ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದ ಪರಿಕರಗಳಲ್ಲೇ ಚಿಣ್ಣರ ಆಟ

ನಗರಸಭೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮಹಾರಾಜ ಉದ್ಯಾನ
Last Updated 23 ಏಪ್ರಿಲ್ 2018, 9:19 IST
ಅಕ್ಷರ ಗಾತ್ರ

ಹಾಸನ: ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಉದ್ಯಾನದಲ್ಲಿ ಮಕ್ಕಳಿಗಾಗಿ ಅಳವಡಿಸಿರುವ ಆಟೋಟ ಉಪಕರಣಗಳು ತುಕ್ಕು ಹಿಡಿಯುತ್ತಿದ್ದು, ಮಕ್ಕಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಉದ್ಯಾನಕ್ಕೆ ನಿತ್ಯ ವಿಶ್ರಾಂತಿ ಪಡೆಯಲು ಹಾಗೂ ವಾಯು ವಿಹಾರಕ್ಕೆ ನೂರಾರು ಜನರು ಬರುತ್ತಾರೆ. ಉತ್ತಮ ಗಿಡ, ಮರಗಳು ಇರುವುದರಿಂದ ದಣಿದು ಬಂದವರು ಸ್ಪಲ್ಪ ಸಮಯ ಕುಳಿತು ಶುದ್ಧ ಗಾಳಿ ಸೇವಿಸಿ ವಿಶ್ರಾಂತಿ ಪಡೆದು ಹೋಗುವುದು ಉಂಟು.

ಮಕ್ಕಳಿಗೆ ಆಟೋಟ ಉಪಕರಣಗಳಾದ ಉಯ್ಯಾಲೆ, ಜಾರುಬಂಡಿ ಹೀಗೆ ವಿವಿಧ ರೀತಿಯ ಪರಿಕರಗಳನ್ನು ಅಳವಡಿಸಲಾಗಿದೆ. ಬೇಸಿಗೆ ರಜೆ ಆರಂಭವಾಗಿರುವುದರಿಂದ ಉದ್ಯಾನಕ್ಕೆ ಆಟವಾಡಲು ಬರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಇಲ್ಲಿರುವ ಅನೇಕ ಪರಿಕರಗಳು ಹಾಳಾಗಿ, ತುಕ್ಕು ಹಿಡಿಯುತ್ತಿವೆ. ಅರ್ಧ ತುಂಡಾಗಿರುವ ಉಯ್ಯಾಲೆಯಲ್ಲಿ ಮಕ್ಕಳು ಆಟವಾಡಬೇಕಿದೆ.

ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಾರೆ. ಈ ವೇಳೆ ಉತ್ತಮವಾಗಿರುವ ಬೆರಳಣಿಕೆ ಪರಿಕರಗಳಲ್ಲಿ ಮಕ್ಕಳು ಆಟವಾಡುತ್ತಿದ್ದರೆ, ಉಳಿದವರು ತಮ್ಮ ಸರದಿಗಾಗಿ ಕಾದು ಕುಳಿತಿರುತ್ತಾರೆ. ಮಕ್ಕಳು ಆಯತಪ್ಪಿ ಬಿದ್ದರೆ ಪೆಟ್ಟಾಗಬಾರದು ಎಂಬ ಉದ್ದೇಶದಿಂದ ನೆಲದ ಮೇಲೆ ಹಾಕಿದ್ದ ಮರಳು ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಹಾಸನಾಂಬ ಕಲಾ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ದ್ವಾರ ಹಾಗೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಈ ಕೆಲಸಕ್ಕೆ ಬಳಸಿ ಉಳಿದ ಮರಳು, ಜಲ್ಲಿ ಕಲ್ಲು ಇತ್ಯಾದಿ ವಸ್ತುಗಳನ್ನು ಉದ್ಯಾನದಲ್ಲಿಯೇ ಸುರಿಯಲಾಗಿದೆ.

‘ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಮಕ್ಕಳನ್ನು ಆಟವಾಡಲು ಉದ್ಯಾನಕ್ಕೆ ಕರೆತರಲಾಗುವುದು. ಇಲ್ಲಿರುವ ಬಹುತೇಕ ಆಟೋಟ ಉಪಕರಣಗಳು ಮುರಿದಿವೆ. ಇದರಿಂದ ಮಕ್ಕಳಿಗೂ ಆಪಾಯ ತಪ್ಪಿದಲ್ಲ. ಹೆಚ್ಚು ಮಕ್ಕಳು ಆಗಮಿಸುವುದರಿಂದ ಬೇರೆ ಮಕ್ಕಳು ಬಿಟ್ಟುಕೊಡುವವರೆಗೂ ಕಾಯಬೇಕಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಚನ್ನಪಟ್ಟಣ ನಿವಾಸಿ ರತ್ನ ಮನವಿ ಮಾಡಿದರು.

‘ಅಮೃತ್‌ ಯೋಜನೆ ಅಡಿ ಅಂದಾಜು ₹ 20 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ಮಕ್ಕಳ ಆಟಿಕೆ ಅಳವಡಿಸುವ ಸಂಬಂಧ ಟೆಂಡರ್‌ ಕರೆಯಲಾಗಿತ್ತು. ಆದರೆ, ಅದು ಅಂತಿಮವಾಗದ ಕಾರಣ ಮತ್ತೊಮ್ಮೆ ಟೆಂಡರ್ ಕರೆಯಬೇಕಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ಏನು ಮಾಡಲು ಆಗುವುದಿಲ್ಲ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಶೀಘ್ರ ಹೊಸ ಪರಿಕರಗಳನ್ನು ಅಳವಡಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜೆ.ಎಸ್‌.ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT