ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

ರಾಣೆಬೆನ್ನೂರ–ಹರಿಹರ ರಸ್ತೆ ದುರಸ್ತಿ, ವಿಸ್ತರಣೆ ಕಾಮಗಾರಿ ನಿಧಾನ
Last Updated 23 ಏಪ್ರಿಲ್ 2018, 9:33 IST
ಅಕ್ಷರ ಗಾತ್ರ

ಕುಮಾರಪಟ್ಟಣ: ರಸ್ತೆ ವಿಸ್ತರಣೆ ನೆಪದಲ್ಲಿ ಅಕ್ಕ–ಪಕ್ಕದಲ್ಲಿ ದೊಡ್ಡ ದೊಡ್ಡ ಮರಗಳನ್ನು ಬಲಿಕೊಡುತ್ತಿರುವುದು ಒಂದು ರೀತಿಯ ತಲ್ಲಣದ ಸಂಗತಿಯಾದರೆ ಒಣಗಿದ ಮರದ ರಂಬೆ–ಕೊಂಬೆಗಳು ಎಲ್ಲಿ ಜನರ ಮೇಲೆ ಬಿದ್ದು ಅನಾಹುತ ಸೃಷ್ಠಿಸುತ್ತದೋ ಎಂಬುದು ಇನ್ನೊಂದು ಆತಂಕಕಾರಿ ಸಂಗತಿ

ಸಮೀಪದ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ರಾಣೆಬೆನ್ನೂರು ಮತ್ತು ಹರಿಹರ ನಗರಗಳಿಗೆ ಸಂಪರ್ಕ ಕಲ್ಪಿಸುವ ಹಳೆಯ ಎನ್‌ಎಚ್‌–4 ರಸ್ತೆ ಹಾಗೂ ತುಂಗಭದ್ರ ನದಿದಂಡೆ ಬಳಿಯಿರುವ (ಸ್ಥಗಿತಗೊಂಡ ಸಿನಿಮಾ ಮಂದಿರ) ಅತ್ಯಂತ ಹಳೆಯದಾದ ಬೃಹತ್ ಬೇವಿನಮರ ಒಣಗಿ ಗೆದ್ದಲು ಹಿಡಿದು ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿದೆ.

ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಕಳೆದ ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿದೆ. ರಸ್ತೆಯ ಒಂದು ಕಡೆ ಜಲ್ಲಿಕಲ್ಲು ಹಾಕಿರುವುದರಿಂದ ಬೇರೆ ದಾರಿಯಿಲ್ಲದೆ ಪ್ರಯಾಣಿಕರು ಒಂದೇ ಬದಿಯಲ್ಲಿ ಯಮರಾಯನಂತೆ ನಿರ್ಜಲ ಸ್ಥಿತಿಯಲ್ಲಿರುವ ಈ ಮರದ ಕೆಳಗೆ ಸಂಚರಿಸಬೇಕು.

ನೆರೆಹೊರೆಯ ಗ್ರಾಮಗಳ ಸಾವಿರಾರು ಬೈಕ್‌, ಆಟೊ, ಕಾರು, ಇನ್ನಿತರ ಲಘುವಾಹನ ಸವಾರರು ಹಾಗೂ ಪ್ರಯಾಣಿಕರು ಪ್ರತಿನಿತ್ಯ ಆತಂಕದಲ್ಲಿಯೇ ಸಂಚರಿಸುತ್ತಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ಮುನ್ನವೇ ಮರ ತೆರವುಗೊಳಿಸುವಂತೆ ಎರಡು ತಿಂಗಳ ಹಿಂದೆಯೆ ಮನವಿ ಮಾಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯ್ತಿ ಸಿಬ್ಬಂದಿ ತಿಳಿಸಿದ್ದಾರೆ.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿರುಗಾಳಿ ಸಹಿತ ಮಳೆ ಬರುವ ಸಂಭವ ಇರುವುದರಿಂದ ಗಾಳಿಯ ಒಡೆತಕ್ಕೆ ಮರದ ರಂಬೆ–ಕೊಂಬೆಗಳು ಮುರಿದು ಬಿದ್ದು ಅನಾಹುತ ಸಂಭವಿಸುವುದಕ್ಕೆ ಮೊದಲೇ ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚೆತ್ತುಕೊಂಡು ವಿಳಂಬ ಮಾಡದೆ ಮರವನ್ನು ಕತ್ತರಿಸಿ ಹಾಕಿ ವಾಹನ ಸವಾರರು ಹಾಗೂ ಪ್ರಯಾಣಿಕರಲ್ಲಿ ಮೂಡಿದ ಆತಂಕವನ್ನು ದೂರ ಮಾಡಬೇಕು ಎಂಬುದು ಗ್ರಾಮಸ್ಥರ ಆಶಯ.

‘ಮಂದಗತಿಯಲ್ಲಿ ಕಾಮಗಾರಿ: ಕಿರಿದಾದ ಹೆದ್ದಾರಿ’
ಬಹು ದಿನಗಳಿಂದ ತುಂಗಭದ್ರ ಸೇತುವೆ ಕಾಮಗಾರಿ ನಡೆಯುತ್ತಿದೆ. ಹರಿಹರ ನಗರಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರು–ಪೂನಾ ಎನ್‌ಎಚ್‌–4ರ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಒಂದು ಬದಿಯಲ್ಲಿ ಅಮೃತವರ್ಷಿಣಿ ವಿದ್ಯಾಲಯದ ವರೆಗೂ ಜಲ್ಲಿಕಲ್ಲು ಹಾಸಿ ಕೈಬಿಡಲಾಗಿದೆ. ವಾಹನ ಪ್ರಯಾಣಿಕರು, ಪಾದಚಾರಿಗಳು ರಸ್ತೆಯ ಒಂದೇ ಬದಿಯಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ತೊಂದರೆ ತಪ್ಪಿದ್ದಲ್ಲ

**

ಮರದ ಹರಾಜು ಪ್ರಕ್ರಿಯೆ ಮುಗಿದಿದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಒಣಗಿದ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ – 
ಉಷಾರಾಣಿ, ವಲಯ ಅರಣ್ಯಾಧಿಕಾರಿ ರಾಣೇಬೆನ್ನೂರು.

**

ಅವಘಡ ಸಂಭವಿಸುವ ಮುನ್ನವೇ ಮರ ಕಡಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ –
ಭೀಮಪ್ಪ ಗೋಣೆಪ್ಪನವರ ಸದಸ್ಯ, ತಾಲ್ಲೂಕು ಪಂಚಾಯ್ತಿ ರಾಣೇಬೆನ್ನೂರು.

**

ಸೂರಲಿಂಗಯ್ಯ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT