ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಜೊತೆಯಾದ ಕಾರು

Last Updated 23 ಏಪ್ರಿಲ್ 2018, 20:29 IST
ಅಕ್ಷರ ಗಾತ್ರ

‘ನಮ್ಮಲ್ಲಿ ಮಾವನ್ನು ಕೆ.ಜಿಗೆ 5 ರೂಪಾಯಿಯಂತೆ ಕೊಳ್ಳುತ್ತಾರೆ. ಇದರಿಂದ ಬೆಳೆದ ರೈತನಿಗೆ ಏನೂ ಲಾಭವಿಲ್ಲ. ಕಳೆದ ಬಾರಿ ನಾನೇ ತಿಪಟೂರು, ತುಮಕೂರಿಗೆ ಕಾರಿನಲ್ಲಿ ತುಂಬಿಕೊಂಡು ಹೋಗಿ ಬೀದಿ ಬದಿ, ಕೆ.ಜಿಗೆ 80 ರೂಪಾಯಿಯಂತೆ ಮಾರಾಟ ಮಾಡಿದೆ. ಪ್ರತೀವರ್ಷ ಐದು ಸಾವಿರ ಸಂಪಾದಿಸುತ್ತಿದ್ದ ಮಾವು 70 ಸಾವಿರ ರೂಪಾಯಿ ಆದಾಯ ತಂದುಕೊಟ್ಟಿತು. ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡಬೇಕೆಂದು ನನ್ನ ಹಳೆಯ ಮಾರುತಿ 800 ಕಾರಿಗೆ ಟ್ರೈಲರ್ ಮಾಡಿಕೊಂಡಿದ್ದೇನೆ. ಇದರಲ್ಲೇ ಅಡಿಕೆ, ಸಿಮೆಂಟು ಸಾಗಣೆ, ಜನರೇಟರ್, ಡ್ರಮ್‌ ಗಳಿಂದ ಮಾವಿಗೆ ಕೀಟನಾಶಕ ಸಿಂಪಡಣೆ, ಇನ್ನೂ ಅನೇಕ ಕೆಲಸಗಳಿಗೆ ಬಳಸುತ್ತಿದ್ದೇನೆ’ ಎನ್ನುತ್ತಾರೆ ಕೃಷಿಕ ಮೋಹನ್.

ಕೃಷಿ ಉತ್ಪನ್ನಗಳು 100 ಕೆ.ಜಿ ಇರಲಿ ಅಥವಾ ಒಂದು ಟನ್ ಇರಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಮೂರು ಚಕ್ರದ ವಾಹನ ಅಥವಾ ಟೆಂಪೊಗಳಂತಹ ಗಾಡಿಗಳನ್ನು ನೆಚ್ಚಿಕೊಳ್ಳಲೇಬೇಕು. ಕೃಷಿ ಸಂಬಂಧಿತ ಸಾಮಾನುಗಳನ್ನು ತಮ್ಮಲ್ಲಿರುವ ವಾಹನಗಳಲ್ಲೇ ಸಾಗಿಸುವುದು ಸಾಧ್ಯವಾದರೆ ಇನ್ನೊಬ್ಬರ ಮೇಲಿನ ಅವಲಂಬನೆ ತಗ್ಗುವುದರೊಂದಿಗೆ ಆದಾಯವೂ ವೃದ್ಧಿಸುತ್ತದೆ. ಇದಕ್ಕೊಂದು ನಿದರ್ಶನವೆಂಬಂತೆ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದ ಮೋಹನ್ ಹೊಸದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಇದನ್ನು ತುಮಕೂರಿನ ಗುಜರಿ ಅಂಗಡಿಗಳಲ್ಲಿ ಹಳೇ ಕಬ್ಬಿಣ ತಂದು ಸ್ವತಃ ವೆಲ್ಡಿಂಗ್ ಮಾಡಿಕೊಂಡಿದ್ದಾರೆ. ತಮ್ಮಲ್ಲಿನ ಟಿಲ್ಲರ್ ಮತ್ತು ಟ್ರ್ಯಾಕ್ಟರ್‌ನ ಮುರಿದ ಹಿಚ್‍ಪಿನ್, ಟೋ ಆ್ಯಂಕರ್‌ಗಳನ್ನೇ ಹೊಸದಾಗಿ ಮಾಡಿದ ಟ್ರೈಲರ್‌ಗೆ ಅನುಗುಣ ವಾಗಿ ಬದಲಾಯಿಸಿಕೊಳ್ಳಲಾಗಿದೆ. ಟ್ರೈಲರ್‌ನ ಭಾರ ಕಾರಿನ ಅಕ್ಸೆಲ್ ಮೇಲೆ ಬೀಳುವಂತೆ ಜೋಡಿಸಿರುವುದರಿಂದ ಕಾರಿನ ಶಾಕ್ ಅಬ್ಸರ್ವರ್‌ನೊಟ್ಟಿಗೆ ಟ್ರಾಲಿ ಸಂಪೂರ್ಣವಾಗಿ ನೆಲಕ್ಕೆ ಇಳಿಯದಂತೆ ಜೋಡಿಸಲಾಗಿದೆ. ಹಳೆಯ ರೀಮೌಲ್ಡೆಡ್ ಟೈರ್‌ಗಳನ್ನು ಬಳಸಿರುವುದರಿಂದ ಕಾರು ಮತ್ತು ಟ್ರೈಲರ್ ಸಮಾನಾಂತರವಾಗಿ ಏರುಪೇರಿಲ್ಲದೆ ಚಲಿಸುತ್ತವೆ.

ಇದನ್ನು ಸಿದ್ಧಗೊಳಿಸಲು ಮೂರು ದಿನಗಳನ್ನು ತೆಗೆದು ಕೊಂಡಿದ್ದಾರೆ. ‘ಕಬ್ಬಿಣವನ್ನು ಗುಜರಿಯಿಂದ ತಂದು, ನಾನೇ ವೆಲ್ಡಿಂಗ್ ಮಾಡಿಕೊಂಡಿರುವುದರಿಂದ ಖರ್ಚು ಎಂಟು ಸಾವಿರದಲ್ಲಿ ಮುಗಿದಿದೆ. ಎಲ್ಲವನ್ನೂ ಹೊಸ ಕಬ್ಬಿಣದಲ್ಲಿ ಮಾಡಿಸಬೇಕೆಂದರೆ 35– 45 ಸಾವಿರ ರೂಪಾಯಿ ಆಗ ಬಹುದು. ಒಂದು ಟನ್ ತೂಕ ಎಳೆಯಬಲ್ಲದು. ಹಿಂದೊಮ್ಮೆ ಬೇರಾವುದೋ ಕೆಲಸಕ್ಕೆ ತಂದಿದ್ದ ವೆಲ್ಡಿಂಗ್ ಯಂತ್ರ ಸಹಾಯಕ್ಕೆ ಬಂದಿದೆ. ಕೊಂಚ ಆಲೋಚಿಸಿದರೆ ಟ್ರೈಲರ್‌ನಂತಹ ಗಾಡಿಗಳನ್ನು ಪ್ರತಿ ರೈತನೂ ತಯಾರಿಸಿಕೊಳ್ಳಬಹುದು’ ಎನ್ನುತ್ತಾರೆ ಮೋಹನ್.

ಮಾಹಿತಿಗೆ: 82172 92643

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT