ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದು ಇಲ್ಲದಂತಾಗಿರುವ ಸ್ವಾಗತ ಕಮಾನುಗಳು

ಮಾಹಿತಿಗಾಗಿ ದಾರಿಹೋಕರ ಮೊರೆಹೋದ ಪ್ರವಾಸಿಗರು
Last Updated 23 ಏಪ್ರಿಲ್ 2018, 12:47 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಕ್ಕೆ ಬರುವವರನ್ನು ಸ್ವಾಗತಿಸುವುದಕ್ಕಾಗಿ ಹಾಗೂ ಜಿಲ್ಲೆಯ ಪ್ರಮುಖ ಸ್ಥಳಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದಕ್ಕಾಗಿ ನಿರ್ಮಿಸಿರುವ ಸ್ವಾಗತ ಕಮಾನುಗಳು ಇದೀಗ ಇದ್ದು ಇಲ್ಲದಂತಾಗಿವೆ.

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಹಲವೆಡೆ ಬೃಹತ್‌ ಗಾತ್ರದಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಿದೆ. ಇದಕ್ಕಾಗಿ ಸಾಕಷ್ಟು ಹಣ ವಿನಿಯೋಗಿಸಿದೆ. ಆದರೆ, ಪ್ರಯಾಣಿಕರಿಗೆ ಅನುಕೂಲವಾಗಬೇಕಿದ್ದ ಈ ಕಮಾನುಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಪ್ರಯಾಣಿಕರಿಗೆ ನಿಖರವಾದ ಮಾಹಿತಿ ಸಿಗದೇ ಗೊಂದಲಕ್ಕೆ ಸಿಲುಕುವಂತಾಗಿದೆ.

ಜಿಲ್ಲೆಯಲ್ಲಿ ಯಾವ ಪ್ರಮುಖ ಪ್ರವಾಸಿ ತಾಣಗಳಿವೆ. ಅಲ್ಲಿಗೆ ತೆರಳಲು ಯಾವ ಮಾರ್ಗದಲ್ಲಿ ಸಾಗಬೇಕು. ಅದು ಎಷ್ಟು ಕಿ.ಮೀ ದೂರದಲ್ಲಿದೆ. ಹೀಗೆ ಅನೇಕ ಉಪಯುಕ್ತ ಮಾಹಿತಿಗಳು ಈ ಸ್ವಾಗತ ಕಮಾನುಗಳಲ್ಲಿವೆ. ಅಲ್ಲದೇ ಪ್ರವಾಸಿಗರ ಅನುಕೂಲಕ್ಕಾಗಿ ಫಲಕಗಳಲ್ಲಿನ ಬರಹಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಈ ಎಲ್ಲ ಮಾಹಿತಿಗಳಿಂದ ಪ್ರವಾಸಿಗರಿಗೆ ತುಂಬಾ ಅನುಕೂಲವಾಗುತ್ತಿದೆ. ಆದರೆ ಈ ಫಲಕದಲ್ಲಿ ಬರೆದಿರುವ ಮಾಹಿತಿ ಮತ್ತು ಅಕ್ಷರಗಳು ಸಂಪೂರ್ಣ ಅಳಸಿಹೋಗಿವೆ. ಇದರಿಂದ ಪ್ರಯಾಣಿಕರು ಅಂದುಕೊಂಡ ಸ್ಥಳಕ್ಕೆ ಹೇಗೆ ಸಾಗಬೇಕು ಎಂದು ತಿಳಿಯದೇ ರಸ್ತೆಗಳಲ್ಲಿ ವಾಹನ ನಿಲ್ಲಿಸಿ, ರಸ್ತೆಬದಿ ವ್ಯಾಪಾರಿಗಳು, ಸಂಚಾರ ಪೊಲೀಸರು ಮತ್ತು ದಾರಿಹೋಕರಿಂದ ವಿಳಾಸ ವಿಚಾರಿಸಿ ಮುಂದೆ ಸಾಗುವ ದೃಶ್ಯಗಳು ಸಾಮಾನ್ಯ.

ಪ್ರವಾಸಿಗರ ಪಾಲಿನ ಸ್ವರ್ಗ : ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮಾನ್ಯತೆ ಪಡೆದಿರುವ ಶಿವಮೊಗ್ಗ ಪ್ರವಾಸಿಗರ ಸ್ವರ್ಗವೆಂದೇ ಕರೆಸಿಕೊಂಡಿದೆ. ತನ್ನ ಪ್ರಾಕೃತಿಕ ಸೊಬಗಿನ ಕಾರಣದಿಂದ ಇಡೀ ಶಿವಮೊಗ್ಗ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ವಿಶ್ವವಿಖ್ಯಾತ ಜೋಗ ಜಲಪಾತ, ಆಗುಂಬೆ, ಕುಪ್ಪಳಿ, ಕವಲೆದುರ್ಗ, ಬರ್ಕಣ ಜಲಾಪತ, ಕುಂದಾದ್ರಿ ಬೆಟ್ಟ, ಬಳ್ಳಿಗಾವೆ, ಇಕ್ಕೇರಿ, ಕೆಳದಿ, ಚದರವಳ್ಳಿ, ನಾಡಕಲಸಿ, ವಡನಬೈಲು, ಸಕ್ರೆಬೈಲು, ಲಿಂಗನಮಕ್ಕಿ, ವರದಹಳ್ಳಿ, ವರದಾಮೂಲ, ಸಾಗರ, ಸಿಗಂಧೂರು, ಹೊನ್ನೆಮರಡು, ಹೊಸಗುಂದ, ಗುಡವಿ, ಚಂದ್ರಗುತ್ತಿ, ಹುಂಚ, ಕಾರಣಗಿರಿ, ಕುಬುಟೂರು, ಕೂಡ್ಲಿ, ತಾಳಗುಂದ, ಮಂಡಗದ್ದೆ, ಮಹಿಷಿ, ಅಮೃತಾಪುರ, ರಾಮಚಂದ್ರಪುರ ಮಠ, ನಗರಕೋಟೆ, ಕೊಡಚಾದ್ರಿ, ಚಕ್ರಾ, ಸಾವೆಹಕ್ಲು, ಮಾಣಿಡ್ಯಾಂ, ವರಾಹಿ, ಅಂಬುತೀರ್ಥ, ಚಿಪ್ಪಲಗುಡ್ಡೆ, ಲಯನ್‌ಸಫಾರಿ ಹೀಗೆ ನೂರಾರು ಪ್ರವಾಸಿ ತಾಣಗಳು ಇಲ್ಲಿವೆ. ಇವುಗಳ ಸೌಂದರ್ಯ ಸವಿಯಲು ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಸೂಕ್ತ ಮಾಹಿತಿ ನೀಡುವಲ್ಲಿ ಸ್ವಾಗತ ಕಮಾನುಗಳು ವಿಫಲವಾಗಿವೆ.

ಜಾಣ ಕುರುಡು : ಶಿವಮೊಗ್ಗ ಹೊಳೆ ಬಸ್ಟಾಪ್‌ ಸೇತುವೆ ಬಳಿ ಬೃಹದಾಕಾರದ ಕಮಾನು ನಿರ್ಮಿಸಲಾಗಿದೆ. ಈ ಕಮಾನಿನಲ್ಲಿ ಬರೆದಿರುವ ಜಿಲ್ಲೆಯ ಪ್ರಮುಖ ಪ್ರವಾಸಿಗಳ ತಾಣಗಳ ಚಿತ್ರ ಮತ್ತು ಮಾಹಿತಿ ಸಂಪೂರ್ಣ ಮಾಸಿಹೋಗಿದೆ. ಅಲ್ಲದೇ ಶಿವಮೊಗ್ಗ ಬಸ್‌ನಿಲ್ದಾಣದ ಅಶೋಕ ವೃತ್ತದಲ್ಲಿ ನಿರ್ಮಿಸಿರುವ ಬೃಹದಾಕಾರದ ಕಮಾನಿನಲ್ಲಿ ಅಕ್ಷರಗಳು ಕಿತ್ತುಹೋಗಿ ತಿಂಗಳುಗಳೇ ಕಳೆದಿವೆ. ಆದರೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಿ ಪ್ರವಾಸೋಧ್ಯಮ ಇಲಾಖೆಯಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಸರಿಪಡಿಸಲು ಮುಂದಾಗದೇ ಜಾಣ ಕುರುಡುತನ ಪ್ರದರ್ಶಿಸುತ್ತಿವೆ.

**

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸೇರಿದ ಸ್ವಾಗತ ಕಮಾನುಗಳು ಎಲ್ಲೆಲ್ಲಿ ಹಾಳಾಗಿವೆ ಎಂಬುದನ್ನು ತಿಳಿದು ಸರಪಡಿಸುತ್ತೇನೆ. ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತರುತ್ತೇನೆ 
ಬಣಕಾರ್, ಅಧೀಕ್ಷಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT