ, ಕೆ.ಎನ್. ಪರಮೇಶ್ವರಪ್ಪ, ಟಿ. ಸ್ವಾಮಿ, ಬಿ. ಶರಣಪ್ಪ, ಕೆ.ಎಂ. ಬಸವರಾಜಪ್ಪ, ಎಸ್. ಹಾಲಪ್ಪ ಇದ್ದರು.

ಇದಕ್ಕೂ ಮುನ್ನ ಪಟ್ಟಣದಿಂದ ನ್ಯಾಯಾಲಯ ಸಂಕೀರ್ಣಕ್ಕೆಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಹಾಗೂ ನೆಡುತೋಪಿಗೆ ಜಿಲ್ಲಾ ನ್ಯಾಯಾಧೀಶರು ಚಾಲನೆ ನೀಡಿದರು. ಮುಖ್ಯಾಧಿಕಾರಿ ಅಮರೇಶ್, ಎಂಜಿನಿಯರ್ ಶ್ರೀನಿವಾಸ್ ಕಾನಾಮಡಗು ಕೆರೆ, ಸಿಪಿಐ ಬಿ.ಕೆ. ಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT