ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ಹಾವಳಿ: ರೋಸಿಹೋದ ಜನ

ಮನೆಗೆ ಕೊಂಡೊಯ್ಯುವ ಆಹಾರ ಹಂದಿಗಳ ಪಾಲು: ಆಕ್ರೋಶ
Last Updated 23 ಏಪ್ರಿಲ್ 2018, 9:40 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಕೆಲವೆಡೆ ಆನೆ, ಹುಲಿ, ಸಿಂಹ, ಚಿರತೆಯಂತಹ ಕಾಡುಪ್ರಾಣಿಗಳು ಊರುಗಳಲ್ಲಿ ಪ್ರವೇಶಮಾಡಿ ಜನರಲ್ಲಿ ಭೀತಿ ಉಂಟುಮಾಡಿರುತ್ತವೆ. ಆದರೆ ಇಲ್ಲಿ ಹಂದಿಗಳ ಅಟ್ಟಹಾಸಕ್ಕೆ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಕುಮಾರಪಟ್ಟಣದ ವಾಲ್ಮೀಕಿ ವೃತ್ತದ ಬಳಿಯಿರುವ ಅಂಗಡಿ ಮುಂಗಟ್ಟುಗಳ ಹಿಂದೆ, ಮುಂದೆ ಹಂದಿಗಳದ್ದೇ ಕಾರುಬಾರು. ಗ್ರಾಮದ ಪ್ರತಿಬೀದಿಯಲ್ಲಿ ಹಂದಿಗಳು ಸಂಚರಿಸಿ ಸಾರ್ವಜನಿಕರ ಕಿರಿಕಿರಿಗೆ ಕಾರಣವಾಗಿದೆ

ರಾಷ್ಟ್ರೀಯ ಹೆದ್ದಾರಿ–4 ಇದೇ ಗ್ರಾಮದ ಮೂಲಕ ಹಾದುಹೋಗುತ್ತದೆ. ರಾಣೆಬೆನ್ನೂರು ಮತ್ತು ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಕುಮಾರಪಟ್ಟಣ ಗ್ರಾಸಿಂ ಕೈಗಾರಿಕಾ ಘಟಕ ಇದ್ದು, ಹೊರ ರಾಜ್ಯಗಳಿಂದ ಕಂಪೆನಿಗೆ ಕಚ್ಚಾ ಸಾಮಾಗ್ರಿ ತರುವ ಬೃಹತ್ ಲಾರಿಗಳು ಚಾಲಕರು, ಕಾರ್ಮಿಕರಿಂದ ಸದಾ ಜನನಿಬಿಡ ಪ್ರದೇಶವಾಗಿರುತ್ತದೆ.

ಇಲ್ಲಿಗೆ ಹಲಸಬಾಳು, ರಾಜನಹಳ್ಳಿ, ನಲವಾಗಲ, ಕವಲೆತ್ತು, ವಡೇರಾಯನಹಳ್ಳಿ, ಹುಲಿಕಟ್ಟಿ, ಮಾಕನೂರು, ನಾಗೇನಹಳ್ಳಿ, ಮುದೇನೂರು, ನದಿಹರಳಹಳ್ಳಿ, ಹಿರೇಬಿದರಿ, ಐರಣಿ ಗ್ರಾಮಗಳ ಜನರು ಬಂದು ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಮನೆಗೆ ಮರಳುವಾಗ ಅಕ್ಕಿ, ಜೋಳ, ಹಾಲು, ಮೊಸರು ಪಾಕೇಟ್‌ಗಳು ಹಾಗೂ ಮಕ್ಕಳಿಗೆ ಬೇಕರಿ ಹಾಗೂ ಹೋಟೆಲ್ ತಿಂಡಿಗಳನ್ನು ಕಟ್ಟಿಸಿದ ಚೀಲಗಳನ್ನೆ ನೋಡುತ್ತಾ ತಮ್ಮ ವಾಹನಗಳಲ್ಲಿ ಇಡುವುದನ್ನು ಗಮನಿಸಿ ಇಲ್ಲವೆ ವಾಸನೆ ಹಿಡಿದು ಅತ್ತಿತ್ತ ನೋಡುವಷ್ಟರಲ್ಲಿ ಬಾಯಿಯಿಂದ ಕಚ್ಚಿ ತೆಗೆದು ಬಿಡುತ್ತವೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು

ಗ್ರಾಮದಲ್ಲಿ ನೂರಾರು ಹಂದಿಗಳಿದ್ದು ಗ್ರಾಮದ ಅಂದ ಕೆಡಿಸುವುದಲ್ಲದೆ ಚರಂಡಿಗಳಲ್ಲಿ ಹೊರಳಾಡಿ ಬಂದು ಮೈಕೊಡವಿದಾಗ ದುರ್ವಾಸನೆ ಬರುತ್ತದೆ ಮತ್ತು ಜನರ ಬಟ್ಟೆಗಳನ್ನು ಹೊಲಸು ಮಾಡುತ್ತವೆ. ಇನ್ನೂ ಪ್ರದೇಶಕ್ಕೆ ಅಪರಿಚಿತರು ಆಹಾರ ಪದಾರ್ಥಗಳನ್ನು ಬೈಕ್‌ ಸೈಡ್‌ಬ್ಯಾಗ್‌, ಸೈಕಲ್‌ಗಳಲ್ಲಿ ಇಟ್ಟು ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.

ಹಂದಿಗಳ ಹಾವಳಿಯನ್ನು ತಪ್ಪಿಸದೇ ಇದ್ದರೆ ಮುಂದೇನು ಎನ್ನುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಹರಿಹರದಲ್ಲಿರುವ ಮಾಲೀಕರಿಗೆ ಪಂಚಾಯ್ತಿ ಕಡೆಯಿಂದ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಜನರು ತಾಳ್ಮೆ ಕಳೆದುಕೊಳ್ಳುವ ಮೊದಲೇ ಪಂಚಾಯ್ತಿಯವರು ಅವರಿಗೆ ನೋಟೀಸ್ ನೀಡಬೇಕು ಸ್ಪಂದಿಸದಿದ್ದ ಪಕ್ಷದಲ್ಲಿ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ

‘ಸೊಪ್ಪು ಹಾಕದ ಮಾಲಿಕರು’

‘ಗ್ರಾಮದಲ್ಲಿ ಕೊಳೆಗೇರಿಗಳನ್ನು ಸೃಷ್ಟಿಸುತ್ತಿರುವ ಹಂದಿಗಳ ಮಾಲಿಕರು ಹರಿಹರದಲ್ಲಿದ್ದು ಸಾರ್ವಜನಕರ ದೂರಿನ ಮೇರೆಗೆ ಪಂಚಾಯ್ತಿಯವರು ತಮ್ಮ ಹಂದಿಗಳನ್ನು ಹಿಡಿದುಕೊಂಡು ಹೋಗುವಂತೆ ಎಚ್ಚರಿಕೆ ನೀಡಿದ್ದರೂ ಇತ್ತಕಡೆ ಸುಳಿಯುತ್ತಿಲ್ಲ ಪಂಚಾಯ್ತಿ ಸೂಚನೆಯನ್ನು ಪಾಲಿಸದೇ ಉಪೇಕ್ಷಿಸುತ್ತಿರುವುದು ಜನರನ್ನು ಕೆರಳಿಸುವಂತೆ ಮಾಡಿದೆ’

**

‘ಸಾರ್ವಜನಿಕರಿಂದ ದೂರುಗಳು ಬಂದಿವೆ, ಈಗಾಗಲೇ ಹಂದಿ ಮಾಲೀಕರನ್ನು ಕುಮಾರಪಟ್ಟಣ ಪೊಲೀಸ್ ಠಾಣೆಗೆ ಕರೆಸಿ ನಿಯಂತ್ರಣ ಮಾಡುವಂತೆ ಸೂಚಿಸಲಾಗಿತ್ತು ಆದರೆ ಪ್ರಯೋಜನವಾಗಿಲ್ಲ ಇನ್ನೊಮ್ಮೆ ತಿಳಿಸುತ್ತೇನೆ ಸ್ಪಂದಿಸದಿದ್ದಲ್ಲಿ ನೋಟೀಸ್ ನೀಡಿ ನಾವೇ ಹಂದಿಗಳನ್ನು ಹಿಡಿಸಿ ಬೇರೆಡೆಗೆ ಸಾಗಿಸಲಾಗುವುದು’
– ದೇವರಾಜ್ ಜಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೊಡಿಯಾಲ ಹೊಸಪೇಟೆ

**

ಗ್ರಾಮ ಪಂಚಾಯ್ತಿ ಮತ್ತು ಪೊಲೀಸ್‌ಠಾಣೆಯೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ
– ಭೀಮಪ್ಪ ಗೋಣೆಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರು, ಕುಮಾರಪಟ್ಟಣ

**

ಯಾವುದಾದರೂ ಬೈಕ್‌, ಆಟೋ, ಸೈಕಲ್‌ ಅಂಗಡಿಗಳ ಮುಂದೆ ನಿಲ್ಲಿಸುವುದೇ ತಡ ವಾಸನೆಯಿಡಿದು ಚೀಲಗಳಲ್ಲಿ ಕಟ್ಟಿದ ತಿಂಡಿ–ತಿನಿಸುಗಳನ್ನು ಯಾರ ಭಯವಿಲ್ಲದೆ ಕಚ್ಚಿಕೊಂಡು ಹೋಗುತ್ತವೆ
– ಮಹದೇವ್ ಎಂ, ಸ್ಥಳೀಯ ಅಂಗಡಿ ವ್ಯಾಪಾರಿ, ಕುಮಾರಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT