ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆಗೆ ‘ಸಾಕ್ಷ್ಯಚಿತ್ರ’ದ ಬೆಂಬಲ; ಶಿಫಾರಸು

ಆಲಮಟ್ಟಿ ಹಿನ್ನೀರಿನಲ್ಲಿ ಅಪರೂಪದ ಪಕ್ಷಿ ಸಂಕುಲ: ರಾಜಹಂಸಗಳಿಗೆ ಪರ್ಯಾಯ ನೆಲೆ ಅಭಿವೃದ್ಧಿ ಅನಿವಾರ್ಯ
Last Updated 23 ಏಪ್ರಿಲ್ 2018, 13:33 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಹು ಅಪರೂಪದ ಪಕ್ಷಿಗಳ ಸಂಕುಲವಿದ್ದು, ಅವುಗಳ ರಕ್ಷಣೆ ಹಾಗೂ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷಿಗಳ ಕುರಿತ ಸಾಕ್ಷ್ಯಚಿತ್ರ ಸಹಿತ ಸರ್ಕಾರಕ್ಕೆ ಶಿಫಾರಸು ಮಾಡಲು ಬೆಂಗಳೂರು ಎನ್ವಿರಾನ್ಮೆಂಟಲ್ ಟ್ರಸ್ಟ್‌ ಮುಂದಾಗಿದೆ.

ಟ್ರಸ್ಟ್‌ನ ಅಧ್ಯಕ್ಷ, ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ ನೇತೃತ್ವದ ಆರು ಜನರ ತಂಡ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಕಳೆದ ಐದಾರು ದಿನಗಳಿಂದ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಸುತ್ತಿ ಪಕ್ಷಿ ಸಂಕುಲ ಕುರಿತಂತೆ  ಸಾಕ್ಷ್ಯಚಿತ್ರ ತಯಾರಿಕೆಯಲ್ಲಿ ತೊಡಗಿದೆ. ‌

‘ಹಿನ್ನೀರು ಪ್ರದೇಶಗಳಾದ ಬೀಳಗಿ ತಾಲ್ಲೂಕಿನ ಚಿಕ್ಕಸಂಗಮ, ಹೆರಕಲ್, ಯಡಹಳ್ಳಿ, ವಿಜಯಪುರ ಜಿಲ್ಲೆಯ ಕೊಲ್ಹಾರ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿ, ಆಲಮಟ್ಟಿ ಜಲಾಶಯದ ಹಿಂಭಾಗದ ಹಳೇ ಆಲಮಟ್ಟಿ, ಗಣಿ, ಚಿಮ್ಮಲಗಿ ಭಾಗದಲ್ಲಿ ಅಧ್ಯಯನ ನಡೆಸಲಾಗಿದ್ದು, ಬಹು ಅಪರೂಪದ ಫ್ಲೆಮಿಂಗ್ (ರಾಜಹಂಸ) ಪಕ್ಷಿಗಳು ಈ ಭಾಗದಲ್ಲಿ ಕಂಡು ಬರುತ್ತಿವೆ’ ಎಂದು ಯಲ್ಲಪ್ಪರೆಡ್ಡಿ ಪತ್ರಕರ್ತರಿಗೆ ತಿಳಿಸಿದರು.

‘ಈ ಅಪರೂಪದ ಪಕ್ಷಿ ಸಂಕುಲ ಈ ಭಾಗದಲ್ಲಿ ಹೆಚ್ಚಾಗಿ ನೀರಿನ ರಭಸ ಕಡಿಮೆಯಾದೊಡನೆ ಅಂದರೆ ಚಳಿಗಾಲ ಹಾಗೂ ಬೇಸಿಗೆಯ ಕಾಲದಲ್ಲಿ ಕಾಣ ಸಿಗುತ್ತವೆ’ ಎಂದೂ ಮಾಹಿತಿ ನೀಡಿದರು.

ಸ್ಥಳ ಬದಲಾವಣೆಗೆ ಅಭಿವೃದ್ಧಿ ಕಾರಣ: ‘ಗುಜರಾತ್‌ನ ಕಛ್ ಪ್ರದೇಶದಲ್ಲಿ ವಂಶಾಭಿವೃದ್ದಿ ನಡೆಸುತ್ತಿದ್ದ ಬಹು ಅಪರೂಪದ ರಾಜಹಂಸ (ಫ್ಲೆಮಿಂಗೋ) ಪಕ್ಷಿಗಳು ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿ ವರ್ಷವೂ ಬರುತ್ತಿವೆ. ಇದಕ್ಕೆ ಗುಜರಾತ್ ಕಛ್ ಪ್ರದೇಶದಲ್ಲಿ ಬಂದರು ಹಾಗೂ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅದರಿಂದ ಆ ಭಾಗದಲ್ಲಿದ್ದ ರಾಜಹಂಸ ಪಕ್ಷಿಗಳ ವಂಶಾಭಿವೃದ್ಧಿಗೆ ಆಲಮಟ್ಟಿ ಹಿನ್ನೀರು ಪ್ರದೇಶವನ್ನು ಸುರಕ್ಷತಾ ಸ್ಥಳವೆಂದು ಭಾವಿಸಿ ಇಲ್ಲಿ ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿವೆ’ ಎಂದು ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.

‘ರಾಜಹಂಸಗಳಿಗೆ ಪರ್ಯಾಯ ನೆಲೆ ಅಭಿವೃದ್ಧಿಪಡಿಸುವುದು ಅನಿವಾರ್ಯ. ಅವು ಆಲಮಟ್ಟಿ ಹಿನ್ನೀರಿನಲ್ಲಿ ನೆಲೆ ಕಂಡುಕೊಳುತ್ತಿರುವುದು ಸಂತಸದ ವಿಚಾರ. ಅವುಗಳಿಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವುದು ನಮ್ಮ ಆದ್ಯ ಕರ್ತವ್ಯ’ ಎಂದ ಅವರು,  ‘ಇನ್ನೂ ಅಪರೂಪದ ನಾನಾ ಜಾತಿಯ ಪಕ್ಷಿಗಳು ಇಲ್ಲಿ ಕಾಣ ಸಿಗುತ್ತಿವೆ’ ಎಂದು ಹೇಳಿದರು.

ಸಾಕ್ಷ್ಯಚಿತ್ರ: ಈ ಭಾಗದ ಪಕ್ಷಿ ಸಂಕುಲಗಳ ಸಾಕ್ಷಚಿತ್ರ ತಯಾರಿಸಿ ಅದರ ಮೂಲಕ ಈ ಭಾಗವನ್ನು ಪಕ್ಷಿ ಸಂರಕ್ಷಿತ ತಾಣವನ್ನಾಗಿ ಘೋಷಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಯಲ್ಲಪ್ಪರೆಡ್ಡಿ ತಿಳಿಸಿದರು.

ತಂಡದಲ್ಲಿ ಬೆಂಗಳೂರಿನ ಮಾಯಾ ಫಿಲ್ಮಸ್ ದ ಮುಖ್ಯಸ್ಥೆ ಮಾಯಾ ಚಂದ್ರ ಹಾಗೂ ಛಾಯಾಚಿತ್ರಗಾರರಾದ ಆಶಿಷ್, ಸುಹಾಸ್, ವಿನೋದ, ಮತ್ತು ನವೀನ್‌ ಚಿತ್ರ ತಯಾರಿಕೆಯ ಜವಾಬ್ದಾರಿ ತೆಗೆದುಕೊಂಡಿದ್ದು, ಬಾಗಲಕೋಟ ಜಿಲ್ಲೆಯ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಆರ್. ದೇಸಾಯಿ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸುತ್ತಿದ್ದಾರೆ. ಡ್ರೋಣ್ ಮೂಲಕವೂ ಚಿತ್ರೀಕರಣ ಸಾಗಿದೆ ಎಂದೂ ವಿವರಿಸಿದರು.

ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ಉದಪುಡಿ, ಆಲಮಟ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ನಾಯ್ಕ ಹಾಗೂ ಪಕ್ಷಿ ಪ್ರೇಮಿಗಳಾದ ಅರಣ್ಯಾಧಿಕಾರಿಗಳಾದ ಮಹೇಶ ಪಾಟೀಲ್, ಎಸ್.ಎಂ. ಖಣದಾಳಿ, ದೋನಿ ಹಾಗೂ ಇತರೆ ಸಿಬ್ಬಂದಿಯವರು ಅವರ ಈ ಕಾರ್ಯದಲ್ಲಿ ಸಾಥ್ ನೀಡುತ್ತಿದ್ದಾರೆ.

ರಕ್ಷಣೆ ಅಗತ್ಯ: ಯಲ್ಲಪ್ಪರೆಡ್ಡಿ

ಈ ಪಕ್ಷಿ ಸಂಕುಲಗಳನ್ನು ರಕ್ಷಿಸುವುದು ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬೆಂಗಳೂರು ಎನ್ವರಾನ್ಮೆಂಟಲ್ ಟ್ರಸ್ಟ್‌ನ ಚೇರಮನ್ ಹಾಗೂ ದಿಲೀಪ್‌ ಮಥಾಯಿ ಟ್ರಸ್ಟ್‌ನ ಸದಸ್ಯರೂ ಆದ ಎ.ಎನ್. ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಅಣೆಕಟ್ಟಿನ ಹಿಂಭಾಗದ ಅಂದಾಜು 427 ಚದುರ ಕಿ.ಮೀ. ವ್ಯಾಪ್ತಿಯ ಹಿನ್ನೀರು ನಿಲ್ಲುವ ಪ್ರದೇಶಗಳಲ್ಲಿ ನೂರಾರು ಜಾತಿಯ ಪಕ್ಷಿಗಳು ನೆಲೆ ಕಂಡುಕೊಂಡಿರುವುದರಿಂದ ಆಕರ್ಷಣೆಯ ತಾಣವಾಗಿದೆ.

ಮುಖ್ಯವಾಗಿ ರಾಜಹಂಸ ಪಕ್ಷಿಗಳು ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಇಲ್ಲಿಗೆ ಬರುತ್ತಿದ್ದು, ಅವುಗಳು ಹಾಗೂ ಇತರೆ ಅಪರೂಪದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿ, ದಾಖಲೆಗಳನ್ನು ಸಂಗ್ರಹಿಸಿ, ಅವುಗಳಿಗೆ ಅನುಕೂಲ ಮತ್ತು ಅನನುಕೂಲ ಆಗುವ ಅಂಶಗಳನ್ನು ಅಭ್ಯಸಿಸಿ ವಿಶಿಷ್ಟವಾದ ಸಾಕ್ಷ ಚಿತ್ರ ತಯಾರಿಸಲಾಗುತ್ತಿದೆ ಎಂದವರು ಹೇಳಿದರು.

ಶಿಫಾರಸು: ಸದರಿ ಪ್ರದೇಶಗಳನ್ನು ಅಂತರರಾಷ್ಟ್ರೀಯ ವೆಟ್ ಲ್ಯಾಂಡ್ ಹಾಗೂ ಜಲ ಪಕ್ಷಿಗಳ ಸಂರಕ್ಷಣೆ ಕುರಿತು 1971 ರಲ್ಲಿ ಆದ ರಾಮ್ಸರ್ (ಇರಾನ್) ಒಪ್ಪಂದದಂತೆ ವೆಟ್ ಲ್ಯಾಂಡ್ ಪ್ರದೇಶವೆಂದು ಘೂಷಿಸಿ ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು  ತಿಳಿಸಿದರು.

ಚಂದ್ರಶೇಖರ ಕೋಳೇಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT