ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾಗೆ ಹಿಂದೇಟು ಏಕೆ?

ಮಧುಗಿರಿ: ರೋಡ್‌ ಶೋದಲ್ಲಿ ಕಾಂಗ್ರೆಸ್‌, ಬಿಜೆಪಿ ಸರ್ಕಾರಕ್ಕೆ ಚಿತ್ರನಟ ನಿಖಿಲ್‌ ಕುಮಾರಸ್ವಾಮಿ ಪ್ರಶ್ನೆ
Last Updated 23 ಏಪ್ರಿಲ್ 2018, 13:06 IST
ಅಕ್ಷರ ಗಾತ್ರ

ಮಧುಗಿರಿ/ವೈ.ಎನ್‌.ಹೊಸಕೋಟೆ: ಜೆಡಿಎಸ್‌ ಮುಖಂಡ, ಚಿತ್ರನಟ ನಿಖಲ್‌ ಕುಮಾರಸ್ವಾಮಿ ಮಧುಗಿರಿ ಹಾಗೂ ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆಯಲ್ಲಿ ಭಾನುವಾರ ರೋಡ್‌ ಶೋ ನಡೆಸಿದರು.

’ಕಾಂಗ್ರೆಸ್, ಬಿಜೆಪಿಯಿಂದ ರಾಜ್ಯಕ್ಕೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಈ ಸರ್ಕಾರಗಳು ಉದ್ಯಮಿ ಹಾಗೂ ಕಾರ್ಪೋರೇಟರ್‌ಗಳು ಮಾಡಿರುವ ಕೋಟಿ, ಕೋಟಿ ಸಾಲವನ್ನು ಮನ್ನಾ ಮಾಡಿವೆ. ಆದರೆ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಬಡವರ ಹಾಗೂ ರೈತರ ಪಕ್ಷವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುದು ಎಂದು ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹಲವು ಸಮಾರಂಭಗಳಲ್ಲಿ ಹೇಳಿದ್ದಾರೆ. ಆದ್ದರಿಂದ ಜೆಡಿಎಸ್ ಅಧಿಕಾರಕ್ಕೆ ತಂದರೆ ಜನರು ಯಾರೂ ವಿಧಾನ ಸೌಧದ ಬಳಿ ಹೋಗುವಂತಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಜನರ ಮನೆ ಬಾಗಿಲಿಗೆ ಬರುತ್ತಾರೆ ಎಂದು ತಿಳಿಸಿದರು.

ಶಾಸಕ ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ನೀಡುವ ಮೂಲಕ ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಮಾತನಾಡಿ,  ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತವನ್ನು ಜನರು ನೋಡಿ ರೋಸಿ ಹೋಗಿದ್ದಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕಾಂತರಾಜು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಂ.ಎಲ್.ಗಂಗರಾಜು, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ತಿಮ್ಮರಾಯಪ್ಪ, ಮಂಜುನಾಥ್, ಜೆಡಿಎಸ್ ಮುಖಂಡರಾದ ಬೆಳ್ಳಿ ಲೋಕೇಶ್, ಟಿ.ರಾಮಣ್ಣ, ಲಕ್ಷ್ಮಮ್ಮ, ಟಿ.ಗೋವಿಂದರಾಜು, ಕೇಬಲ್ ಸುಬ್ಬು, ಮೋಹನ್, ಪ್ರಭು, ರಾಘವೇಂದ್ರ ಇದ್ದರು.

ವೈ.ಎನ್.ಹೊಸಕೋಟೆಯಲ್ಲಿ ನಿಖಿಲ್‌ ಕುಮಾರಸ್ವಾಮಿ, ‘ತಾಲ್ಲೂಕಿನ ಯುವ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಜೆಡಿಎಸ್‌ಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದಲ್ಲಿ ಅವಕಾಶ ಕೊಟ್ಟಿದ್ದೀರಿ. ಅವರ ಕಾಲವಧಿಯಲ್ಲಿ ರೈತರ ಆತ್ಮಹತ್ಯೆಗಳ ಸರಣಿಯೇ ನಡೆದಿದೆ. ರೈತರ ಹಿತಕ್ಕಾಗಿ ಇರುವ ಏಕೈಕ ಪಕ್ಷ ಜೆಡಿಎಸ್ ಮಾತ್ರವಾಗಿದೆ’ ಎಂದು ಅವರು ಹೇಳಿದರು.

ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ,  ‘ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಆಂಧ್ರಪ್ರದೇಶದ ಮಾದರಿಯಲ್ಲಿ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು’ ಎಂದು ಹೇಳಿದರು.

ಮುಖ್ಯಮಂತ್ರಿಯಾದರೆ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಆಗುತ್ತದೆ. ತಾಲ್ಲೂಕಿಗೆ ಆಂಧ್ರ ಪ್ರದೇಶದ ಮಾದರಿಯಲ್ಲಿ ನೀರು ಹರಿಸಲಾಗುವುದು. ಮತ್ತು ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾರ ಜಮೀನಿನ ಅಕ್ಕಿಯೂ ಅಲ್ಲ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ನಿಲ್ಲಿಸುತ್ತಾರೆ ಎಂದು ಕ್ಷೇತ್ರದಲ್ಲಿ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಅಕ್ಕಿಯನ್ನು ಸಿದ್ದರಾಮಯ್ಯ ಹಾಗೂ ಕೆ.ಎನ್.ರಾಜಣ್ಣ ಜಮೀನುನಲ್ಲಿ ಬೆಳೆದು ತಂದುಕೊಡುತ್ತಿಲ್ಲ
– ಎಂ.ವಿ.ವೀರಭದ್ರಯ್ಯ, ಜೆಡಿಎಸ್ ಅಭ್ಯರ್ಥಿ

ಮಧುಗಿರಿ: ಪಟ್ಟಣದಲ್ಲಿ ಭಾನುವಾರ ನಡೆಯುತ್ತಿದ್ದ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ರೋಡ್‌ ಶೋ ವೇಳೆ ಮೆರವಣಿಗೆಯಲ್ಲಿದ್ದ ಕಾರ್ಯಕರ್ತರನ್ನು ಬೇಗಬೇಗ ಸಾಗುವಂತೆ ಚುನಾವಣಾಧಿಕಾರಿ ಮಹಾದೇವಸ್ವಾಮಿ ಒತ್ತಾಯಿಸಿದ ಕಾರಣ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನವರು ಮೆರವಣಿಗೆ ನಡೆಸಿದಾಗ ಏನನ್ನು ಪ್ರಶ್ನಿಸುವುದಿಲ್ಲ. ರೋಡ್ ಶೋ ನಡೆಸಲು ಅನುಮತಿ ಪಡೆಯಲಾಗಿದೆ. ಜೋರಾಗಿ ಏಕೆ ಹೋಗಬೇಕು. ಬೇಗ ಏಕೆ ಮುಗಿಸಬೇಕು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ: ಈ ವಿಷಯ ತಿಳಿಯುತ್ತಿದ್ದಂತೆ ಪುರಸಭೆಯ ಕಾಂಗ್ರೆಸ್‌ ಸದಸ್ಯೆ ಭಾಗಮ್ಮ ಅವರ ನೇತೃತ್ವದಲ್ಲಿ ಕೆಲವು ಮುಖಂಡರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ’ಮಹಾದೇವಸ್ವಾಮಿ ಅವರನ್ನು ತಳ್ಳಾಡಿ, ನೂಕಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಜೆಡಿಎಸ್‌ನವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.’ಅಧಿಕಾರಿಯು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.ಮುಖಂಡರಾದ ಡಿ.ಟಿ.ಸಂಜೀವಮೂರ್ತಿ, ಗಿರೀಶ್, ರಮೇಶ್ ಕನಕದಾಸ್, ಭಾಸ್ಕರ್, ಚಂದ್ರಮ್ಮ, ಶಿವಕುಮಾರ್ ಇತರರು ಇದ್ದರು.

ಜೆಡಿಎಸ್‌ ಪ್ರತಿಭಟನೆ: ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ಮಾಡುತ್ತಿರುವುದನ್ನು ತಿಳಿದು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಸಹ ಪ್ರತಿಯಾಗಿ ಪ್ರತಿಭಟನೆ ನಡೆಸಿದರು.

’ಚುನಾವಣಾಧಿಕಾರಿ ಪರ ಕಾಂಗ್ರೆಸ್‌ನವರು ಏಕೆ ಪ್ರತಿಭಟನೆ ನಡೆಸಬೇಕು. ಅಧಿಕಾರಿ ಕಾಂಗ್ರೆಸ್‌ ಪರ ಇದ್ದಾರೆ ಎಂಬುದು ಇದರಿಂದಲೇ ಗೊತ್ತಾಗಲಿದೆ’ ಎಂದು ಆರೋಪಿಸಿದರು.

‘ ಮಹಾದೇವಯ್ಯ ಅವರ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ಅನೇಕ ದೂರುಗಳನ್ನು ನೀಡಲಾಗಿದೆ. ಅವರು ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು  ತಕ್ಷಣ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಚುನಾವಣೆ ಮುಗಿಯವವರೆಗೂ ಕ್ಷೇತ್ರದಿಂದ ಹೊರಗೆ ಕಳು
ಹಿಸಬೇಕು. ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಟಿ.ಗೋವಿಂದರಾಜು, ಭಾಸ್ಕರ್, ನವೀನ್, ಬಸವರಾಜು, ಕಂಬತ್ತನಹಳ್ಳಿ ರಘು, ತಿಪ್ಪೇರುದ್ರಯ್ಯ ಇದ್ದರು.

ದೂರು ನೀಡುತ್ತೇನೆ: ‘ಕರ್ತವ್ಯದಲ್ಲಿದ್ದ ನನ್ನನ್ನು ತಳ್ಳಾಡಿ, ನೂಕಾಡಿದ್ದಾರೆ. ನನ್ನನ್ನು ನಿಂದಿಸಿದ್ದಾರೆ. ನೂಕಾಡಿದವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದೇನೆ’ ಎಂದು ಚುನಾವಣಾಧಿಕಾರಿ ಮಹಾದೇವಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT