ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದ ಅಭಿವೃದ್ಧಿ ಜೆಡಿಎಸ್‌ನಿಂದ ಸಾಧ್ಯ’

ಶ್ರೀಪತಿಹಳ್ಳಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎ.ಮಂಜು ಮತಯಾಚನೆ
Last Updated 23 ಏಪ್ರಿಲ್ 2018, 12:35 IST
ಅಕ್ಷರ ಗಾತ್ರ

ಕಲ್ಯ(ಮಾಗಡಿ): ರಾಜ್ಯದ ಅಭಿವೃದ್ಧಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ ಹೇಳಿದರು.

ಶ್ರೀಪತಿಹಳ್ಳಿಯಲ್ಲಿ ಭಾನುವಾರ ಮನೆ ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.‘ಜೆಡಿಎಸ್‌ ಅಧಿಕಾರದಲ್ಲಿ ಇದ್ದಾಗ ಮಾತ್ರ ರಾಜ್ಯ ಅಭಿವೃದ್ಧಿಯಾಗಿದೆ. ಹೇಮಾವತಿ ನದಿ ನೀರನ್ನು ತಾಲ್ಲೂಕಿನ 84 ಕೆರೆಗಳಿಗೆ ಹರಿಸುವುದು ನನ್ನ ಜೀವನದ ಬಹುದೊಡ್ಡ ಕನಸು. ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸತ್ಯ. ಅವರು ಅಧಿಕಾರ ವಹಿಸಿಕೊಂಡ ತಕ್ಷಣ ರೈತ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುತ್ತದೆ’ ಎಂದು ಹೇಳಿದರು.

4 ಬಾರಿ ಶಾಸಕರಾಗಿದ್ದವರು ಮಹಿಳೆಯರಿಗಾಗಿ ಒಂದು ಸಿದ್ಧ ಉಡುಪು ಉದ್ಯಮ ಮಾಡಲಿಲ್ಲ. ಕೇವಲ ಶಾಸಕರಾದರೆ ಸಾಲದು ಜನಪರ ಕಾಳಜಿಯಿಂದ ಕೆಲಸ ಮಾಡಿ ತೋರಿಸಬೇಕು ಎಂದು ಹೇಳಿದರು.

‘ಜನರು ನೀಡಿದ ಅಧಿಕಾರವನ್ನು ಅವರ ಪ್ರಗತಿಗೆ ಬಳಸಬೇಕು ಎಂಬುದು ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರ ತತ್ವ. ಈ ಬಾರಿ ತಾಲ್ಲೂಕಿನ ಮತದಾರರು ಜೆಡಿಎಸ್‌ ‍ಪಕ್ಷದತ್ತ ಒಲವು ತೋರಿಸಿದ್ದಾರೆ. ಒಂದೇ ಒಂದು ಬಾರಿ ನನಗೆ ಮತನೀಡಿ ಅವಕಾಶ ಮಾಡಿಕೊಡಿ, ನಿಮ್ಮ ಸೇವೆ ಮಾಡಿ ತೋರಿಸುತ್ತೇನೆ’ ಎಂದರು. ‌

‘ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕೊಡಲು ಕಾರ್ಖಾನೆ ಪ್ರಾರಂಭಿಸಲಾಗುವುದು. ಕೆರೆಕಟ್ಟೆಗಳಿಗೆ ಹೇಮಾವತಿ ನದಿ ನೀರು ತುಂಬಿಸ
ಲಾಗುವುದು. ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನನ್ನ ಕರ್ಮಭೂಮಿ ಮಾಗಡಿ ವಿಧಾನಸಭಾ ಕ್ಷೇತ್ರ. ತಿಮ್ಮೇಗೌಡನ ದೊಡ್ಡಿಯಲ್ಲಿ ಜನಿಸಿದ್ದೇನೆ. ಎಚ್‌.ಸಿ.ಬಾಲಕೃಷ್ಣ ದೊಡ್ಡವರು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ’ ಎಂದು ತಿಳಿಸಿದರು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ಜುಟ್ಟನಹಳ್ಳಿ ಜಯರಾಮಯ್ಯ, ಕೃಷ್ಣಪ್ಪ, ಬೋರೇಗೌಡ ಮನೆ ಮನೆಗೆ ತೆರಳಿ ಎ.ಮಂಜು ಪರವಾಗಿ ಮತಯಾಚಿಸಿದರು.

ಕೆಂಪಸಾಗರದ ಮಂಜುನಾಥ ತಂಡದವರು ಕಾಂಗ್ರೆಸ್‌ ಪಕ್ಷ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್‌ ಅಭ್ಯರ್ಥಿಗೆ ಹೇಮಾವತಿ ನೀರಾವರಿ ಯೋಜನೆ ಗೊತ್ತಿದೆಯೇ?

ಮಾಗಡಿ: ಹೇಮಾವತಿ ನೀರಾವರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರಿಗೆ ಕಿಂಚಿತ್ತೂ ಪರಿಚಯ ಇಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಟೀಕಿಸಿದರು.

ಕಲ್ಯಾ ಗ್ರಾ.ಪಂ ವ್ಯಾಪ್ತಿಯ ದೇವರಹಟ್ಟಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ತಾಲ್ಲೂಕಿನಲ್ಲಿ ಎಷ್ಟು ಕೆರೆಗಳಿವೆ. ಯಾವ ಕೆರೆಗಳಿಗೆ ಎಷ್ಟು ನೀರು ತುಂಬಿಸಬೇಕು. ಹೇಮಾವತಿ ನದಿ ನೀರು ಹರಿದು ಬರುವ ಮಾರ್ಗ ಯಾವುದು ಎಂಬುದರ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ಅಭಿವೃದ್ಧಿ ಮಾಡದೆ 20ವರ್ಷ ಶಾಸಕರಾಗಿ ಕಳೆದದ್ದೇ ಅವರ ಮಹತ್ವದ ಸಾಧನೆ. ನಾಲ್ಕು ಬಾರಿ ಶಾಸಕರಾಗಿ ಇರುವ ಬಾಲಣ್ಣ ನಿನ್ನ ಸಾಧನೆ ಏನಣ್ಣ ಎಂದು ಹೋದ ಕಡೆಯಲೆಲ್ಲ ಮತದಾರರು ಕೇಳಬೇಕು’ ಎಂದು ಕುಟುಕಿದರು.

ಅರಣ್ಯ ಇಲಾಖೆಗೆ ಸೇರಿದ್ದ 300ಎಕರೆ ಭೂಮಿ ಅಕ್ರಮವಾಗಿ ವಶಪಡಿಸಿಕೊಂಡಿದ್ದೀರಿ. ಬಡ ಹೆಣ್ಣು ಮಕ್ಕಳಿಗೆ ಒಂದೊಂದು ಎಕರೆ ಜಮೀನು ನೀಡುವಿರಾ? ಎಂದು ಸವಾಲು ಹಾಕಿದರು.

‘ಐದು ವರ್ಷಗಳಿಂದ ಒಡೆದು ಆಳುವ ಕೆಲಸ ಮಾಡಿದ್ದೀರಿ. ಬಸವೇಶ್ವರ ನಗರದ ಬಂಗಲೆಯಲ್ಲಿ ಕುಳಿತರೆ ಕ್ಷೇತ್ರದ ಅಭಿವೃದ್ಧಿಯಾಗುವುದೇ’ ಎಂದರು. ‘ಕಳೆದ ಬಾರಿ ನಿಮ್ಮ ಎದುರು ಸೋತರೂ ಮನೆಯಲ್ಲಿ ಕೂರದೆ ಹೇಮಾವತಿ ನೀರು ತರಲು ಸತತ ಹೋರಾಟ ನಡೆಸಿದ್ದೇನೆ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ರಾಮಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಮುಖಂಡರಾದ ಹೇಮಂತ, ಮಂಜುನಾಥ್, ಕೃಷ್ಣಪ್ಪ, ಮೂರ್ತಿ, ಜುಟ್ಟನಹಳ್ಳಿ ಜಯರಾಮಯ್ಯ, ಭೈರೇಗೌಡ, ವಾಟರ್ ಬೋರ್ಡ್ ರಾಮಣ್ಣ ಮತ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT