ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಪ್ರೇಮಿ ರಾಜ್‌

Last Updated 23 ಏಪ್ರಿಲ್ 2018, 20:25 IST
ಅಕ್ಷರ ಗಾತ್ರ

‘ಕನ್ನಡವೆಂದರೆ ರಾಜ್‍ಕುಮಾರ್, ರಾಜ್‍ಕುಮಾರ್ ಎಂದರೆ ಕನ್ನಡ’ ಎಂಬುದು ಜನಸಾಮಾನ್ಯರ ಪರಿಕಲ್ಪನೆ. ಈ ಪರಿಕಲ್ಪನೆಯ ವಿಕಾಸಕ್ಕೆ ಒಂದು ಜೈವಿಕ ಸಂಬಂಧವಿದೆ. ಕರ್ನಾಟಕದ ಏಕೀಕರಣಗೊಳ್ಳುತ್ತಿದ್ದ ಕಾಲಘಟ್ಟದಲ್ಲಿಯೇ ರಾಜ್ (1942ರಲ್ಲಿ ಬಾಲನಟರಾಗಿ, 1954ರಲ್ಲಿ ನಾಯಕ ನಟರಾಗಿ) ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಕರ್ನಾಟಕ ಏಕೀಕರಣಗೊಂಡ (1956) ಆರಂಭದ ದಿನಗಳಿಗೂ, ರಾಜ್ ಸಿನಿಮಾರಂಗದ ಆರಂಭದ ದಿನಗಳಿಗೂ ಒಂದು ತರದ ಚಾರಿತ್ರಿಕ ಸಂಬಂಧವಿದೆ.

ಕನ್ನಡ ರಾಜ್ಯವೊಂದು ನೆಲೆ ಕಂಡುಕೊಳ್ಳುವುದು ಮತ್ತು ರಾಜ್ ಬದುಕು ಕಟ್ಟಿಕೊಳ್ಳುವುದು ಎರಡೂ ಕೂಡ ಸವಾಲಿನ ದಿನಗಳೇ ಆಗಿದ್ದವು. ಏಕೆಂದರೆ ಹಲವು ಕನ್ನಡ ಭಾಷಿಕ ಪ್ರದೇಶಗಳು ನೆರೆಹೊರೆಯ ರಾಜ್ಯಗಳಲ್ಲಿ ಹಂಚಿಹೋಗಿದ್ದವು. ರಾಜ್ ಕೂಡ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ದುರ್ಬಲ ನೆಲೆಯಿಂದ ಬಂದು, ಬದುಕು ಕಟ್ಟಿಕೊಳ್ಳುತ್ತಿದ್ದ ದಿನಗಳವು. ಸುಸ್ಥಿರ ಕರ್ನಾಟಕ ನಿರ್ಮಾಣಕ್ಕಿರುವಷ್ಟೇ ಕಷ್ಟಗಳು ರಾಜ್ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೂ ಇದ್ದವು. ಈ ಹಿನ್ನೆಲೆಯಲ್ಲಿ ಏಕೀಕರಣೋತ್ತರ ಕರ್ನಾಟಕದಲ್ಲಿರುವಂತೆಯೇ ರಾಜ್ ಬದುಕಿನಲ್ಲಿಯೂ ಏರುಪೇರುಗಳಿದ್ದವು. ಕನ್ನಡತನದ ಪ್ರತೀಕವಾಗಿ ರಾಜ್ ಬೆಳೆದ ಬಗೆಗೆ ಇದೊಂದು ಹಿನ್ನೆಲೆಯಷ್ಟೆ.

ರಾಜ್ ಅವರ ನಿಜಬದುಕು ಮತ್ತು ಚಿತ್ರಬದುಕುಗಳ ಉದ್ದಕ್ಕೂ ಕನ್ನಡತನ ಪ್ರಕಟಗೊಳ್ಳುತ್ತಲೇ ಬಂದಿದೆ. ಈ ಎರಡೂ ನೆಲೆಗಳಲ್ಲಿ ಅವರ ಚಿತ್ರಬದುಕಿನ ಕನ್ನಡಪ್ರೇಮ ಚಲನಚಿತ್ರಗಳ ಮೂಲಕ ಅನಾವರಣಗೊಂಡಿದೆ. ತಮ್ಮ ನಿಜ ಬದುಕಿನಲ್ಲಿ ಮೆರೆದ ಕನ್ನಡ ಪ್ರೇಮದ ಕೆಲವು ಪ್ರಸಂಗಗಳನ್ನು ಮೆಲುಕು ಹಾಕಲು ಪ್ರಯತ್ನವಿದು.

ರಾಜ್ ಚಿತ್ರರಂಗದಲ್ಲಿ ನಾಯಕನಟರಾಗಿ ನಟಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’. ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಅಭಿನಯಿಸಿದ ನಂತರ ಇನ್ನು ಮುಂದೆ ಕನ್ನಡ ಚಿತ್ರಗಳನ್ನು ಹೊರತು ಅನ್ಯಭಾಷೆಯ ಚಿತ್ರಗಳಲ್ಲಿ ಅಭಿನಯಿಸದಿರಲು ನಿರ್ಧರಿಸಿದರು. ತಮ್ಮ ನಿರ್ಧಾರದಂತೆ ಕೊನೆಗಾಲದವರೆಗೂ ನಡೆದುಕೊಂಡರು.

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಹಲವು ಅಪ್ಪಟ ಕನ್ನಡ ಪ್ರದೇಶಗಳು ಕರ್ನಾಟಕದ ಕೈತಪ್ಪಿದವು. ಅವುಗಳಲ್ಲಿ ಸ್ವತಃ ರಾಜ್ ಹುಟ್ಟೂರು ತಾಳವಾಡಿ ಹೋಬಳಿಯ ಗಾಜನೂರು ಕೂಡ ಒಂದು. ಹಲವು ಭಾಷಿಕ ಪ್ರದೇಶಗಳ ಮರುಹಂಚಿಕೆಯಾಗಬೇಕೆಂಬ ವಿವಾದಗಳು ಸೃಷ್ಟಿಯಾದವು. ಆಗ ಕೇಂದ್ರ ಸರ್ಕಾರ ಮಹಾಜನ್ ಆಯೋಗವನ್ನು ರಚಿಸಿತು. ಆ ಆಯೋಗ ನೀಡಿದ ವರದಿ ಕೂಡ ಕರ್ನಾಟಕಕ್ಕೆ ಮತ್ತೆ ಅನ್ಯಾಯವೆಸಗಿತು. ನ್ಯಾಯವಾಗಿ ಕರ್ನಾಟಕಕ್ಕೆ ಸೇರಬೇಕಿದ್ದ ತಾಳವಾಡಿ, ಹೊಸೂರುಗಳು ತಮಿಳುನಾಡಿನಲ್ಲಿಯೇ ಉಳಿದವು.

ಈ ಸಂಬಂಧ 1960ರ ದಶಕದ ಆರಂಭದಲ್ಲಿ ಐ.ಎನ್.ಎ ರಾಮರಾವ್ ಅವರ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ರಾಜ್ ಕೂಡ ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಚಳವಳಿಗೆ ಧುಮುಕಿದರು. ಆದರೆ ತಮಿಳುನಾಡು ಸರ್ಕಾರ ಪೊಲೀಸ್‌ ಶಕ್ತಿಯ ಮೂಲಕ ಚಳವಳಿಯನ್ನು ಹತ್ತಿಕ್ಕಿತು.

1961ರಲ್ಲಿ ಉಂಟಾದ ಭೀಕರ ಪ್ರವಾಹದಿಂದ ಕನ್ನಡಿಗರು ತೀವ್ರ ಸಂಕಷ್ಟಕ್ಕೆ ಒಳಗಾದರು. ಆ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಆಶಯದಂತೆ ರಾಜ್‍ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಮತ್ತು ಕಲಾವಿದರು ರಾಜ್ಯದಾದ್ಯಂತ ಪ್ರವಾಸ ಮಾಡಿ ನಿಧಿ ಸಂಗ್ರಹಿಸಿ, ಸಂತ್ರಸ್ತರ ನೆರೆವಿಗೆ ನಿಂತರು.

ರಾಜ್ ಅವರ ಕನ್ನಡ ಪ್ರೇಮ ಪ್ರಕಟವಾದ ಮಹತ್ವದ ಘಟನೆ 1982ರ ಗೋಕಾಕ್ ಚಳವಳಿ. ವಿ.ಕೃ.ಗೋಕಾಕ್ ಅವರ ನೇತೃತ್ವದ ಸಮಿತಿ ನೀಡಿದ ವರದಿಯು ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡ ಪ್ರಥಮ ಭಾಷೆಯಾಗಿರಬೇಕು ಎಂದಿತು. ಈ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿತು. ಆಗ ಕನ್ನಡ ಪರ ಸಂಘಟನೆಗಳು ಹೋರಾಟಕ್ಕಿಳಿದವು. ಈ ಹೋರಾಟಕ್ಕೆ ರಾಜ್ ನೇತೃತ್ವದಲ್ಲಿ ಚಿತ್ರರಂಗ ಪ್ರವೇಶಿಸುವ ಮೂಲಕ ಆನೆಬಲಬಂದಂತಾಯಿತು. ಮೈಸೂರು ಬ್ಯಾಂಕ್ ವೃತ್ತದ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರಾಜ್ ಆಗಮಿಸಿದರು. ‘ರಾಜ್ ಬಂದಾಯ್ತು, ಇನ್ನು ಭಾಷೆಗೆ ತೊಂದರೆಯಿಲ್ಲ’ ಎಂದು ಚಳವಳಿಗಾರರು ಘೋಷಿಸಿದರು. ಮುಂದಿನದು ಇತಿಹಾಸ.

ರಾಜ್ಯದಾದ್ಯಂತ ಪ್ರವಾಸ ನಡೆಸಿದರ ಫಲವಾಗಿ ವ್ಯಾಪಕ ಜನಬೆಂಬಲ ವ್ಯಕ್ತವಾಯಿತು. ಕೊನೆಗೆ ಸರ್ಕಾರ ಮಣಿಯಬೇಕಾಯಿತು. ಹೀಗೆ ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗಲೆಲ್ಲ ರಾಜ್‍ಕುಮಾರ್ ಬೀದಿಗಿಳಿದು ಹೋರಾಡಿದರು. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗ ಸಂಕಷ್ಟಕ್ಕೀಡಾದಾಗ ಕೂಡ ರಾಜ್‍ಕುಮಾರ್ ಇದೆ ದಾರಿ ತುಳಿದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಜೊತೆಗೆ ಬಂದ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟು ಪರಿಷತ್ತಿಗೆ ಒತ್ತಾಸೆಯಾಗಿ ನಿಂತರು.

ರಾಜ್ ವಾಣಿಜ್ಯೋತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ, ಜನರ ಶ್ರಮಕ್ಕೆ ಬೆಲೆಕೊಡಲುನಂದಿನಿ ಉತ್ಪನ್ನಗಳ ಮಾರಾಟಕ್ಕೆ ತಮ್ಮ ಜನಪ್ರಿಯತೆ ಬಳಸಿಕೊಳ್ಳಲು ಸಮ್ಮತಿಸಿದರು.

ರಾಜ್ಯಕ್ಕೆ ಭೀಕರ ಬರಗಾಲ ಬಂದಾಗ 1986ರಲ್ಲಿ ಮುಖ್ಯಮಂತ್ರಿಗಳ ಬರಪರಿಹಾರ ನಿಧಿಗಾಗಿ ಚಿತ್ರರಂಗದ ಕಲಾವಿದರ ಜೊತೆಗೂಡಿ ಎರಡು ದಿವಸ ಪಾದಯಾತ್ರೆ ನಡೆಸಿ ಒಂಬತ್ತು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ಕನ್ನಡದ ನೆಲ, ಜಲ, ಭಾಷೆಯ ವಿಚಾರ ಬಂದಾಗ ತಮ್ಮ ತಾರಾ ಮೆರಗನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಡಿದ ನಿದರ್ಶನಗಳಿವೆ.

ಕೊನೆಯದಾಗಿ, ಸೆರೆಯಲ್ಲಿದ್ದ ವೇಳೆ ವೀರಪ್ಪನ್‍ಗೆ ರಾಜ್ ಹೇಳಿದ್ದನ್ನು, ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಹಂಚಿಕೊಂಡದ್ದು ಹೀಗೆ: ‘ನನ್ನ ಬೇಕಾದ್ರೆ ಇಲ್ಲೇ ಇಟ್ಕೊ... ಆದರೆ ನನ್ನನ್ನು ನಂಬಿದ ಇವರನ್ ಬಿಟ್ಟು ಬಿಡು. ಹಾಗೇ ಕನ್ನಡಿಗರ ಮನಸಿಗೆ ಧಕ್ಕೆ ಉಂಟುಮಾಡುವ ಷರತ್ತು ಹಾಕ್‍ಬೇಡ... ಕರ್ನಾಟಕದಲ್ಲಿ ಕನ್ನಡಿಗರು, ತಮಿಳರು ಘರ್ಷಣೆಗೆ ಇಳ್ಯೊ ಹಾಗ್ ಮಾಡ್‍ಬೇಡ. ನನ್ ಪ್ರಾಣ ಹೋದ್ರು ಜನಗಳ ಪ್ರಾಣ ಹೋಗ್ ಬಾರ್ದು ಅನ್ನೊದು ನನ್ನ ನೀತಿ’. ಇದಲ್ಲವೇ ರಾಜ್ ಅವರ ಕನ್ನಡ ಪ್ರೀತಿ. ನಿಜವಾದ ಕನ್ನಡಿಗರ ಸಂಸ್ಕೃತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT