ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ, ಗುಬ್ಬಿ, ಪಾವಗಡದಲ್ಲಿ ಮಳೆ ಆರ್ಭಟ: ಅಸ್ತವ್ಯಸ್ತ

ಸಿಡಿಲಿಗೆ ಮಹಿಳೆ ಬಲಿ, ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಗಿಡಮರ
Last Updated 23 ಏಪ್ರಿಲ್ 2018, 13:01 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರ ಸೇರಿದಂತೆ ಪಾವಗಡ, ಶಿರಾ ಮತ್ತು ತುರುವೇಕೆರೆ ತಾಲ್ಲೂಕುಗಳಲ್ಲಿ ಭಾನುವಾರ ಭಾರಿ ಗಾಳಿಯೊಂದಿಗೆ ಮಳೆ ಆರ್ಭಟಿಸಿತು.

ಮಳೆಗಾಳಿಗೆ ಪಾವಗಡದಲ್ಲಿ ಮನೆಯ ಚಾವಣಿ ಶೀಟ್ ಹಾರಿದ್ದು, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ವಿದ್ಯುತ್ ಕಂಬಗಳು, ಮರಗಳು, ಸಾವಿರಾರು ಬಾಳೆ ಗಿಡಗಳು ನೆಲಕ್ಕುರುಳಿವೆ.

ಪಾವಗಡ ವರದಿ: ಪಾವಗಡ ಪಟ್ಟಣದ ಕುಮಾರ ಸ್ವಾಮಿ ಬಡಾವಣೆಯ ರಾಮಾಂಜನೇಯ ಎಂಬುವರ ಮನೆ ಚಾವಣಿಗೆ ಹೊದಿಸಿದ್ದ ಶೀಟ್‌ಗಳು ಹಾರಿ ಹೋಗಿವೆ. ಮಾರಕ್ಕ ಎಂಬುವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಂದಾಯ ನಿರೀಕ್ಷಕ ಗಿರೀಶ್, ಗ್ರಾಮ ಲೆಕ್ಕಾಧಿಕಾರಿ ರಾಜಗೋಪಾಲ್ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣದ ಪೊಲೀಸ್ ಠಾಣೆ ಮುಂದೆ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಮಳೆ ನೀರು ರಸ್ತೆಯಲ್ಲಿ ನಿಲ್ಲುವಂತಾಯಿತು. ಇದರಿಂದ ಕೆಲ ಕಾಲ ವಾಹನ ಸವಾರರು ಪರದಾಡದಿರು.

ಶಿರಾ ವರದಿ: ತಾಲ್ಲೂಕಿನ ಚಂಗಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ ಸುರಿದ ಆಕಾಲಿಕ ಮಳೆ ಹಾಗೂ ಗಾಳಿಗೆ ಮರಗಳು ಬಿದ್ದು 3 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಗಾಳಿಯಿಂದಾಗಿ 4 ತೆಂಗಿನ ಮರ, 2 ಬೇವಿನ ಮರಗಳು ಉರುಳಿ ಬಿದ್ದಿವೆ. ಅಲ್ಲದೇ, 6 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ.

ಗೋವಿಂದಪ್ಪ, ಪರಮೇಶ್ ಹಾಗೂ ಮತ್ತೊಬ್ಬ ವ್ಯಕ್ತಿಯ ಮನೆ ಸೇರಿ 3 ಮನೆಗಳ ಚಾವಣಿ ಶೀಟ್‌ಗಳು ಗಾಳಿಗೆ ಹಾರಿವೆ. ಕೆಲ ಕಡೆ ವಿದ್ಯುತ್ ಕಂಬಗಳು ಬಿದ್ದಿವೆ.

ತುರುವೇಕೆರೆ ವರದಿ: ತಾಲ್ಲೂಕಿನ ವಿವಿಧ ಕಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಕೆಲ ಕಡೆ ವಿದ್ಯುತ್ ಕಂಬಗಳು ವಿದ್ಯುತ್ ಲೈನ್ ಮೇಲೆ ತುಂಡರಿಸಿ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

‘ಮಾಯಸಂದ್ರ ಹೋಬಳಿ ಮಾವಿನಕೆರೆ ಗ್ರಾಮದಲ್ಲಿ 2 ಕಂಬ ಬಿದ್ದಿವೆ. ಗೈನಾಥಪುರದಲ್ಲಿ ಒಂದು ಮರ, ವಿದ್ಯುತ್ ಕಂಬ ನೆಲಕ್ಕುರುಳಿವೆ. ಅದೇ ರೀತಿ ಬಾವಿನಕೆರೆಯ ಕಾಳಿಕಾಂಬ ದೇವಸ್ಥಾನ, ಕೊಟ್ಟೂರು ಕೊಟ್ಟಿಗೆಯ ಆರ್.ಎಂ.ಸಿ ಮುಂಭಾಗ, ಹಿರೇಡೊಂಕಿಹಳ್ಳಿ, ದೊಡ್ಡೇನಹಳ್ಳಿ, ದಬ್ಬೇಘಟ್ಟದಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಬೆಸ್ಕಾಂ ಇಲಾಖೆಯ ಧರಣೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಬ್ಬಿ ವರದಿ: ಗುಬ್ಬಿ, ಕೆ.ಜಿ.ಟೆಂಪಲ್‌, ಸಿ.ಎಸ್‌.ಪುರ ಗ್ರಾಮಗಳಲ್ಲಿ ಮಳೆ ಆರ್ಭಟ ತೋರಿತು. ಸಣ್ಣಪುಟ್ಟ ಹಳ್ಳಗಳು ತುಂಬಿ ಹರಿದವು. ಚೇಳೂರಿನಲ್ಲಿ ಸಿಡಿಲು ಬಡಿದು ಸೌಭಾಗ್ಯಮ್ಮ (56)ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT