ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಪ್ರಿಯನ ಸಿನಿ ಪಯಣ...

Last Updated 23 ಏಪ್ರಿಲ್ 2018, 20:26 IST
ಅಕ್ಷರ ಗಾತ್ರ

ದೆಹಲಿಯ ಲ ಮೆರಿಡಿಯನ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಶೂಜಿತ್ ಸರ್ಕಾರ್ ಬಂಗಾಳಿ ಯುವಕ. ಫುಟ್‌ಬಾಲ್ ಆಡುತ್ತಿದ್ದ ಕಾರಣ ಆ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿತ್ತು. ಮಂಡಿ ಹೌಸ್ ಹತ್ತಿರವಿದ್ದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಕಡೆಗೆ ಒಮ್ಮೆ ಸುಮ್ಮನೆ ಹೆಜ್ಜೆ ಹಾಕಿದರು.

ಕೆಲವರು ಅಲ್ಲಿ ದೊಡ್ಡ ದನಿಯಲ್ಲಿ ಕಠಿಣವಾದ ಶಬ್ದಗಳನ್ನು ಉಚ್ಚರಿಸುತ್ತಿದ್ದರು. ಕಾಂಪೌಂಡ್‌ನಿಂದ ಆಚೆ ನಿಂತೇ ಇಣುಕಿ ನೋಡಿದ ಶೂಜಿತ್ ಕಣ್ಣಿಗೆ ನಾಟಕದ ತಾಲೀಮು ನಡೆಯುತ್ತಿದ್ದುದು ಗೊತ್ತಾಯಿತು. ನಾಟಕದಲ್ಲಿ ಏನೋ ಗಮ್ಮತ್ತು ಇದೆ ಎನಿಸಿತು. ಅದೇ ವಾರ ಹೋಟೆಲ್ ಕೆಲಸ ಮುಗಿದ ಮೇಲೆ ನಾಸಿರುದ್ದೀನ್ ಶಾ, ಓಂಪುರಿ, ಅಮರೀಷ್ ಪುರಿ ಎಲ್ಲರೂ ಅಭಿನಯಿಸಿದ್ದ ನಾಟಕವೊಂದನ್ನು ನೋಡಿದರು.

ಹೀಗೆ ವಾರಕ್ಕೊಂದಾದರೂ ನಾಟಕ ನೋಡಿ ನೋಡಿ ಮನದೊಳಗೆ ಏನೋ ಹುಟ್ಟಿತು. ಆಮೇಲೆ ಸಿನಿಮಾಗಳನ್ನು ನೋಡಲಾರಂಭಿಸಿದರು. ಸತ್ಯಜಿತ್ ರೇ ನಿರ್ದೇಶನದ ಎಲ್ಲ ಚಲನಚಿತ್ರಗಳನ್ನು ಮೊದಲು ನೋಡಿದರು. ಚಲನಚಿತ್ರ ನಿರ್ಮಾಣದ ಕಷ್ಟಗಳು, ನಿರ್ದೇಶನದ ಪಟ್ಟುಗಳನ್ನು ಕುರಿತು ಬಂದಿದ್ದ ಕೃತಿಗಳನ್ನು ಓದಿಕೊಂಡರು. ‘ಆಕ್ಟ್ ಒನ್’ ಎಂಬ ತಮ್ಮದೇ ರಂಗತಂಡ ಕಟ್ಟಿದರು. ಸಣ್ಣ ಸಣ್ಣ ಸಂಗತಿಗಳನ್ನೇ ನಾಟಕಗಳಾಗಿಸಿದರು. ಅವುಗಳಲ್ಲೂ ಸತ್ಯಜಿತ್ ರೇ ಪ್ರಭಾವವಿದೆ ಎಂದು ಅವರೇ ಹೇಳಿಕೊಂಡರು.

‘ಸತ್ಯಜಿತ್ ರೇ ಬದುಕಿದ್ದ ಕಾಲದಲ್ಲಿ ನಾನೂ ಇರಬೇಕಿತ್ತು. ಅವರಿಗೆ ಸಹಾಯಕ ನಿರ್ದೇಶಕ ಆಗಬೇಕಿತ್ತು. ನಟ-ನಟಿಯರನ್ನು ಅವರು ಹೇಗೆ ನಿಭಾಯಿಸುತ್ತಿದ್ದರು ಎನ್ನುವುದನ್ನು ಗಮನಿಸಬೇಕಿತ್ತು. ಅವರು ದೃಶ್ಯಗಳನ್ನು ಹೇಗೆ ರೂಪಿಸುತ್ತಿದ್ದರು ಎನ್ನುವುದನ್ನು ಅರಿಯಬೇಕಿತ್ತು’ ಎಂದು ದೊಡ್ಡ ಕನಸೊಂದನ್ನು ಹಂಚಿಕೊಂಡಿದ್ದರು.

ಎನ್.ಕೆ. ಶರ್ಮಾ ಎಂಬ ರಂಗ ಗುರು ಬೆನ್ನುತಟ್ಟದೇ ಹೋಗಿದ್ದರೆ ‘ಆಕ್ಟ್ ಒನ್’ ತಂಡ ದೀರ್ಘ ಕಾಲ ಉಸಿರಾಡಲು ಆಗುತ್ತಿರಲಿಲ್ಲ. ಖಾಲಿ ಜೇಬಿನಲ್ಲೇ ಕ್ಯಾಂಟೀನಿಗೆ ಹೋಗಿ ಅರ್ಧ ಟೀ ಕುಡಿದು, ಚಿತ್ರಕಥೆಗಳ ಚರ್ಚೆಗೆ ಇಳಿಯುತ್ತಿದ್ದ ಕಾಲಘಟ್ಟ ಅದು. ಹಸಿವಾಗುವ ಹೊತ್ತಿನಲ್ಲೇ ಶೂಜಿತ್ ಫುಟ್‌ಬಾಲ್ ಆಡಲು ಹೊರಡುತ್ತಿದ್ದರು. ನಾಟಕದ ತಾಲೀಮಿನ ನಡುವೆ ಏನಾದರೂ ವಾಗ್ವಾದ ನಡೆದರೆ, ದಿಢೀರನೆ ಅವರು ಫುಟ್‌ಬಾಲ್ ಆಡಲು ಸಹನಟರನ್ನೂ ಕರೆದುಕೊಂಡು ಹೋಗುತ್ತಿದ್ದರು. ಫುಟ್ ಬಾಲ್ ಅವರ ಪಾಲಿಗೆ ‘ಒತ್ತಡ ನಿವಾರಕ’.

ಶೂಜಿತ್ ಪತ್ರಿಕೆಗಳನ್ನು ಆಳವಾಗಿ ಓದುತ್ತಿದ್ದರು. ಅದರ ಪರಿಣಾಮವೇ ‘ಯಹಾಂ’ ಎಂಬ ಮೊದಲ ಸಿನಿಮಾ ನಿರ್ದೇಶಿಸಿದ್ದು. ಆ ಸಿನಿಮಾ ಬಿಡುಗಡೆಯಾಗಿದ್ದೇ ಎಷ್ಟೋ ಜನರಿಗೆ ಗೊತ್ತಾಗಲಿಲ್ಲ. ಆಮೇಲೆ ಈ ನಿರ್ದೇಶಕನ ಚಿತ್ರಕಥೆಯಲ್ಲಿದ್ದ ತೀವ್ರತೆ ಕಂಡು ಅಮಿತಾಭ್ ಬಚ್ಚನ್ ಕಾಲ್ ಷೀಟ್ ಕೊಟ್ಟರು. ‘ಶೋಭಿತೆ’ ಎಂಬ ಸಿನಿಮಾ ತಯಾರಾಯಿತು. ಸಿನಿಮಾದ ಸಾರಾಂಶ ಕುರಿತು ನ್ಯಾಯಾಲಯದಲ್ಲಿ ತಕರಾರು ಅರ್ಜಿಯ ವಿಚಾರಣೆ ನಡೆಯುವುದು ವಿಳಂಬ ಆದದ್ದರಿಂದ ‘ಶೋಭಿತೆ’ ತೆರೆಕಾಣಲೇ ಇಲ್ಲ.

ಅಮಿತಾಭ್ ನಟಿಸಿದ ಸಿನಿಮಾ ತೆರೆಕಾಣಲಿಲ್ಲ ಎಂದರೆ ನಿರ್ದೇಶಕನ ಸ್ಥಿತಿ ಹೇಗಾಗಬೇಡ? ಶೂಜಿತ್ ಕುಗ್ಗಿಹೋದರು. ಮನಸಿನ ತುಂಬ ಕತ್ತಲು ಆವರಿಸಿಕೊಂಡಿತು. ಫುಟ್‌ಬಾಲ್ ಆಡಿದರು. ಆ ಆಟದ ಕುರಿತೇ ಒಂದು ಚಿತ್ರಕಥೆ ಬರೆದರು. ಅದು ಸಿನಿಮಾ ಆಗಲಿಲ್ಲವೆನ್ನುವುದು ಬೇರೆ ಮಾತು. ಮತ್ತೆ ಮತ್ತೆ ನಾಟಕ, ಓದು, ಮಂಥನ, ಜಾಹೀರಾತುಗಳ ಚಿತ್ರೀಕರಣ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವುದು… ಹೀಗೆ ಪಥ ಸಾಗಿತು. ಅವರ ಮೊದಲಿನ ಚಿತ್ರಕ್ಕೂ ಮೂರನೇ ಚಿತ್ರಕ್ಕೂ ಏಳು ವರ್ಷಗಳ ಅಂತರ!

‘ವಿಕಿ ಡೋನರ್’ ತೆರೆಕಂಡಾಗಲೂ ಶೂಜಿತ್ ಫುಟ್‌ಬಾಲ್ ಆಡುತ್ತಾ, ‘ಈ ಸಿನಿಮಾ ಸೋತರೆ ಬರೀ ಆಟ ಆಡಿಕೊಂಡೇ ಇರಬೇಕಾಗುತ್ತದೆ’ ಎಂದು ಆಪ್ತೇಷ್ಟರಲ್ಲಿ ಹೇಳಿಕೊಂಡರು. ಆದರೆ, ಚಲನಚಿತ್ರ ನಿರೀಕ್ಷೆಯನ್ನೂ ಮೀರಿ ಗೆದ್ದಿತು. ಹಣ ಕೂಡ ಗಳಿಸಿತು. ಶೂಜಿತ್ ಬದುಕು ಬದಲಾಯಿತು. ಅವರು ನಿರ್ದೇಶಕರಾಗಿ ಅಷ್ಟೇ ಅಲ್ಲದೆ ನಿರ್ಮಾಪಕರಾಗಿಯೂ ಬೆಳೆದರು. ‘ಪಿಂಕ್’ ತರಹದ ಸಿನಿಮಾ ನಿರ್ಮಿಸಿದರು.

‘ಮದ್ರಾಸ್ ಕೆಫೆ’ಯಂಥ ಯುದ್ಧಸೂಕ್ಷ್ಮದ ಹಿಂದಿ ಚಲನಚಿತ್ರಕ್ಕೂ ಬಂಡವಾಳ ತೊಡಗಿಸಿ ಇನ್ನೊಂದು ಒತ್ತಡಕ್ಕೆ ಎದೆಗೊಟ್ಟರು. ಮತ್ತೆ ಅಮಿತಾಭ್ ಬಚ್ಚನ್ ಕಾಲ್ ಷೀಟ್ ಪಡೆದು ‘ಪೀಕು’ ಹಿಂದಿ ಸಿನಿಮಾಗೆ ಆಕ್ಷನ್, ಕಟ್ ಹೇಳಿದರು. ಆ ಸಿನಿಮಾ ದೊಡ್ಡ ಮಟ್ಟದ ಗೆಲುವು ಕಂಡಿತು. ದೀಪಿಕಾ ಪಡುಕೋಣೆ ನಟಿಯಾಗಿ ಜಿಗಿದ ಸಿನಿಮಾ ಆಗಿಯೂ ಅದು ಜನಪ್ರಿಯವಾಯಿತು. ಈಗ ಒಂದಿಷ್ಟು ವರ್ಷಗಳ ಫುಟ್‌ಬಾಲ್ ಆಟದ ನಂತರ ಶೂಜಿತ್ ‘ಅಕ್ಟೋಬರ್’ ಎಂಬ ತಾಜಾ ಸಿನಿಮಾ ಮಾಡಿದ್ದಾರೆ. ಮಾನವೀಯತೆಯ ಸೂಕ್ಷ್ಮ ಎಳೆಗಳಿರುವ ನವಿರು ಪ್ರೀತಿಯ ಈ ಚಿತ್ರ ಅವರ ವೃತ್ತಿಬದುಕಿನ ಇನ್ನೊಂದು ಜಿಗಿತವೂ ಹೌದು. ಈಗಲೂ ಚಿತ್ರೀಕರಣದ ಮಧ್ಯೆ ಶೂಜಿತ್ ಆಗಾಗ ಫುಟ್ ಬಾಲ್ ಆಡುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT