ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುವ ಬಿಸಿಲು: ಎಳನೀರಿಗೆ ಭಾರಿ ಬೇಡಿಕೆ

ಹೆಚ್ಚುತ್ತಿರುವ ಉಷ್ಣಾಂಶ; ದೇಹ ಸಂರಕ್ಷಣೆಗಾಗಿ ತಂಪು ಪಾನಿಯಗಳಿಗೆ ಮೊರೆ ಹೋದ ಜನ
Last Updated 23 ಏಪ್ರಿಲ್ 2018, 10:56 IST
ಅಕ್ಷರ ಗಾತ್ರ

ಮಂಡ್ಯ: ಈ ಬಿರು ಬೇಸಿಗೆಯಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಫ್ಯಾನ್‌, ಎಸಿ ಇಲ್ಲದೆ ಮನೆಯ ಒಳಗಿರುವುದು ಹಿಂಸೆ ಎನಿಸುತ್ತಿದೆ. ಫ್ರಿಜ್‌ನಲ್ಲಿರುವ ಜ್ಯೂಸ್‌ ದಾಹ ತೀರಿಸುತ್ತಿಲ್ಲ. ಹೀಗಾಗಿ ಜನರು ಎಳನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿದ್ದಾರೆ.

ಹೌದು, ನಗರದೆಲ್ಲೆಡೆ ಎಳನೀರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಎಲ್ಲೆಡೆ ತಳನೀರು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಎಳನೀರು ಮಾರಾಟ ಕೇಂದ್ರಗಳು ತಲೆ ಎತ್ತಿವೆ. ನಗರದ ನೂರು ಅಡಿ ರಸ್ತೆ, ವಿವಿ ರಸ್ತೆ, ಆರ್‌ಪಿ ರಸ್ತೆಗಳಲ್ಲಿ ಹೆಜ್ಜೆಗೆ ಒಂದರಂತೆ ಎಳನೀರು ಅಂಗಡಿಗಳನ್ನು ತೆರೆಯಲಾಗಿದೆ. ಇನ್ನು ವ್ಯಾಪಾರಿಗಳು ಸೈಕಲ್‌ನಲ್ಲಿ ವಿವಿಧೆಡೆ ಸುತ್ತುತ್ತಾ ಎಳನೀರು ಮಾರುತ್ತಿದ್ದಾರೆ.
ಕೆಲವರು ನಿತ್ಯ ಮನೆಗೆ ತೆರಳಿ ಮನೆಮಂದಿಗೆಲ್ಲ ಎಳನೀರು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಟೊದಲ್ಲಿ ಮೊಬೈಲ್‌ ಮಾರಾಟ ಕೇಂದ್ರ ತೆರೆದಿದ್ದಾರೆ.

‘ನಾನು ಪ್ರತಿನಿತ್ಯ ಬಂದೀಗೌಡ ಬಡಾವಣೆಯ ಮನೆಗಳಿಗೆ ಎಳೆನೀರು ಪೂರೈಸುತ್ತೇನೆ. ಮನೆಗೇ ಹೋಗಿ ಕೊಟ್ಟರೆ ₹ 5 ಜಾಸ್ತಿ ಕೊಡುತ್ತಾರೆ. ಸೈಕಲ್‌ ತುಳಿದುಕೊಂಡು ಹೋಗಿ ಕೊಟ್ಟು ಬರುತ್ತೇನೆ. ನಿತ್ಯವೂ ಮಧ್ಯಾಹ್ನ ಎಳನೀರು ಪೂರೈಸುವಂತೆ ಮನೆಯ ಮಾಲೀಕರು ತಿಳಿಸಿದ್ದಾರೆ. ತಾಜಾ ಎಳನೀರು ಪೂರೈಸುತ್ತಿದ್ದೇನೆ’ ಎಂದು ವ್ಯಾಪಾರಿ ಚಂದ್ರೇಗೌಡ ತಿಳಿಸಿದರು.

ರೈತರಿಂದ ನೇರ ಮಾರಾಟ: ವಿವಿಧೆಡೆ ರೈತರು ನೇರವಾಗಿ ಎಳನೀರು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಿದರೆ ಪ್ರತಿ ಎಳನೀರಿಗೆ ₹ 15–20ಕ್ಕೆ ಕೊಡುತ್ತಾರೆ. ಆದರೆ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಕಾರಣ ಪ್ರತಿ ಎಳನೀರಿಗೆ ₹ 30 ಸಂಪಾದನೆ ಮಾಡುತ್ತಿದ್ದಾರೆ. ನಗರದ ಸುತ್ತಮುತ್ತಲಿನ ಹಳ್ಳಿಗಳ ಜನರು ಎತ್ತಿನಗಾಡಿ, ಆಟೊ, ಸೈಕಲ್‌ ಮೂಲಕ ಎಳನೀರು ತಂದು ಮಾರಾಟ ಮಾಡುತ್ತಿದ್ದಾರೆ. ಎಷ್ಟೇ ಎಳನೀರು ತಂದರೂ ಮಧ್ಯಾಹ್ನ 1 ಗಂಟೆಯೊಳಗೆ ಎಲ್ಲವೂ ಮಾರಾಟವಾಗುತ್ತಿವೆ.

‘ನಾನು ಪ್ರತಿದಿನ ಸಂತೆಕಸಲಗೆರೆಯಿಂದ ಸೈಕಲ್‌ನಲ್ಲಿ 100 ಎಳನೀರು ತರುತ್ತೇನೆ. ಬೆಳಿಗ್ಗೆ 11 ಗಂಟೆಗೆ ಕೇಂದ್ರ ಕಾರಾಗೃಹದ ಬಳಿ ಬರುತ್ತೇನೆ. ಕೇವಲ ಒಂದು ಗಂಟೆಯಲ್ಲಿ ಎಲ್ಲವೂ ಮಾರಾಟವಾಗುತ್ತಿವೆ. ಈ ಮೂರು ತಿಂಗಳು ಎಳನೀರಿಗೆ ತುಂಬಾ ಬೇಡಿಕೆ ಇದೆ’ ಎಂದು ರೈತ ನಾಗರಾಜು ಹೇಳಿದರು.

ಉತ್ತಮ ಗುಣಮಟ್ಟದ ಎಳನೀರು: ರಾಜ್ಯದಲ್ಲಿ ಎಲ್ಲೂ ಸಿಗದ ಉತ್ತಮ ಗುಣಮಟ್ಟದ ಎಳನೀರು ಮಂಡ್ಯ ಜಿಲ್ಲೆಯಲ್ಲಿ ದೊರೆಯುತ್ತದೆ. ಅದರಲ್ಲೂ ಮಂಡ್ಯ ಹಾಗೂ ಮದ್ದೂರು ತಾಲ್ಲೂಕಿನ ಎಳ ನೀರು ಎಂದರೆ ಎಲ್ಲೆಲ್ಲೂ ಹೆಸರುವಾಸಿ. ಮದ್ದೂರಿನ ಎಳನೀರು ಮಾರುಕಟ್ಟೆ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು. ‘ಹೆಚ್ಚು ನೀರು ಹಾಗೂ ಸಿಹಿ’ಯಲ್ಲಿ ಮಂಡ್ಯದ ಎಳನೀರು ಪ್ರಖ್ಯಾತಿ ಹೊಂದಿದೆ. ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವವರು ಮಂಡ್ಯದಲ್ಲಿ ತಪ್ಪದೇ ಎಳನೀರು ಕುಡಿಯುತ್ತಾರೆ.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ಎಳನೀರು ವ್ಯವಹಾರ ನಡೆಯುತ್ತದೆ. ಮದ್ದೂರು ಮಾರುಕಟ್ಟೆಯಿಂದ ಅತೀ ಹೆಚ್ಚು ಎಳನೀರು ಹೊರರಾಜ್ಯಗಳಿಗೆ ಸರಬರಾಜು ಆಗುತ್ತಿತ್ತು. ಆದರೆ ಈಗ ಬೇಸಿಗೆಯಾಗಿರುವ ಕಾರಣ ಇಲ್ಲೇ ಮಾರಾಟವಾಗುತ್ತಿವೆ. ಬೇರೆ ರಾಜ್ಯಗಳಿಗೆ ಕಳುಹಿಸುವುದು ಕಡಿಮೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳಿಗೆ ಹೆಚ್ಚು ಎಳನೀರು ಪೂರೈಸಲಾಗುತ್ತಿದೆ’ ಎಂದು ವ್ಯಾಪಾರಿ ರಾಮಕೃಷ್ಣ ಹೇಳಿದರು.

ಎಳನೀರಿಗೆ ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗಿದೆ. ಮೊದಲು ಉತ್ತಮ ಗುಣಮಟ್ಟದ ಎಳನೀರು ₹ 25ಕ್ಕೆ ದೊರೆಯುತ್ತಿತ್ತು. ಈಗ ಒಳ್ಳೆಯ ಎಳನೀರು ಕುಡಿಯಲು ₹ 30 ಕೊಡಬೇಕಾಗಿದೆ. ಸಣ್ಣದು ಹಾಗೂ ಒಣಗಿರುವ ಎಳನೀರು ₹ 20ಕ್ಕೆ ದೊರೆಯುತ್ತಿದೆ.

ಮಾರುಕಟ್ಟೆಯಲ್ಲಿ ಆಂಧ್ರ ಬಾದಾಮಿ ಮಾವು

ಹಣ್ಣುಗಳ ರಾಜ ಮಾವಿನ ಹಣ್ಣು ಈಗಷ್ಟೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಮೇ ಮೊದಲ ವಾರದಲ್ಲಿ ಮಾರುಕಟ್ಟೆಯಲ್ಲೆಡೆ ಮಾವಿನ ಹಣ್ಣುಗಳು ರಾರಾಜಿಸುತ್ತವೆ. ಈಗಾಗಲೇ ಕೆಲವೆಡೆ ಆಂಧ್ರಾ ಬಾದಾಮಿ ಮಾರುಕಟ್ಟೆಗೆ ಬಂದಿದೆ. ಬಿಗ್‌ ಬಜಾರ್‌, ರಿಲಾಯನ್ಸ್‌ ಫ್ರಶ್‌, ಮೋರ್‌ ಮಳಿಗೆಗಳಲ್ಲಿ ಆಂಧ್ರಾ ಬಾದಾಮಿ ಮಾರಾಟ ಮಾಡಲಾಗುತ್ತಿದೆ. ಆದರೆ ಕೆ.ಜಿಗೆ ₹ 200 ಬೆಲೆ ಇದೆ. ಇನ್ನೆರಡು ವಾರ ಕಳೆದರೆ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಸ್ಥಳೀಯ ಮಾವಿನ ಹಣ್ಣು ಕಾಣಬಹುದು.

‘ರಾಮನಗರ ಬಾದಾಮಿಯ ಹಣ್ಣಿನ ಕುಯ್ಲು ಈಗಾಗಲೇ ಆರಂಭವಾಗಿದೆ. ಇನ್ನೆರಡು ವಾರದಲ್ಲಿ ಹಣ್ಣು ಮಾರುಕಟ್ಟೆಗೆ ಬರಲಿದೆ. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಸಿಹಿಯಾದ ಹಣ್ಣುಗಳು ಗ್ರಾಹಕರ ಕೈಗೆ ಸಿಗುತ್ತದೆ’ ಎಂದು ಹಣ್ಣಿನ ವ್ಯಾಪಾರಿ ತೌಫಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT