ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅನಿಲ್‌ ಚಿಕ್ಕಮಾದು ಪರ ಮತಯಾಚನೆ
Last Updated 23 ಏಪ್ರಿಲ್ 2018, 12:11 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ಕೈಲಾಸ, ಇಂದ್ರಲೋಕವನ್ನೇ ಭೂಮಿಗೆ ತರುತ್ತೇವೆ ಎಂದು ಯಾವತ್ತೂ ಹೇಳಬಾರದು. ಕೈಯಲ್ಲಾಗುವ ಕೆಲಸವನ್ನಷ್ಟೇ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ 24ಗಂಟೆಯೊಳಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ. ಅವರ ಭರವಸೆ ಈಡೇರುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ರೈತರ ಮೇಲೆ ₹52 ಸಾವಿರ ಕೋಟಿ ಸಾಲ ಇದೆ. ₹42 ಸಾವಿರ ಕೋಟಿ ಸಾಲವನ್ನು ಕೇಂದ್ರದ ಬ್ಯಾಂಕ್‌ಗಳು ಕೊಟ್ಟಿವೆ. ರೈತರ ಸಾಲ ಮನ್ನಾ ಮಾಡಿ ಎಂದು ಕೇಳಲು ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರ ನಿಯೋಗದೊಂದಿಗೆ ಪ್ರಧಾನಿ ಬಳಿ ಹೋಗಿದ್ದೆವು. ಸಾಲ ಮನ್ನಾ ಮಾಡುವಂತೆ ಗೋಗರೆದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ನವರು ತುಟಿ ಬಿಚ್ಚಲಿಲ್ಲ. ಇಂಥವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಿಟ್ಟಾದರು.

ನನ್ನ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದೆಯಾ, ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೇನಾ ಎಂದು ಜನರಿಗೆ ಪ್ರಶ್ನೆ ಹಾಕಿದರು. ಆಗ ಸಭೆಯಲ್ಲಿದ್ದವರು ‘ಇಲ್ಲ... ಇಲ್ಲ’ ಎಂದು ಕೂಗುತ್ತಿದ್ದಂತೆ, ಮತ್ತ್ಯಾಕೆ ಜನ ಶಿಕ್ಷೆ ಕೊಡುತ್ತಾರೆ ಎಂದು ಮರುಪ್ರಶ್ನೆ ಹಾಕಿದರು.

ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ, ಇದರಲ್ಲಿ ಎಳ್ಳಷ್ಟೂ ಸತ್ಯಾಂಶ ಇಲ್ಲ. ಇವರಿಗೆ ಮುಸಲ್ಮಾನ, ಕ್ರೈಸ್ತರು, ದಲಿತರು ಹಾಗೂ ಹಿಂದುಳಿದವರು ಬೇಡ. ಇನ್ನೂ ಜೆಡಿಎಸ್‌ನವರು ಅಧಿಕಾರಕ್ಕೆ ಬರುವವರಲ್ಲ. ಟೀಕೆ ಮಾಡಲು ಈ ಮಾತು ಹೇಳುತ್ತಿಲ್ಲ. ಗೆದ್ದ 40 ಶಾಸಕರಲ್ಲಿ 11 ಮಂದಿ ಪಕ್ಷ ಬಿಟ್ಟು ಹೋಗಿದ್ದಾರೆ. ಉಳಿದ 29ರಲ್ಲಿ 10 ಮಂದಿ ಸೋಲುತ್ತಾರೆ. ಬಹಳ ಅಂದ್ರೆ ಇಪ್ಪತ್ತರಿಂದ ಇಪ್ಪತ್ತೈದು ಮಂದಿ ಗೆಲ್ಲಬಹುದು. ಯಾವ ಪಕ್ಷವೂ ಬರದಿದ್ದರೆ ರಾಜಕೀಯ ಆಟ ಆಡಬಹುದು ಎಂದುಕೊಂಡಿದ್ದಾರೆ ಎಂದು ಟೀಕಿಸಿದರು.

ಕಳ್ಳರೆಲ್ಲಾ ಒಟ್ಟಾಗಿದ್ದಾರೆ: ಬಿಜೆಪಿ 60ರಿಂದ 65 ಸ್ಥಾನಗಳನ್ನು ಗೆದ್ದರೆ ದೊಡ್ದದು. ಯಡಿಯೂರಪ್ಪ ಸೇರಿದಂತೆ ಕೇಂದ್ರದ ಎಲ್ಲಾ ನಾಯಕರು ನನ್ನನ್ನೇ ಟೀಕೆ ಮಾಡುತ್ತಾರೆ. ಜನಾರ್ದನರೆಡ್ಡಿ, ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು, ಢೋಂಗಿಗಳು. ಕಳ್ಳರೆಲ್ಲಾ ಒಟ್ಟಾಗಿದ್ದಾರೆ. ಇಂಥವರಿಗೆ ಗುಡ್ ಬೈ ಹೇಳಿ ಎಂದು ಜನರಲ್ಲಿ ಮನವಿ ಮಾಡಿದರು.

ಪಕ್ಷ ಸೇರ್ಪಡೆ: ಪುರಸಭೆ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ತಜ್ಮುಲ್, ಪುಟ್ಟಬಸವನಾಯಕ, ಅನಿಲ್, ರತ್ನಮ್ಮ, ಸುಹಾಸಿನಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗಿರಿಗೌಡ, ಸುಂದರನಾಯಕ, ಮೈಮುಲ್ ನಿರ್ದೇಶಕ ಈರೇಗೌಡ, ಆದಿವಾಸಿ ಗಿರಿಜನ ಮುಖಂಡ ಕಾವೇರ ಕಾಂಗ್ರೆಸ್ ಸೇರಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಸಿ.ಮೋಹನಕುಮಾರಿ, ಸಂಸದ ಧ್ರುವನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀಕೃಷ್ಣ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಉಸ್ತುವಾರಿ ಕಾವೇರಪ್ಪ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಕೆ.ಕೃಷ್ಣ, ಪಕ್ಷದ ವಕ್ತಾರ ತೇಜಸ್ವಿ, ಮುಖಂಡರಾದ ಎಚ್.ಸಿ.ಶಿವಣ್ಣ, ಎಂ.ಸಿ.ದೊಡ್ಡನಾಯಕ, ಶಂಭೂಲಿಂಗ ನಾಯಕ, ಕೃಷ್ಣೇಗೌಡ, ಸುರೇಂದ್ರ ಡಿ.ಗೌಡ, ರವಿ, ಸಿದ್ದರಾಮು, ಶಿವಪ್ಪ ಕೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಗಾಳಕ್ಕೆ ಸಿಕ್ಕ ಮೀನು...

ಚಿಕ್ಕಮಾದು ಹಾಗೂ ನಾನು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದೆವು. ಆಮೆಲೆ ನಾನು ಶಾಸಕನಾದೆ. ಉಪಚುನಾವಣೆ ಸಂದರ್ಭದಲ್ಲಿ ಚಿಕ್ಕಮಾದು ಅವರನ್ನು ಕಾಂಗ್ರೆಸ್‌ಗೆ ಕರೆತರಲು ಬಂಗಾರಪ್ಪ ಹಾಗೂ ನಾನು ಸೇರಿಕೊಂಡು ಗಾಳ ಹಾಕಿದರೂ ಜಗ್ಗಿರಲಿಲ್ಲ. ಕೊನೆಗೆ ಒಪ್ಪಿಕೊಂಡಿದ್ದರು. ಆದರೆ, ಅವರ ಆರೋಗ್ಯ ಕೆಟ್ಟುಹೋಯಿತು. ಅದೇ ಗಾಳಕ್ಕೆ ಈಗ ಅವರ ಮಗ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಐದಾರು ಬಾರಿ ಗೆದ್ದವರೆಲ್ಲಾ ಟಿಕೆಟ್‌ ಸಿಗದೆ ವಂಚಿತರಾಗಿ ಕೂತಿದ್ದಾರೆ. ಅನಿಲ್‌ ಮನೆ ಬಾಗಿಲಿಗೆ ಟಿಕೆಟ್‌ ಸಿಕ್ಕಿರುವುದು ಅವರ ತಂದೆ ಮಾಡಿದ ಜನಸೇವೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT