ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

Last Updated 23 ಏಪ್ರಿಲ್ 2018, 20:12 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ವಾಗ್ದಂಡನೆ ವಿಧಿಸಲು ಕಾಂಗ್ರೆಸ್ ಸೇರಿದಂತೆ ಏಳು ಪ್ರಮುಖ ವಿರೋಧ ಪಕ್ಷಗಳು ಸಲ್ಲಿಸಿದ್ದ ನಿಲುವಳಿ ಸೂಚನೆಯಲ್ಲಿ ಅಗತ್ಯ ಸತ್ವ ಇಲ್ಲ ಎಂದು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದಾರೆ. ಕಾನೂನು ತಜ್ಞರು ಹಾಗೂ ಸಂಸದೀಯ ವ್ಯವಹಾರಗಳಲ್ಲಿ ಅನುಭವ ಹೊಂದಿರುವವರ ಸಲಹೆ, ಸೂಚನೆಗಳನ್ನು ಪಡೆದ ನಂತರ ವೆಂಕಯ್ಯನಾಯ್ಡು ಈ ನಿರ್ಧಾರ ಪ್ರಕಟಿಸಿದ್ದಾರೆ. ಸಂಸತ್‍ನಲ್ಲಿ ವಾಗ್ದಂಡನೆ ನಿರ್ಣಯ ಸುಗಮವಾಗಿ ಜಾರಿಯಾಗುವ ಸಾಧ್ಯತೆ ಕಷ್ಟವೇ ಇತ್ತು. ಈ ಹಿಂದೆ, ಮೂರು ಸಂದರ್ಭಗಳಲ್ಲಿ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ವಿಧಿಸುವ ಪ್ರಯತ್ನಗಳು ರಾಷ್ಟ್ರದಲ್ಲಿ ವಿಫಲವಾಗಿವೆ. 1990ರ ದಶಕದಲ್ಲಿ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರ ವಿರುದ್ಧ ವಾಗ್ದಂಡನೆ ವಿಧಿಸಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ. ನಂತರ 2011ರಲ್ಲಿ ನ್ಯಾಯಮೂರ್ತಿಗಳಾದ ಪಿ.ಡಿ. ದಿನಕರನ್ ಹಾಗೂ ಸೌಮಿತ್ರ ಸೇನ್ ವಿರುದ್ಧದ ವಾಗ್ದಂಡನೆಯೂ ಜಾರಿಗೊಳ್ಳಲಿಲ್ಲ ಎಂಬುದನ್ನು ಸ್ಮರಿಸಿಕೊಳ್ಳಬಹುದು. ಈಗ, ವಾಗ್ದಂಡನೆಗೆ ಸಂಬಂಧಿಸಿದ ಸೂಚನೆ ಪರಿಶೀಲನೆಗೆ ವಿಚಾರಣಾ ಸಮಿತಿಯನ್ನೇನೂ ರಚಿಸದೆಯೇ ಸೂಚನೆಯನ್ನು ತಿರಸ್ಕರಿಸಿರುವ ರೀತಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. ವೆಂಕಯ್ಯ ನಾಯ್ಡು ಅವರು ಕೈಗೊಂಡ ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿಯೂ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಉನ್ನತ ನ್ಯಾಯಾಂಗ ವ್ಯವಸ್ಥೆ
ಯಲ್ಲಿ ಎದುರಾಗಿರುವ ಅಸಾಧಾರಣ ಬಿಕ್ಕಟ್ಟನ್ನು ಈ ಬೆಳವಣಿಗೆಗಳು ಸೂಚಿಸುತ್ತವೆ. ನ್ಯಾಯಾಂಗ ನೇಮಕಗಳ ಬಗ್ಗೆ ಕಾರ್ಯಾಂಗದ ಜೊತೆಗಿನ ಸಂಘರ್ಷ ಈಗಾಗಲೇ ಮುನ್ನೆಲೆಗೆ ಬಂದಿದೆ. ಕಾರ್ಯಾಂಗದ ಹಸ್ತಕ್ಷೇಪಕ್ಕೆ ಸವಾಲು ಹಾಕುವಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿಫಲವಾಗಿರುವುದು ಟೀಕೆಗಳಿಗೂ ಗುರಿಯಾಗಿದೆ.

ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್‌ಗೆ ಸೇರಿದ್ದು. ನ್ಯಾಯಮೂರ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸುವುದು ಸಲೀಸಲ್ಲ. ಅನೇಕ ರಕ್ಷಣಾತ್ಮಕ ಕ್ರಮಗಳನ್ನು ಸಂವಿಧಾನ ಒದಗಿಸಿದೆ. ಹೀಗಾಗಿ ವಾಗ್ದಂಡನೆಗೆ, ನ್ಯಾಯಮೂರ್ತಿಗಳ ದುರ್ವರ್ತನೆ ಸಾಬೀತಾಗಿರಬೇಕು ಎಂದು ಸಂವಿಧಾನ ಹೇಳುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಿಜೆಐ ಅವರ ದುರ್ವರ್ತನೆ ಎನಿಸಬಹುದಾದ ವಿಚಾರಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿವೆ. ಸೂಕ್ಷ್ಮ ಪ್ರಕರಣಗಳ ವಿಚಾರಣೆಗಾಗಿ ಪೀಠಗಳ ನೇಮಕ ಹಾಗೂ ಕರ್ತವ್ಯ ಹಂಚಿಕೆ ಕುರಿತಂತೆ ನ್ಯಾಯಾಲಯವು ಹಿಂದಿನಿಂದ ಪಾಲಿಸಿಕೊಂಡು ಬಂದ ನಿಯಮಗಳನ್ನು ಮುರಿಯಲಾಗಿದೆ ಎಂಬಂಥ ದೂರು ಇವುಗಳಲ್ಲಿ ಮುಖ್ಯವಾದದ್ದು. ಈ ಬಗ್ಗೆ ಜನವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಹಿಂದೆಂದೂ ನಡೆದಿರದಂತಹ ವಿದ್ಯಮಾನವಾಗಿತ್ತು. ಈ ಬಗ್ಗೆ ಸಿಜೆಐಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ವಿಫಲವಾದ ನಂತರ ಅನಿವಾರ್ಯವಾಗಿ ದೇಶದ ಜನರ ಮುಂದೆ ಬಂದಿದ್ದಾಗಿ ಈ ನ್ಯಾಯಮೂರ್ತಿಗಳು ಹೇಳಿದ್ದರು. ಸಹೋದ್ಯೋಗಿ ನ್ಯಾಯಮೂರ್ತಿಗಳ ಕಾಳಜಿಗಳನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಸಿಜೆಐ ವಿಫಲವಾಗಿರುವುದು ಸ್ಪಷ್ಟ. ಬಿಕ್ಕಟ್ಟಿನ ಪರಿಹಾರಕ್ಕೆ ಅನೌಪಚಾರಿಕ ನೆಲೆಯಲ್ಲಿ ಸಮಾಲೋಚನಾ ವ್ಯವಸ್ಥೆ ರೂಪಿಸಿದ್ದಲ್ಲಿ ಈ ಅನಪೇಕ್ಷಿತ ಬೆಳವಣಿಗೆಗಳನ್ನು ತಡೆಗಟ್ಟಬಹುದಿತ್ತು.

ಕಾಂಗ್ರೆಸ್ ನೇತೃತ್ವದಲ್ಲಿ ಈ ವಾಗ್ದಂಡನೆ ವಿಚಾರ ಮಂಡಿತವಾಗಿರುವುದರಿಂದ ರಾಜಕೀಯ ಉದ್ದೇಶಗಳನ್ನು ಸಹಜವಾಗಿಯೇ ಆರೋಪಿಸಲಾಗುತ್ತಿದೆ. ಆದರೆ ಕಾಂಗ್ರೆಸ್‍ನ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಪಿ. ಚಿದಂಬಂ ಅವರು ವಾಗ್ದಂಡನೆ ವಿಧಿಸಲು ನೀಡಲಾಗಿದ್ದ ಸೂಚನೆ ಪತ್ರಕ್ಕೆ ಸಹಿ ಹಾಕಿಲ್ಲ. ಇದೇನೇ ಇರಲಿ, ಈ ವಿದ್ಯಮಾನ ಜನಸಾಮಾನ್ಯರಿಗೆ ನೀಡುವ ಸಂದೇಶ ಗಂಭೀರವಾದದ್ದು. ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬಂಥ ಭಾವನೆ ಮೂಡುವುದೇ ಕಳವಳಕಾರಿಯಾದದ್ದು. ಪ್ರಜಾಪ್ರಭುತ್ವದ ಆಧಾರಸ್ತಂಭವಾದ ನ್ಯಾಯಾಂಗದ ಸ್ವಾತಂತ್ರ್ಯ ಮುಖ್ಯವಾದದ್ದು. ಇದಕ್ಕೆ ನ್ಯಾಯಾಂಗವೂ ಉತ್ತರದಾಯಿಯಾಗಬೇಕು. ಕೆಲಸದ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಇದಕ್ಕೆ ಸಂಬಂಧಿಸಿದಂತೆ ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಸಿಲುಕಿರುವ ನ್ಯಾಯಾಂಗ ಗುಣಮಟ್ಟ ಹಾಗೂ ಉತ್ತರದಾಯಿ ಮಸೂದೆಯನ್ನು ಪುನರುಜ್ಜೀವಗೊಳಿಸುವುದು ಸದ್ಯದ ಅಗತ್ಯ. ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಆಗಬೇಕಿರುವ ಅನೇಕ ಸುಧಾರಣೆಗಳ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT