ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ಸಾಧ್ಯವಿಲ್ಲ

ಸೇಡಂ: ಧಾರ್ಮಿಕ ಸಭೆಯಲ್ಲಿ ಹಂಗನಳ್ಳಿ ಕಾರ್ತಿಕೇಶ್ವರ ಸಂಸ್ಥಾನ ಮಠದ ವೀರಗಂಗಾಧರ ಶ್ರೀ ಅಭಿಮತ
Last Updated 23 ಏಪ್ರಿಲ್ 2018, 9:52 IST
ಅಕ್ಷರ ಗಾತ್ರ

ಸೇಡಂ: ‘ರಾಜಕೀಯ ಪ್ರೇರಣೆಯಿಂದ ಕೂಡಿರುವ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಎಂದಿಗೂ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೂ ಸಹ, ಅದು ತಿರಸ್ಕಾರಗೊಂಡು ವೀರಶೈವ ಲಿಂಗಾಯತ ಪರಂಪರೆ ಎರಡೂ ಒಂದೇ ಆಗಿ ಮುಂದುವರಿಯಲಿವೆ’ ಎಂದು ಹಂಗನಳ್ಳಿ ಕಾರ್ತಿಕೇಶ್ವರ ಸಂಸ್ಥಾನ ಮಠದ ವೀರಗಂಗಾಧರ ಶಿವಾಚಾರ್ಯ ಹೇಳಿದರು.

ತಾಲ್ಲೂಕಿನ ಹಂಗನಳ್ಳಿ ರಸ್ತೆಯ ನೃಪತುಂಗ ನಗರದಲ್ಲಿ ಭಾನುವಾರ ಆದಿತ್ಯ ನಗರ ವೀರಶೈವ ಸೇವಾ ಸಮಿತಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಯೋಜಿಸಿದ ಹಾರಕೂಡ ಚನ್ನಬಸವ ಶಿವಯೋಗಿ ಶಿವಾಚಾರ್ಯರ 13ನೇ ಜಾತ್ರಾ ಮಹೋತ್ಸವ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿ ರುವ ಕಡತಗಳು ತಿರಸ್ಕೃತಗೊಂಡು ರಾಜ್ಯಸರ್ಕಾರಕ್ಕೆ ಮರಳಲಿವೆ. ಎಂದಿಗೂ ವೀರಶೈವ ಲಿಂಗಾಯತ ಪ್ರತ್ಯೇಕತೆ ಆಗುವುದಿಲ್ಲ. ಕೇವಲ ಸೌಲಭ್ಯ ಗಳಿಗೋಸ್ಕರ ಧರ್ಮ ಒಡೆದು ಇಬ್ಭಾಗ ಮಾಡುವುದು ಸರಿಯಾದುದಲ್ಲ. ಒಗ್ಗಟ್ಟಿನ ಮನೋಭಾವ ಹೊಂದಿ ಸಮಾಜದಲ್ಲಿ ಭಾವನಾತ್ಮಕ ಧಾರ್ಮಿಕತೆಯ ಏಕತೆಯನ್ನು ಸಾಧಿಸ ಬೇಕಿದೆ’ ಎಂದು ತಿಳಿಸಿದರು.

ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿ, ‘ಧರ್ಮದ ಹಾದಿಯನ್ನು ಅರಿತು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಪೂಜ್ಯರೇ ಧರ್ಮ ಒಡೆಯಲು ಮುಂದಾಗಿರುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಹೀಗೇ ಮುಂದುವರಿದಲ್ಲಿ ಧಾರ್ಮಿಕತೆಯ ಕಿಚ್ಚು ಹೆಚ್ಚುತ್ತದೆ. ಬದಲಾಗಿ ಕಾವಿ ಧರಿಸಿದ ಪೂಜ್ಯರು ಧರ್ಮದ ಕುರಿತು ಭಕ್ತರಲ್ಲಿ ಏಕತೆಯ ಭಕ್ತಿಯ ಸಂದೇಶವನ್ನು ಬಿತ್ತಬೇಕು’ ಎಂದು ಮನವಿ ಮಾಡಿದರು.

ಚನ್ನಬಸವ ಶಿವಯೋಗಿ ಶಿವಾಚಾರ್ಯ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಶಸ್ತ್ರ ಪ್ರಯೋಗ ನಡೆಯಿತು. ಕುಂಭ ಹೊತ್ತ ಮಹಿಳೆಯರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಶೋಭೆ ತಂದರು. ಮಳಖೇಡ ಭಂಗಿ ಮಠದ ಗಂಗಾಧರ ಶಿವಾಚಾರ್ಯ ಧಾರ್ಮಿಕ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಳಖೇಡ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದ್ರಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ, ತಾಲ್ಲೂಕು ಘಟಕ ಅಧ್ಯಕ್ಷ ಶರಣಬಸಪ್ಪ ಹಾಗರಗಿ, ರಂಗಕರ್ಮಿ ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಶಂಕರ ಬಿರಾದಾರ ಮಾತನಾಡಿದರು. ವಿಜಯಕುಮಾರ ರೆಡ್ಡಿ ಮಳಖೇಡ, ಬಸವರಾಜ ಬೊಮ್ಮನಳ್ಳಿ, ರುದ್ರಪ್ಪ ಡಿಗ್ಗಾವಿ, ಸಿದ್ರಾಮಪ್ಪಗೌಡ, ಶಾಂತಾಬಾಯಿ ಬಿರಾದಾರ, ಶಿವರುದ್ರಪ್ಪ ಮೇಳಗಿ ಪಾಲ್ಗೊಂಡಿದ್ದರು.

**

ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ವೀರಶೈವ ಲಿಂಗಾಯತ ಧರ್ಮದ ಪರಂಪರೆಯನ್ನು ಅಲ್ಲಗಳೆಯದೇ ಮುಂದುವರಿಸಿಕೊಂಡು ಹೋಗಬೇಕು
ಶಿವಯ್ಯಸ್ವಾಮಿ ಬಿಬ್ಬಳ್ಳಿ, ಕಾರ್ಯದರ್ಶಿ, ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT