ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ಶ್ರೀರಾಮುಲು ರೋಡ್‌ ಶೋ; ಅಬ್ಬರದ ಪ್ರಚಾರ

ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಪರ ಮತಯಾಚನೆ
Last Updated 23 ಏಪ್ರಿಲ್ 2018, 9:05 IST
ಅಕ್ಷರ ಗಾತ್ರ

ಗದಗ: ಸಂಸದ ಬಿ.ಶ್ರೀರಾಮುಲು ಅವರು ಭಾನುವಾರ ಗದಗ ನಗರದಲ್ಲಿ, ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರವಾಗಿ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದರು.

ಸಂಜೆ 5ಗಂಟೆ ಸುಮಾರಿಗೆ ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಆರಂಭವಾದ ರೋಡ್ ಶೋ, ಮಹಾವೀರ ವೃತ್ತ, ರಾಚೋಟೇಶ್ವರ ದೇವಸ್ಥಾನ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ಬೆಟಗೇರಿ ಟೆಂಗಿನಕಾಯಿ ಬಜಾರ್‌ವರೆಗೆ ನಡೆಯಿತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದರು.

ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ಶ್ರೀರಾಮುಲು,‘ಬಳ್ಳಾರಿ ನನ್ನ ಜನ್ಮಭೂಮಿಯಾದರೆ ಗದಗ ನನ್ನ ಕರ್ಮ ಭೂಮಿ. ಗದುಗಿನ ಜನತೆ ನನ್ನನ್ನು ಮನೆ ಮಗನಂತೆ ನೋಡಿಕೊಂಡು ಪ್ರೀತಿ, ಅಭಿಮಾನ ತೋರಿಸಿದ್ದೀರಿ. ಅದೇ ಪ್ರೀತಿಯನ್ನು ಗದಗ ಮತಕ್ಷೇತ್ರದ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಅವರಿಗೂ ತೋರಿಸಿ. ಅವರನ್ನು ಗೆಲ್ಲಿಸಿದರೆ ನೀವು ಶ್ರೀರಾಮುಲು ಅವರನ್ನು ಗೆಲ್ಲಿಸಿದಂತೆ’ ಎಂದು ಅವರ ಪರವಾಗಿ ಮತಯಾಚನೆ ಮಾಡಿದರು.

‘ಕಾಂಗ್ರೆಸ್‌ ದುರಾಡಳಿತಕ್ಕೆ ಕೊನೆ ಹಾಡೋಣ, ಬಿಜೆಪಿಯನ್ನು ಬೆಂಬಲಿಸಿ’ ಎಂದು ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಮತದಾರರಲ್ಲಿ ಮನವಿ ಮಾಡಿಕೊಂಡರು.

ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಮುಖಂಡ ಕಾಂತಿಲಾಲ ಬನ್ಸಾಲಿ, ಎಂ.ಎಂ.ಹಿರೇಮಠ, ಶ್ರೀಕಾಂತ ಖಟವಟೆ, ಗದಗ ಶಹರ ಬಿಜೆಪಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ನಗರಸಭೆ ಸದಸ್ಯ ಸಂತೋಷ ಮೇಲಗಿರಿ, ರಾಘವೇಂದ್ರ ಯಳವತ್ತಿ, ಮಾಧವ ಗಣಾಚಾರಿ, ಅನಿಲ್‌ ಅಬ್ಬಿಗೇರಿ ಇದ್ದರು.

ಬಿದರೂರ ಗೈರು: ಬಿಜೆಪಿ ಟಿಕೆಟ್ ಸಿಗದೇ ಮುನಿಸಿಕೊಂಡಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ರೋಡ್‌ ಶೋಗೆ ಗೈರು ಹಾಜರಾಗಿದ್ದರು.

‘ಕಾಂಗ್ರೆಸ್‌ಗೆ ಕೇವಲ 60 ಸ್ಥಾನ’

ಲಕ್ಕುಂಡಿ (ಗದಗ ತಾ.): ‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚುತ್ತಿದ್ದು, ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌ ಕೇವಲ 60 ಸ್ಥಾನಕ್ಕೆ ಕುಸಿಯಲಿದೆ’ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿನ ಬಜಾರ ರಸ್ತೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ನರಗುಂದ ಮತಕ್ಷೇತ್ರದ ಅಭ್ಯರ್ಥಿ ಸಿ.ಸಿ.ಪಾಟೀಲ ಅವರ ಪರವಾಗಿ ಅವರು ಮತಯಾಚನೆ ಮಾಡಿದರು.

‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ನಕಲು ಮಾಡಿರುವ ಸಿದ್ದರಾಮಯ್ಯನವರ ಸರ್ಕಾರ ಪತನಗೊಳ್ಳಲಿದೆ’ ಎಂದರು.

‘ಗದಗ ಜಿಲ್ಲೆಯಲ್ಲಿ ಸಚಿವ ಎಚ್.ಕೆ.ಪಾಟೀಲ ಅವರು, ಯಡಿಯೂರಪ್ಪ ಸರ್ಕಾರ ಇದ್ದಾಗ ಅನುಷ್ಠಾನಗೊಂಡ ಅಭಿವೃದ್ಧಿ ಕಾಮಗಾರಿಗಳನ್ನೇ ಪೂರ್ಣಗೊಳಿಸಿ, ಉದ್ಘಾಟನೆ ಮಾಡಿದ್ದಾರೆ’ ಎಂದು ಆರೋಪಿಸಿದರು.‘ರೈತರ ಸಹಕಾರಿ ಸಂಘಗಳು ಹಾಗೂ ಮಹಿಳಾ ಸ್ವ–ಸಹಾಯ ಸಂಘಗಳ ಸಾಲವನ್ನು ಬಿ.ಜೆ.ಪಿ ಸರ್ಕಾರ ರಚನೆಯಾದ 24 ಗಂಟೆಗಳಲ್ಲಿ ಮನ್ನಾ ಮಾಡಲಾಗುವುದು’ ಎಂದರು.

ನರಗುಂದ ಮತ ಕ್ಷೇತ್ರದ ಅಭ್ಯರ್ಥಿ ಸಿ.ಸಿ.ಪಾಟೀಲ ಮಾತನಾಡಿದರು. ಕಾಂಗ್ರೆಸ್‌ ತೊರೆದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಇದಕ್ಕೂ ಮುನ್ನ ಗ್ರಾಮದ ಮಾರುತಿ ನಗರ, ಅಂಬೇಡ್ಕರ್ ನಗರದಲ್ಲಿ ಪಾದಯಾತ್ರೆಯ ಮೂಲಕ ಸಿ.ಸಿ.ಪಾಟೀಲ ಪರವಾಗಿ ಮತಯಾಚಿಸಿದರು. ನಂತರ ಅತ್ತಿಮಬ್ಬೆ ಮಹಾದ್ವಾರದಿಂದ ಗ್ರಾಮ ಪಂಚಾಯ್ತಿವರೆಗೆ ಚಕ್ಕಡಿಯಲ್ಲಿ ಪ್ರಚಾರ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾ ಪಂಚಾಯ್ತಿ ಸದಸ್ಯ ಪಡಿಯಪ್ಪ ಪೂಜಾರ, ರವಿ ದಂಡಿನ, ಬಿಜೆಪಿ ಲಕ್ಕುಂಡಿ ಮಂಡಲದ ಅಧ್ಯಕ್ಷ ವಸಂತ ಮೇಟಿ, ಎಚ್.ಎಸ್. ಶಿವನಗೌಡರ, ಪ್ರದೀಪ ನವಲಗುಂದ, ರಾಮನಗೌಡ ದಾನಪ್ಪಗೌಡ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ಸದಸ್ಯ ಮಹಾಂತೇಶ ಮೆಣಸಿನಕಾಯಿ, ರೇಣವ್ವತೆಳಗಡೆ, ದತ್ತಣ್ಣ ಜೋಶಿ, ಎಸ್.ಬಿ.ಕಲಕೇರಿ, ರುದ್ರಪ್ಪ ಮುಸ್ಕಿನಬಾವಿ, ಅಂದಪ್ಪ ತಿಮ್ಮಾಪೂರ, ಅಂಬರೀಶ ಕರೆಕಲ್, ತಿಮ್ಮಾಪೂರ, ಎಸ್.ಬಿ.ಕಲಕೇರಿ, ರುದ್ರಪ್ಪ ಮುಸ್ಕಿನಬಾವಿ, ದತ್ತಣ್ಣ ಜೋಶಿ, ಮಹೇಶ ಮುಸ್ಕಿನಭಾವಿ, ವಿರೂಪಾಕ್ಷಿ ಬೆಟಗೇರಿ, ಸುರೇಶ ಕವಲೂರು, ಕೊಟ್ರಗೌಡ ರೋಣದ, ಶರಣಪ್ಪ ಕಮತರ, ಕುಬೇರಪ್ಪ ಬಡಿಗೇರ ಈರಪ್ಪ ಬಂಡಿ, ಶಿವಪ್ಪ ಬಳಿಗೇರ, ಬಸವರಾಜ ಮುಳ್ಳಾಳ, ಮಂಜುನಾಥ ದೊಡ್ಡಮನಿ, ಬಿ.ಐ.ಮುಳ್ಳಾಳ, ಹುಚ್ಚಪ್ಪ ಜವಳಬೆಂಚಿ, ಹನುಮಂತಪ್ಪ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT