ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಕೊರತೆ; ಗಗನಕ್ಕೇರಿದ ಬೆಲೆ

ರತ್ನಾಗಿರಿ ಆಫೂಸ್‌ಗೆ ಭಾರಿ ಬೇಡಿಕೆ; ಗ್ರಾಹಕರ ಜೇಬಿಗೆ ಕತ್ತರಿ
Last Updated 23 ಏಪ್ರಿಲ್ 2018, 13:38 IST
ಅಕ್ಷರ ಗಾತ್ರ

ವಿಜಯಪುರ: ಹಣ್ಣುಗಳ ರಾಜ ಮಾವಿನ ಹಣ್ಣಿನ ಕೊರತೆಯಿಂದ, ನಗರದ ಮಾರುಕಟ್ಟೆಯಲ್ಲಿ ಹಣ್ಣಿನ ದರ ಗಗನಕ್ಕೇರಿದೆ. ತಿನ್ನುವ ಆಸೆಯಿದ್ದರೂ ತುಟ್ಟಿ ಎಂಬ ಕಾರಣಕ್ಕೆ ಗ್ರಾಹಕರು ಹಣ್ಣು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಪ್ರತಿ ವರ್ಷ ಮಾರ್ಚ್‌ ಅಂತ್ಯದೊಳಗೆ ನಗರದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಮಾವಿನ ಹಣ್ಣಿನ ಘಮಲು ಮೂಗಿಗೆ ರಾಚುತ್ತಿತ್ತು. ಆದರೆ ಪ್ರಸಕ್ತ ವರ್ಷ ಒಂದು ತಿಂಗಳು ತಡವಾಗಿ ಬಂದಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಆವಕವಾಗದಿರುವುದರಿಂದ ಬೆಲೆ ಭಾರಿ ಏರಿಕೆಯಾಗಿದೆ.

‘ಹಿಂದಿನ ವರ್ಷ ಬಸವ ಜಯಂತಿ ಎನ್ನುವಷ್ಟರಲ್ಲಿ ಮಾರ್ಕೆಟ್‌ಗೆ ಬಹಳಷ್ಟು ಮಾಲ್‌ ಬಂದಿತ್ತು. ಆಗ ಮಳೆ ಇದ್ದಿದ್ದರಿಂದ ಹೆಚ್ಚು ವ್ಯಾಪಾರ ಆಗ್ಲಿಲ್ಲ. ಈ ವರ್ಷ ಬೇಡಿಕೆ ಐತಿ. ಆದ್ರ ಅಕಾಲಿಕ ಮಳೆಯಿಂದ ಹೂ, ಹಸಿ ಕಾಯಿ ಉದುರಿದ್ದರಿಂದ ಹೆಚ್ಚು ಹಣ್ಣು ಮಾರ್ಕೆಟ್‌ಗೆ ಬಂದಿಲ್ಲ. ಹಿಂಗಾಗಿ ರೇಟ್‌ ಕೂಡ ಹೆಚ್ಚಾಗಿದೆ. ಜನರು ಅಂಗಡಿಯತ್ತ ಬಂದು ಹಣ್ಣು ನೋಡುತ್ತಾರೆ. ಆದ್ರೆ, ಹೆಚ್ಚು ರೇಟ್‌ ಇದ್ದಿದ್ದರಿಂದ ಕೊಳ್ಳುವ ಮನಸ್ಸು ಮಾಡುತ್ತಿಲ್ಲ, ಹಿಂಗಾಗಿ ಹೇಳಿಕೊಳ್ಳುವಷ್ಟು ವ್ಯಾಪಾರ ಆಗುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಆರೀಫ್‌ ಗಲಗಲಿ.

‘ಬಜಾರ್‌ನಲ್ಲಿ ಸದ್ಯ ರತ್ನಗಿರಿ ಆಪೂಸ್‌, ಬೆಂಗಳೂರು ಪೈರಿ, ಹೈದರಾಬಾದ್‌ ಬೇನ್ಸ್, ಬೆಂಗಳೂರು ಲಾಲ್‌ಬಾಗ್ ಸಿಗ್ತೈತಿ. ಈ ಎಲ್ಲ ತಳಿಗಳಲ್ಲಿ ರತ್ನಾಗಿರಿ ಆಪೂಸ್‌ಗೆ ಹೆಚ್ಚಿನ ಬೇಡಿಕೆ ಐತಿ. ಡಜನ್‌ಗೆ ₹ 600ರಿಂದ 700 ಮಾರಾಟ ಆಗ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ ತಳಿ ಕೂಡ ಕೇಳ್ತಾರ. ಆದ್ರೆ, ಕಳೆದ ವಾರ ಬಂದಿತ್ತಾದ್ರೂ ಮತ್ತ ಬಂದಿಲ್ಲ’ ಎಂದು ಆರೀಫ್‌ ತಿಳಿಸಿದರು.

‘ನಮ್ಮಲ್ಲಿ ಬೆಳೆಯುವ ಜವಾರಿ ಹಣ್ಣು ಬರುವುದು ಇನ್ನೂ ತಡವಾಗುತ್ತೆ. ಹೊರ ರಾಜ್ಯಗಳ ಹಣ್ಣುಗಳು ಪ್ರತಿ ಸಲ ಮಾರ್ಚ್‌ ಆರಂಭದಲ್ಲೇ ಬರುತ್ತಿದ್ದವು. ಈ ಬಾರಿ ತಡವಾಗಿ ಬಂದಿದೆ. ರೇಟ್‌ ಕೂಡ ಹೆಚ್ಚಳಗೊಂಡಿದೆ. ಜೂನ್ ತಿಂಗಳಲ್ಲಿ ಪ್ರತಿ ವರ್ಷ ಡಜನ್‌ಗೆ ₹ 100 ರಿಂದ ₹ 120 ಇಳಿಕೆಯಾಗುತ್ತಿತ್ತು. ಈ ವರ್ಷ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ₹ 300ರಿಂದ 350 ದರ ಇರಬಹುದು’ ಎಂದು ವ್ಯಾಪಾರಿ ಅಯೂಬ್‌ ಕೊಲ್ಹಾರ ಹೇಳಿದರು.

‘ನಮ್ಮಲ್ಲಿನ ಹಣ್ಣಿಗಿಂತ ರತ್ನಾಗಿರಿ ಆಫೂಸ್‌, ಹೈದರಾಬಾದ್‌ ಬೇನ್ಸ್ ಹಣ್ಣು ಬಹಳ ರುಚಿ ಇರ್ತಾವು. ಮೊದಲೆಲ್ಲ ಹಣ್ಣಿನ ದರ ಬಹಳ ಕಡಿಮೆ ಇರುತ್ತಿತ್ತು. ಸೀಜನ್‌ ಮುಗಿಯುವಷ್ಟರಲ್ಲಿ ಏನಿಲ್ಲ ಅಂದ್ರೂ ಐದಾರು ಡಜನ್‌ ತಿನ್ನುತ್ತಿದ್ದೆವು. ಈಚೆಗೆ ಡಬ್ಬಿಯಲ್ಲಿ ಹಾಕಿ ಅಲಂಕಾರಕ ಮಾಡಿ ದುಪ್ಪಟ್ಟ ದರ ಹೇಳ್ತಾರ. ರುಚಿಕರವಾದ ಹಣ್ಣು ನೋಡಿ ಹೆಚ್ಚೆಚ್ಚು ತಿನ್ನಬೇಕು ಅಂದರೂ; ದರ ಹೆಚ್ಚಿರುವ ಕಾರಣ ಬಹಳಷ್ಟು ತಿನ್ನಲಾಗುತ್ತಿಲ್ಲ’ ಎನ್ನುತ್ತಾರೆ ಮಾವು ಪ್ರಿಯ ಅರುಣ ಕುಲಕರ್ಣಿ.

**

ಅಕಾಲಿಕ ಮಳೆಯಿಂದ ಹೂ, ಕಾಯಿ ಉದುರಿದ್ದರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮಾರ್ಕೆಟ್‌ಗೆ ಬಂದಿಲ್ಲ. ಮಾಲು ಕಡಿಮೆ ಇದ್ದಿದ್ದಕ್ಕೆ ರೇಟ್‌ ಹೆಚ್ಚಾಗಿದೆ
– ಆರೀಫ್‌ ಗಲಗಲಿ, ವ್ಯಾಪಾರಿ.

**

ಮಾವಿನ ಹಣ್ಣು ತಿನ್ನುವ ಆಸೆ ಇದೆ. ಆದರೆ ಖರೀದಿ ಮಾಡಲಾರದಷ್ಟು ತುಟ್ಟಿ ಆಗಿದೆ. ಹೋದ ವರ್ಸಕ್ಕೆ ಹೋಲಿಸಿದರೆ ಮಾರ್ಕೆಟ್‌ನಲ್ಲಿ ಬಹಳ ಅಂಗಡಿ ಇಲ್ಲ – ಎಂ.ಬಿ.ಅನವಟ್ಟಿ, ಗ್ರಾಹಕ

**

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT