ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆಗೆ ನಾವು; ಟಿಕೆಟ್‌ ಬೇರೆಯವರಿಗೆ’

ಕಾಂಗ್ರೆಸ್‌–ಬಿಜೆಪಿ ಧೋರಣೆ
Last Updated 23 ಏಪ್ರಿಲ್ 2018, 11:33 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಬಿಲ್ಲವರ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ನೀಡಿಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನಿಂದ ನಾಲ್ವರು ಅಲ್ಪಸಂಖ್ಯಾತರು, ಇಬ್ಬರು ಬಂಟರು, ಒಬ್ಬರು ಪರಿಶಿಷ್ಟ ಜಾತಿ, ಒಬ್ಬರು ಬಿಲ್ಲವರನ್ನು ಕಣಕ್ಕೆ ಇಳಿಸಲಾಗಿದೆ. ಇತ್ತ ಬಿಜೆಪಿಯಿಂದ ನಾಲ್ವರು ಬಂಟರು, ಬಿಲ್ಲವ, ಗೌಡ ಸಾರಸ್ವತ ಬ್ರಾಹ್ಮಣ, ಪರಿಶಿಷ್ಟ ಜಾತಿ, ಒಕ್ಕಲಿಗ ಸಮುದಾಯದ ತಲಾ ಒಬ್ಬರಿಗೆ ಟಿಕೆಟ್‌ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಲ್ಲವ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದಾಗ್ಯೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತಲಾ ಒಂದು ಕ್ಷೇತ್ರಕ್ಕೆ ಮಾತ್ರ ಬಿಲ್ಲವರಿಗೆ ಅವಕಾಶ ನೀಡಿವೆ. ಈ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ನಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಬಿಲ್ಲವ ಸಂಘಟನೆಗಳೂ ಚರ್ಚೆಯಲ್ಲಿ ತೊಡಗಿವೆ. ಆದರೆ ಸಂಘಟನೆಗಳು ಒಗ್ಗಟ್ಟಿನಿಂದ ಒಂದೇ ವೇದಿಕೆಗೆ ಬಂದು ಹೇಳಿಕೆ ನೀಡುವ ಅಥವಾ ಪ್ರತಿಭಟನೆ ನಡೆಸುವ ಪ್ರಯತ್ನಕ್ಕೆ ಇದುವರೆಗೆ ಮುಂದಾಗಿಲ್ಲ.

‘ಜಿಲ್ಲೆಯ ಮತದಾರರ ಪ್ರಮಾಣಕ್ಕೆ ಅನುಗುಣವಾಗಿ ಬಿಲ್ಲವರಿಗೆ ಅಧಿಕ ಪ್ರಾತಿನಿಧ್ಯ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ವತಿಯಿಂದ ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ನೀಡಲಾಗಿತ್ತು. ಹೆಚ್ಚು ಸ್ಥಾನ ನೀಡದೆ ಇರುವ ಬಗ್ಗೆ ಬಿಲ್ಲವರಲ್ಲಿ ತೀವ್ರ ಅಸಮಾಧಾನ ಇದೆ ಎಂದು ಯಾರು ಹೇಳುತ್ತಿದ್ದಾರೆಯೋ ಗೊತ್ತಿಲ್ಲ. ಈ ಬಗ್ಗೆ ಇದುವರೆಗೆ ಮಹಾಮಂಡಳದಲ್ಲಿ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಮಂಡಳದ ಅಧ್ಯಕ್ಷ ಜಯ ಸಿ.ಸುವರ್ಣ ಹೇಳುತ್ತಾರೆ.

‘ಬಿಲ್ಲವ ಸಮುದಾಯದವರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಂದು ಟಿಕೆಟ್‌ ಅನ್ನು ನೀಡಲಾಗಿದೆ. ನಮ್ಮ ಗುರಿ ಇದೀಗ ಏನಿದ್ದರೂ ಅವರನ್ನು ಗೆಲ್ಲಿಸುವುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರವನ್ನು ಬಿಲ್ಲವರಿಗೆ ಬಿಟ್ಟು ಕೊಡಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಮೋಹನದಾಸ್‌ ಪಾವೂರ್ ಹೇಳಿದರು.

ಶುಕ್ರವಾರ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದ್ದು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೊಹಿಯುದ್ದೀನ್‌ ಬಾವಾ ಅವರ ವಿರುದ್ಧ ಸ್ಪರ್ಧಿಸಲು ಸತ್ಯಜಿತ್‌ ಸುರತ್ಕಲ್‌ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಡಾ. ಭರತ್‌ ಶೆಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸತ್ಯಜಿತ್‌ ಸುರತ್ಕಲ್‌, ‘ಹೋರಾಟಕ್ಕೆ ಮಾತ್ರ ನಾವು ಬೇಕು. ಆದರೆ, ಟಿಕೆಟ್‌ ನೀಡುವಾಗ ನಮ್ಮನ್ನು ಪರಿಗಣಿಸುತ್ತಿಲ್ಲ. ಟಿಕೆಟ್‌ ತಪ್ಪುವುದಕ್ಕೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರೇ ಕಾರಣ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್‌, ‘ಬಿಜೆಪಿ ಹಿಂದುಳಿದ ವರ್ಗದವರನ್ನು ಕೇವಲ ಬಳಕೆ ಮಾಡುತ್ತಿದೆ. ಪಕ್ಷಕ್ಕಾಗಿ ಪ್ರಾಣ ಕೊಡಲು ಹಿಂದುಳಿದ ವರ್ಗದವರು ಬೇಕು. ಅಧಿಕಾರ ಅನುಭವಿಸಲು ಮೇಲ್ವರ್ಗದ ಜನರನ್ನು ಗುರುತಿಸಲಾಗಿದೆ’ ಎಂದು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಇದು ಕರಾವಳಿಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಚಾಕರಿ ಮಾಡಲು ಬಳಕೆ
‘ಈ ಬಾರಿಯ ಟಿಕೆಟ್‌ ಹಂಚಿಕೆಯಲ್ಲಿ ಬಿಜೆಪಿ ಹೆಚ್ಚಿನ ಪ್ರಮಾಣದಲ್ಲಿ ಮೇಲ್ವರ್ಗದವರಿಗೆ ಅವಕಾಶ ನೀಡಿದೆ. ಬಿಜೆಪಿ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಬಲಪಡಿಸಲು ಬಿಲ್ಲವರು ಹೆಚ್ಚು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಆದರೆ, ಒಬ್ಬರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ. ಬಿಲ್ಲವರು ಪಕ್ಷದ ಚಾಕರಿ ಮಾಡಲು ಬೇಕು. ಆದರೆ, ಅಧಿಕಾರ ಅನುಭವಿಸಲು ಬೇರೆಯವರು ಎಂಬುದು ಈ ನಿಲುವಿನಲ್ಲಿದೆ’ ಎಂದು ಅಖಿಲ ಭಾರತ ಬಿಲ್ಲವ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಪ್ರತಿಕ್ರಿಯಿಸಿದರು.

ಬಿಲ್ಲವರು ಕರಾವಳಿಯಲ್ಲಿ ಬಹುಸಂಖ್ಯಾತರು. ಆದರೆ, ರಾಜಕೀಯ ಪ್ರಾತಿನಿಧ್ಯ ಒದಗಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸಂವಿಧಾನದಲ್ಲಿನ ಸಮಾನತೆಯ ತತ್ವವನ್ನು ಅನುಸರಿಸುತ್ತಿಲ್ಲ. ಬಿಲ್ಲವರನ್ನು ಚಾಕರಿಗೆ ಬಳಸಿಕೊಂಡು, ಅವಕಾಶ ನಿರಾಕರಿಸುವ ಕೆಟ್ಟ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಈ ಬಾರಿ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಈಗಾಗಲೇ ಸಮುದಾಯದ ಜನರು ಈ ಕುರಿತು ಗಂಭೀರವಾಗಿ ಆಲೋಚನೆಗೆ ಇಳಿದಿದ್ದಾರೆ ಎಂದರು.

ನೋಟಾ ಅಭಿಯಾನ

ಇದೀಗ ‘ದಕ್ಷಿಣ ಕನ್ನಡ ಬಿಲ್ಲವ ನೋಟಾ ಅಭಿಯಾನ’ ಎಂಬ ಫೇಸ್‌ಬುಕ್‌ ಪುಟ ತೆರೆಯಲಾಗಿದೆ. ಬಿಲ್ಲವರಿಗೆ ಆದ್ಯತೆ ನೀಡದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಈ ಪುಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಆದರೆ, ನೋಟಾ ಅಭಿಯಾನದ ಫೇಸ್‌ ಬುಕ್‌ ಪುಟದ ಬಗ್ಗೆಯೂ ಅಪಸ್ವರ ಎದ್ದಿದೆ. ಜಿಲ್ಲೆಯಲ್ಲಿ ಬಿಲ್ಲವರಿಗೆ ಕೇವಲ ಬಿಜೆಪಿ ಬಗ್ಗೆಯಷ್ಟೇ ಅಸಮಾಧಾನ ಮೂಡಿಲ್ಲ. ಕಾಂಗ್ರೆಸ್‌ ಕೂಡ ಬಿಲ್ಲವರಿಗೆ ಪ್ರಾತಿನಿಧ್ಯ ನೀಡಿಲ್ಲ. ಬಿಲ್ಲವರು ನೋಟಾ ಮತ ಚಲಾಯಿಸಿದರೆ ಅದರ ಲಾಭ ಕಾಂಗ್ರೆಸ್‌ಗೆ ದೊರೆಯುವುದರಿಂದ ಕಾಂಗ್ರೆಸ್‌  ಕಡೆಯವರೇ ಈ ಪುಟ ಸೃಷ್ಟಿಸಿರಬಹುದು ಎಂಬ ಉಲ್ಲೇಖಗಳೂ ಈ ಪುಟದಲ್ಲಿಯೇ ಇವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಿದ್ಧಪಡಿಸಿದ ಪಟ್ಟಿಗೆ ಬದಲಾಗಿ, ಬಂಟರಿಗೆ ಆದ್ಯತೆ ಇರುವ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆಯೂ ಪುಟದಲ್ಲಿ ಚರ್ಚೆಗಳು ಆಗುತ್ತಿವೆ. ‘ನಿಜಕ್ಕೂ ಅಮಿತ್‌ ಶಾ ಸಿದ್ಧಪಡಿಸಿದ ಪಟ್ಟಿಯನ್ನು ಫೇಸ್‌ಬುಕ್‌ ಪುಟದಲ್ಲಿ ಏಕೆ ಪ್ರಕಟಿಸಿಲ್ಲ’ ಎಂದು ಬಿಲ್ಲವರೊಬ್ಬರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ನಾಲ್ಕು ಸೀಟುಗಳನ್ನುಅಲ್ಪಸಂಖ್ಯಾತರಿಗೇ ನೀಡಿದೆ. ಅದರ ಬಗೆಗಿನ ಚರ್ಚೆ ತಪ್ಪಿಸಿ, ಸಮುದಾಯದಲ್ಲಿ ಒಡಕು ಮೂಡಿಸಲು ಈ ಪುಟವನ್ನು ಬಳಸಿಕೊಳ್ಳಲಾಗುತ್ತಿದೆ’ ಎಂಬ ಉಲ್ಲೇಖವೂ ಇದೆ.

‘ಕಾಂಗ್ರೆಸ್ಸಿಗರ ಗಾಳಕ್ಕೆ ಸುಲಭವಾಗಿ ಬೀಳುವ ಮೀನುಗಳಾಗಬೇಡಿ. ನಮಗೆ ಉಪಕಾರ ಇಲ್ಲದೇ ಇದ್ದರೂ, ಕನಿಷ್ಠ ಉಪದ್ರ ಕೊಡದವರನ್ನು ಗೆಲ್ಲಿಸಿ. ಈ ಬಾರಿ ಬಿಜೆಪಿ’ ಎಂಬ ಕಿವಿ ಮಾತುಗಳನ್ನು ಮತ್ತೆ ಕೆಲವು ಬಿಲ್ಲವರು ವ್ಯಕ್ತಪಡಿಸಿದ್ದಾರೆ. ‘ಈ ಪುಟವನ್ನು ದಕ್ಷಿಣ ಕನ್ನಡ ಕಾಂಗ್ರೆಸ್‌ ಘಟಕವೇ ಸೃಷ್ಟಿಸಿದ್ದು, ಇದನ್ನು ‘ರಿಪೋರ್ಟ್‌’ ಮಾಡಬೇಕು’ ಎಂಬ ಸಲಹೆಯೂ ವ್ಯಕ್ತವಾಗಿದೆ.

ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾತ್ರ, ‘ನೋಟಾ  ಅಭಿಯಾನದ ಬಗ್ಗೆ ಯಾವುದೇ ಮಾಹಿತಿ ತಮ್ಮ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದ್ದಾರೆ.

ಇದೆಲ್ಲದರ ಮಧ್ಯೆ ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ಎಂ. ವೇದಕುಮಾರ್‌, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟಿಕೆಟ್‌ ಹಂಚಿಕೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರಿಗೆ ಸರಿಯಾದ ಪ್ರಾತಿನಿಧ್ಯ ನೀಡದೇ ಕಡೆಗಣಿಸಲಾಗಿದೆ. ಉಭಯ ಜಿಲ್ಲೆಗಳ ಕನಿಷ್ಠ  ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಬಿಲ್ಲವರಿಗೆ ಅವಕಾಶ ನೀಡಬೇಕಿತ್ತು’ ಎಂದು ಹೇಳಿದ್ದಾರೆ.

‘ಪಕ್ಷ ಸಂಘಟನೆ, ಪ್ರತಿಭಟನೆಗೆ ಬಿಲ್ಲವರನ್ನು ಯಥೇಚ್ಛವಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಟಿಕೆಟ್‌ ನೀಡುವಲ್ಲಿ ಮಾತ್ರ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಸಂಖ್ಯಾಬಲಕ್ಕೆ ಅನುಗುಣವಾಗಿ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗುವಂತೆ ರಾಜಕೀಯ ಪಕ್ಷಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಬಿಲ್ಲವರು ಪ್ರಯತ್ನಿಸುವ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮುಂದೆ ಬರುವ ಸರ್ಕಾರದಲ್ಲಿ ಬಿಲ್ಲವರಿಗೆ ಸಚಿವ ಸ್ಥಾನ ನೀಡುವಲ್ಲಿಯೂ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಬೇಕು’ ಎಂದು ಹೇಳಿದ್ದಾರೆ.

ಪೂಜಾರಿ ಪಾದಪೂಜೆ: ಬಿಲ್ಲವರ ಅಸಮಾಧಾನದಿಂದ ಕಾಂಗ್ರೆಸ್‌ನಲ್ಲಿ ಒಂದು ರೀತಿಯ ಆತಂಕ ಶುರುವಾಗಿದ್ದು, ಸಮುದಾಯದ ಪ್ರಮುಖ ನಾಯಕ ಜನಾರ್ದನ ಪೂಜಾರಿ ಅವರ ಪಾದಪೂಜೆಗೆ ಬಹುತೇಕ ಅಭ್ಯರ್ಥಿಗಳು ಮುಂದಾಗಿದ್ದಾರೆ.

ಈಗಾಗಲೇ ಸಚಿವ ಬಿ.ರಮಾನಾಥ ರೈ, ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೋಹಿಯುದ್ದೀನ್‌ ಬಾವ, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಪೂಜಾರಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಈ ಮೂಲಕ ಬಿಲ್ಲವರ ಅಸಮಾಧಾನವನ್ನು ನಿವಾರಿಸಿ, ತಮ್ಮ ಮತಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT