ನಗರಸಭೆಯಿಂದ ₹ 20 ಲಕ್ಷ ವೆಚ್ಚದಲ್ಲಿ 70ಕ್ಕೂ ಹೆಚ್ಚು ದೀಪಗಳ ಅಳವಡಿಕೆ

ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

ಸಾಲು ಸಾಲು ದೀಪಗಳು ಕೆರೆಯ ನೀರಿನಲ್ಲಿ ಪ್ರತಿಫಲನಗೊಂಡು ಬೆಳಕಿನ ಕೋಲುಗಳಂತೆ ಕಾಣುತ್ತವೆ. ರಾತ್ರಿಯ ನಿಶ್ಯಬ್ಧದಲ್ಲಿ ವರ್ಣಗಳ ಕಂಪು ಸೂಸುತ್ತಾ ಭೀಷ್ಮಕೆರೆಯು ಇಡೀ ನಗರಕ್ಕೆ ಸ್ವಾಗತ ಕೋರುವಂತೆ ಕಾಣುತ್ತದೆ.

ಗದುಗಿನ ಭೂಮರೆಡ್ಡಿ ವೃತ್ತದ ಬಳಿಯಿರುವ ರಸ್ತೆಯಲ್ಲಿ ರಾತ್ರಿ ಆಲಂಕಾರಿಕ ದೀಪಗಳ ಸೊಬಗು

ಗದಗ: ಇಲ್ಲಿನ ಭೀಷ್ಮಕೆರೆಯ ಹಿನ್ನೆಲೆಯಲ್ಲಿ ದಿನದ ಕಾಯಕ ಮುಗಿಸಿ ಸೂರ್ಯ ಮುಳುಗುವಾಗ ಕಾಣುವ ಬೆಳಕಿನ ವರ್ಣವೈಭವ ಅಪ್ಯಾಯಮಾನ. ಸೂರ್ಯ ಮುಳುಗಿದ ನಂತರ ನಿಧಾನವಾಗಿ ಕತ್ತಲು ಆವರಿಸಲು ಪ್ರಾರಂಭಿಸುತ್ತಿದ್ದಂತೆ, ಕೆರೆಯಂಚಿನಲ್ಲಿರುವ ಅಲಂಕಾರಿಕ ದೀಪಗಳು ಮಿನುಗಲು ಪ್ರಾರಂಭಿಸುತ್ತವೆ.

ಸಾಲು ಸಾಲು ದೀಪಗಳು ಕೆರೆಯ ನೀರಿನಲ್ಲಿ ಪ್ರತಿಫಲನಗೊಂಡು ಬೆಳಕಿನ ಕೋಲುಗಳಂತೆ ಕಾಣುತ್ತವೆ. ರಾತ್ರಿಯ ನಿಶ್ಯಬ್ಧದಲ್ಲಿ ವರ್ಣಗಳ ಕಂಪು ಸೂಸುತ್ತಾ ಭೀಷ್ಮಕೆರೆಯು ಇಡೀ ನಗರಕ್ಕೆ ಸ್ವಾಗತ ಕೋರುವಂತೆ ಕಾಣುತ್ತದೆ.

ಈ ಕೆರೆಯಂಚನ್ನು ಬಳಸಿಕೊಂಡು ಹುಬ್ಬಳ್ಳಿ–ಗದಗ ರಸ್ತೆಯ ಮೂಲಕ ನಗರ ಪ್ರವೇಶಿಸಿದರೆ ರಸ್ತೆಯ ತುಂಬೆಲ್ಲಾ ಅಲಂಕಾರಿಕ ದೀಪಗಳ ಸೊಬಗು ಕಾಣಿಸುತ್ತದೆ. ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ವೃತ್ತದವರೆಗೆ ರಸ್ತೆ ವಿಭಜಕದ ನಡುವೆ ಕಾಣಿಸುವ ಈ ಟ್ಯೂಬ್ಲರ್‌ ಪೋಲ್‌ಗಳ (ಕೊಳವೆಯಾಕಾರದ ದೀಪದ ಕಂಬಗಳು) ಬೆಳಕಿನ ಹಂದರವು ನಗರ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ನಗರಸಭೆಯು ₹20 ಲಕ್ಷ ವೆಚ್ಚದಲ್ಲಿ ಭೂಮರೆಡ್ಡಿ ವೃತ್ತ ಮತ್ತು ಭೀಷ್ಮಕೆರೆ ಸಮೀಪ ಇಂತಹ 70ಕ್ಕೂ ಹೆಚ್ಚು ಅಲಂಕಾರಿಕ ದೀಪದ ಕಂಬಗಳನ್ನು ಅಳವಡಿಸಿದೆ. ರಾತ್ರಿಯಾಗುತ್ತಿದ್ದಂತೆ ಈ ದೀಪದ ಕಂಬಗಳು ಬೆಳಗಲು ಪ್ರಾರಂಭಿಸುತ್ತವೆ. ಇಡೀ ನಗರಕ್ಕೆ ನೆಕ್ಲೆಸ್‌ ತೊಡಿಸಿದಂತೆ ಮಿನುಗುತ್ತವೆ.

ಸಂಜೆ ಮತ್ತು ರಾತ್ರಿ ಭೀಷ್ಮಕೆರೆ ಆವರಣಕ್ಕೆ ವಾಯುವಿಹಾರಕ್ಕೆ ಬರುವ ನೂರಾರು ಜನರು ಈ ಅಲಂಕಾರಿಕ ದೀಪಗಳ ಬೆಳಕಿನಲ್ಲಿ ಸಂಚರಿಸಿ ಖುಷಿಪಡುತ್ತಿದ್ದಾರೆ. ವರ್ಷದ ಹಿಂದೆ ನಗರಸಭೆ ಕಚೇರಿ ಎದುರಿನ ದ್ವಿಪಥ ರಸ್ತೆಯ ಮಧ್ಯೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಹಾಗೂ ಮುಳಗುಂದ ನಾಕಾದಲ್ಲಿರುವ ಪ್ರವಾಸಿ ಮಂದಿರದ ಎದುರಿನ ರಸ್ತೆಯ ಮಧ್ಯದಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಝೇಂಡಾ ವೃತ್ತದವರೆಗೆ ದ್ವಿಪಥ ರಸ್ತೆಯ ಅಕ್ಕಪಕ್ಕದಲ್ಲಿರುವ ಗಿಡಮರಗಳ ಕೆಳಗೆ 40 ವ್ಯಾಟ್‌ನ ಎಲ್‍ಎಡಿ ದೀಪಗಳನ್ನು ಹಾಕಲಾಗಿತ್ತು. ನಿತ್ಯ ಸಂಜೆ 7ರಿಂದ ರಾತ್ರಿ 10.30ರವರೆಗೆ ಈ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತವೆ.

‘ಕೆಲವು ತಿಂಗಳ ಹಿಂದೆ ನಗರಸಭೆ ಅಧಿಕಾರಿಗಳು ಬೆಳಗಾವಿಗೆ ಭೇಟಿ ನೀಡಿದರು. ಅಲ್ಲಿ ಬೆಳಗಾವಿ–ಗೋವಾ ರಸ್ತೆಯಲ್ಲಿ ಅಳವಡಿಸಿದ ವಿದ್ಯುತ್‌ ದೀಪಕಂಬಗಳ ಮಾದರಿಯಲ್ಲಿ ಗದಗ–ಬೆಟಗೇರಿ ಅವಳಿ ನಗರದಲ್ಲಿ ಈ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ’ ಎಂದು ನಗರಸಭೆಯ ಎಲೆಕ್ಟ್ರಿಕಲ್‌ ವಿಭಾಗದ ಇನ್‌ಸ್ಪೆಕ್ಟರ್‌ ಎಸ್.ಸಿ.ಹುಣಸಿಮರದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಮಹಾತ್ಮ ಗಾಂಧಿ ವೃತ್ತದಿಂದ ಝೇಂಡಾ ವೃತ್ತದವರೆಗೆ, ಪ್ರವಾಸಿ ಮಂದಿರದ ಎದುರಿನ ರಸ್ತೆಯ ವಿಭಜಕದ ಮಧ್ಯದಲ್ಲಿ ಹಾಗೂ ಎರಡನೇ ಹಂತದಲ್ಲಿ ಭೂಮರಡ್ಡಿ ವೃತ್ತದಿಂದ ಹಳೆ ಡಿ.ಸಿ. ಕಚೇರಿ ವೃತ್ತದವರೆಗೆ, ದೀಪಗಳನ್ನು ಅಳವಡಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಬಣ್ಣ ಬಣ್ಣದ ದೀಪಗಳನ್ನು ಬಳಸಲಾಗಿದೆ’ ಎಂದು ಅವರು ಹೇಳಿದರು.

**

ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ರಸ್ತೆ ವಿಭಜಕದ ನಡುವೆ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ – ಮನ್ಸೂರ್‌ ಅಲಿ, ನಗರಸಭೆ ಪೌರಾಯುಕ್ತ.

**

ಹುಚ್ಚೇಶ್ವರ ಅಣ್ಣಿಗೇರಿ

Comments
ಈ ವಿಭಾಗದಿಂದ ಇನ್ನಷ್ಟು
ಮೈದುಂಬಿಕೊಂಡ ಹಮ್ಮಿಗೆ ಬ್ಯಾರೇಜ್‌

ಮುಂಡರಗಿ
ಮೈದುಂಬಿಕೊಂಡ ಹಮ್ಮಿಗೆ ಬ್ಯಾರೇಜ್‌

26 May, 2018

ಮುಂಡರಗಿ
ಬಿತ್ತನೆ ಬೀಜ ವಿತರಣೆಗೆ ಚಾಲನೆ

‘ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ರೈತರಿಗೆ ನೆರವು ನೀಡಲು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳು ಸಿದ್ಧತೆಗಳನ್ನು...

26 May, 2018
ಕಸದ ರಾಶಿಗೆ ಕೆಂಗಟ್ಟ ಜವುಳಗಲ್ಲಿ ನಿವಾಸಿಗಳು

ಗದಗ
ಕಸದ ರಾಶಿಗೆ ಕೆಂಗಟ್ಟ ಜವುಳಗಲ್ಲಿ ನಿವಾಸಿಗಳು

26 May, 2018

ನರಗುಂದ
ಹತ್ತಿ ಮಿಲ್‌ ಸ್ವಚ್ಛತೆ ಕಾಪಾಡಲು ಸಲಹೆ

‘ಪಟ್ಟಣದ ಹತ್ತಿಯ ಜಿನ್ನಿಂಗ್ ಮಿಲ್‌ಗಳಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.

26 May, 2018
ಅರ್ಧಕ್ಕೆ ನಿಂತ ಗಜೇಂದ್ರಗಡ ಬಸ್ ನಿಲ್ದಾಣ ಸಿಸಿ ಕಾಮಗಾರಿ

ಗಜೇಂದ್ರಗಡ
ಅರ್ಧಕ್ಕೆ ನಿಂತ ಗಜೇಂದ್ರಗಡ ಬಸ್ ನಿಲ್ದಾಣ ಸಿಸಿ ಕಾಮಗಾರಿ

25 May, 2018