ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮುಕ್ತ ರೈತ ನಮ್ಮ ಗುರಿ

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಆದನಗೌಡ ಪಾಟೀಲ
Last Updated 23 ಏಪ್ರಿಲ್ 2018, 10:46 IST
ಅಕ್ಷರ ಗಾತ್ರ

ಕೊಪ್ಪಳ: ಎರಡು ರಾಷ್ಟ್ರೀಯ ಪಕ್ಷಗಳ ಮೇಲೆ ಬೇಸರ. ಅವರ ವೈಫಲ್ಯಗಳನ್ನೇ ಜನರ ಮುಂದಿಡುವ ಪ್ರಯತ್ನ. ಎಚ್‌.ಡಿ.ಕುಮಾರಸ್ವಾಮಿ ಅವರ ಪರಿಕಲ್ಪನೆಗಳನ್ನು ಜನರ ಮುಂದಿಟ್ಟು ಮತಯಾಚಿಸಲು ಮುಂದಾಗಿದ್ದಾರೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಆದನಗೌಡ ಪಾಟೀಲ.

'ನಾವು ಅವರಿವರನ್ನು ಟೀಕಿಸುವುದಿಲ್ಲ. ನಾವೇನು ಮಾಡುತ್ತೇವೆ ಎಂಬುದನ್ನು ಜನರಿಗೆ ಹೇಳುತ್ತೇವೆ. ಪ್ರಾದೇಶಿಕ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಶಕ್ತಿ ಹೊಂದಿರುತ್ತದೆ. ಇದೇ ನಮ್ಮ ಪ್ಲಸ್‌ ಪಾಯಿಂಟ್‌' ಎಂಬ ವಿಶ್ವಾಸ ಅವರದ್ದು. ಜನರ ಮುಂದೆ ಹೋಗುವ ಸಿದ್ಧತೆಯನ್ನು ಅವರು ‘ಪ್ರಜಾವಾಣಿ’ ಮುಂದಿಟ್ಟದ್ದು ಹೀಗೆ.

ಈ ಚುನಾವಣೆಯಲ್ಲಿ ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

ಎರಡೂ ರಾಜಕೀಯ ಪಕ್ಷಗಳಿಂದ ಜನಪರ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದ ಕಾರ್ಯವೈಖರಿ ನೋಡಿದರೆ ದೇಶ ದಿವಾಳಿತನದತ್ತ ಹೋದ ಆತಂಕ ಕಾಡುತ್ತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರಿಗೆ ಭರವಸೆ ನೀಡಿದ ಸಾಲಮನ್ನಾ, ಪಿಂಚಣಿ, ಮಾಸಾಶನ ಯೋಜನೆ ಹೀಗೆ ಜನರಿಗೆ ಹತ್ತಿರವಿರುವ ಪ್ರಣಾಳಿಕೆಯನ್ನು ಕೊಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮ ಸರ್ಕಾರ ನಡೆದುಕೊಳ್ಳಲಿದೆ. ಈ ಕಾರಣಕ್ಕಾಗಿ ಜನರು ನಮ್ಮನ್ನು ಗೆಲ್ಲಿಸಬೇಕು.

ಯಾವ ವಿಷಯಗಳನ್ನು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೀರಿ?

ಎರಡೂ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ. ಜನಪರ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ.

ವೀರಶೈವ–ಲಿಂಗಾಯತ ವಿವಾದ ನಿಮ್ಮ ಪಕ್ಷಕ್ಕೆ ಲಾಭ ತಂದುಕೊಡುತ್ತದೆಯೇ?

ಕಾಂಗ್ರೆಸ್‌ ಜನರನ್ನು ಜಾತಿ ಆಧಾರದಲ್ಲಿ ಒಡೆದಿದೆ. ಬಿಜೆಪಿಗೆ ವೀರಶೈವ- ಲಿಂಗಾಯತ ವಿಚಾರದಲ್ಲಿ ಆಸಕ್ತಿ ಇಲ್ಲ. ರಾಜ್ಯ ಸರ್ಕಾರ ಮಾಡಿದ್ದೇನು? ಈ ವಿಚಾರವನ್ನು ತೆಗೆದುಕೊಂಡು ಹೋಗಿ ಕೇಂದ್ರದ ಮುಂದಿಟ್ಟಿದೆ ಅಷ್ಟೇ. ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೈಗೊಳ್ಳುವುದೂ ಇಲ್ಲ. ಇದರಿಂದ ವೀರಶೈವ- ಲಿಂಗಾಯತ ಎರಡೂ ಸಮುದಾಯದವರು ಎರಡೂ ಪಕ್ಷಗಳ ಮೇಲೆ ಸಿಟ್ಟಾಗಿದ್ದಾರೆ. ಸಹಜವಾಗಿ ಅವರು ನಮ್ಮತ್ತ ಒಲವು ತೋರಿಸಲಿದ್ದಾರೆ. ಜನರನ್ನು ಇಂಥ ವಿಚಾರಗಳೊಳಗೆ ಸಿಲುಕಿಸಿ ಗೊಂದಲ ಸೃಷ್ಟಿಸಬಾರದು.

ಪಕ್ಷಾಂತರಿಗಳಿಗೆ ಮಣೆ, ನಿಷ್ಠರ ಗಡೆಗಣನೆ ಎಂಬ ಆರೋಪ ಇದೆಯಲ್ಲಾ?

- ನಾವು ಯಾರನ್ನೂ ಪಕ್ಷಾಂತರ ಮಾಡಿಲ್ಲ. ನಮ್ಮ ತತ್ವ, ಸಿದ್ಧಾಂತಗಳನ್ನು ಇಷ್ಟಪಟ್ಟು ಕೆಲವರು ಬಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರನ್ನೂ ಒಟ್ಟಿಗೇ ವಿಶ್ವಾಸದಲ್ಲಿ ತೆಗೆದುಕೊಂಡು ಹೋಗುತ್ತೇವೆ.

ನಿಮ್ಮ ಪಕ್ಷದ ಘೋಷಿತ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದೆಯೇ?

ಸದ್ಯ ಯಾವುದೇ ಅಭ್ಯರ್ಥಿಗಳ ಬದಲಾವಣೆ ಇಲ್ಲ. ಕೊಪ್ಪಳ ಮತ್ತು ಗಂಗಾವತಿಯ ಅಭ್ಯರ್ಥಿಗಳು ಯಾರು ಎಂಬುದು ಒಂದೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.

ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?

ನೀರಾವರಿಯೇ ನಮ್ಮ ಆದ್ಯತೆ. ಕೃಷ್ಣಾ ಬಿ ಸ್ಕೀಂ ಹೆಸರಿನಲ್ಲಿ ಎರಡೂ ಪಕ್ಷಗಳು ಕಾಲಹರಣ ಮಾಡುತ್ತಲೇ ಬಂದಿವೆ. ನಾವು ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ. ಕೆರೆ ತುಂಬಿಸುವ ಯೋಜನೆ, ಪಡಿತರ ಕಾರ್ಡ್‌ನಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆ ಇತ್ಯಾದಿ ಮೇಲ್ನೋಟಕ್ಕೆ ಸಣ್ಣ ಸಮಸ್ಯೆಗಳು ಎನಿಸಿದರೂ ಜನಸಾಮಾನ್ಯರ ಮಟ್ಟಿಗೆ ಅವು ದೊಡ್ಡ ಸಮಸ್ಯೆಗಳೇ ಹೌದು. ಯೋಜನೆಗಳಿಗೆ ಹಣ ಹೊಂದಿಸಲು ತೆರಿಗೆ ಸೋರಿಕೆ ನಿಲ್ಲಿಸಿ ಆದಾಯ ಸಂಗ್ರಹ ಹೆಚ್ಚಿಸಬೇಕು. ಇದು ನಮ್ಮ ಗುರಿ.

ಈಗಿನ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳ ನಿರ್ಧಾರಗಳೇನೇ ಆಗಬೇಕಿದ್ದರೂ ಅವರು ಕೇಂದ್ರದ ಮೇಲೆ ಅವಲಂಬಿತರಾಗುತ್ತಾರೆ. ಆದರೆ, ಪ್ರಾದೇಶಿಕ ಪಕ್ಷ  ತನ್ನ ವ್ಯಾಪ್ತಿಯೊಳಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ.

ನಿಮ್ಮ ಪಕ್ಷ ಗೆಲ್ಲಲು ಇರುವ ಅವಕಾಶಗಳು ಯಾವುವು?

ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಇದೆ. ಬೇರೆ ಪಕ್ಷದವರು ಕಾಂಗ್ರೆಸ್‌ ಮುಕ್ತ ಭಾರತ, ಬಿಜೆಪಿ ಮುಕ್ತ ಭಾರತ ಎಂದೆಲ್ಲಾ ಹೇಳುತ್ತಿದ್ದಾರೆ. ಇದು ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ನಮ್ಮದು ಸಾಲಮುಕ್ತ ರೈತ ಎಂಬ ಗುರಿ ಹಾಗೂ ಘೋಷವಾಕ್ಯ. ಇದು ನಮ್ಮ ಗೆಲುವಿಗೆ ಅವಕಾಶವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT