ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿಆರ್‌ಗಾಗಿ ಅಣ್ಣಾವ್ರ ಹರಕೆ

Last Updated 23 ಏಪ್ರಿಲ್ 2018, 20:26 IST
ಅಕ್ಷರ ಗಾತ್ರ

ತಮಿಳು ಚಿತ್ರರಂಗದ ಮೇರು ನಟ ಎಂ.ಜಿ. ರಾಮಚಂದ್ರನ್ ಮತ್ತು ರಾಜಕುಮಾರ್‌ ಅವರ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧವಿತ್ತು. ಒಮ್ಮೆ ಎಂಜಿಆರ್ ಮೂತ್ರಪಿಂಡ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದಾಗ ಅವರು ಬೇಗ ಗುಣಮುಖರಾಗಲಿ ಎಂದು ರಾಜ್‌ ತಿರುಪತಿ ಬೆಟ್ಟಕ್ಕೆ ಬರಿಗಾಲಲ್ಲಿ ನಡೆದು ಬರುವುದಾಗಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು, ಅಂತೆಯೇ ನಡೆದು ಹೋಗಿ ಹರಕೆ ತೀರಿಸಿದರು. ಎಂಜಿಆರ್‌  ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುತ್ತಿದ್ದಂತೇ, ನನ್ನ ತಮ್ಮನ (ರಾಜ್‌ಕುಮಾರ್) ಹರಕೆಯಿಂದಾಗಿ ನಾನು ಬದುಕುಳಿದೆ ಎಂದಿದ್ದರು.

‘ರಾಜ್‌ಕುಮಾರ್ ಅವರ ಸ್ಥಾನವೇ ಬೇರೆ’

ಐತಿಹಾಸಿಕ ಚಿತ್ರವೊಂದರ ಹೋರಾಟ ಸನ್ನಿವೇಶಗಳಲ್ಲಿ ತಮಿಳು ಚಿತ್ರರಂಗದ ಮತ್ತೊಬ್ಬ ಮೇರು ನಟ ಶಿವಾಜಿ ಗಣೇಶನ್  ಅಭಿನಯಿಸುತ್ತಿದ್ದಾಗ ಕೈಗೆ ಗಂಭೀರ ಪೆಟ್ಟು ಬಿದ್ದು, ಬೆಂಗಳೂರಿನ ವಿಜಯಾ ಆಸ್ಪತ್ರೆಗೆ ದಾಖಲಾಗಿದ್ದರು.

ಆಗ ಅವರ ಯೋಗಕ್ಷೇಮ ವಿಚಾರಿಸಲು ರಾಜ್‌ಕುಮಾರ್  ಆಸ್ಪತ್ರೆಗೆ ಹೋಗುತ್ತಿದ್ದಂತೆಯೇ, ಶಿವಾಜಿ ಗಣೇಶನ್ ಅವರು ‘ಬನ್ನಿ ಬನ್ನಿ ರಾಜ್‌ಕುಮಾರ್ ಅವರೇ, ಏನೂ ಆಗಿಲ್ಲ. ಒಂದು ವಾರದಲ್ಲಿ ಸರಿ ಹೋಗುತ್ತೆ’ ಎಂದರು. ಆಗ ರಾಜ್‌ಕುಮಾರ್ ಅವರು ‘ವಾರದಲ್ಲಿ ಸರಿ ಹೋಗುವುದು ಬೇರೆ ಸರ್. ನೀವು ಚಿತ್ರರಂಗದಲ್ಲಿ ಮಾರ್ಗದರ್ಶಕರಿದ್ದಂತೆ, ನೀವು ಚೆನ್ನಾಗಿರಬೇಕು ಅದೇ ನಾನು ಬೇಡಿಕೊಳ್ಳುವುದು’ ಎಂದರು. ಆಗ ಶಿವಾಜಿ ನಕ್ಕು ಸುಮ್ಮನಾದರು. ಆಗ ಅಲ್ಲೇ ಇದ್ದ ನಿರ್ಮಾಪಕ ನಾಗಿರೆಡ್ಡಿ ಶಿವಾಜಿ ಗಣೇಶನ್ ಬಳಿ, ‘ಅಣ್ಣ, ರಾಜ್‌ಕುಮಾರ್ ಅವರ ನಟನೆ ನೀವು ನೋಡಬೇಕು. ಅದರಲ್ಲೂ ‘ಶಂಕರ್ ಗುರು’ ಚಿತ್ರ. ಅದರಲ್ಲಿ ಮೂರು ಪಾತ್ರ. ಅವರ ನಟನೆ ನೋಡಿ ನಾನು ಕಳೆದು ಹೋದೆ’ ಎಂದು ತೆಲುಗಿನಲ್ಲಿ ಹೇಳಿದಾಗ. ಶಿವಾಜಿ ಗಣೇಶನ್ ಅವರು ‘ರಾಜ್‌ಕುಮಾರ್ ಅವರೆ ಎಡಮೇ ವೇರೆ’ (ಅವರ ಸ್ಥಾನವೇ ಬೇರೆ) ರಾಜ್‌ಕುಮಾರ್‌ ಅವರನ್ನು ನಟನೆಯಲ್ಲಿ ಯಾರಿಂದಲೂ ಮೀರಿಸಲು ಆಗುವುದಿಲ್ಲ ಎಂದು ಮುಕ್ತಕಂಠದಿಂದ ಹೊಗಳಿದ್ದರು.

ಆಗ ರಾಜ್‌ ‘ಅಯ್ಯೊ... ಆ ಮಾತು ಹೇಳಬೇಡಿ ಸರ್. ನಾನು ನಾಟಕಗಳಲ್ಲಿ ನಟಿಸುತ್ತಿದ್ದಾಗ ನಿಮ್ಮನ್ನು ಒಮ್ಮೆಯಾದರೂ ನೋಡಿತ್ತೀನೊ, ಇಲ್ಲವೋ ಅಂದುಕೊಂಡಿದ್ದೆ. ನಿಮ್ಮ ಸ್ಥಾನವೇ ಬೇರೆ. ನವರಾತ್ರಿ ಚಿತ್ರದಲ್ಲಿ ನೀವು ಒಂಬತ್ತು ಪಾತ್ರಗಳನ್ನು ಮಾಡಿದ್ದೀರಿ ಅದಕ್ಕಿಂತಲೂ ಬೇರೆ ಚಿತ್ರ ಬೇಕಾ? ನಿಮ್ಮ ಮಾತು ವಾಪಸ್ ತಗೋಳಿ ಎಂದಾಗ’ ರಾಜ್‌ಕುಮಾರ್‌ ಅವರ ಸರಳತೆಗೆ ಶಿವಾಜಿ ಗಣೇಶನ್ ಭಾವುಕರಾಗಿ. ನಾಗಿರೆಡ್ಡಿ ಅವರ ಬಳಿ, ‘ರೆಡ್ಡಿಯವರೇ ರಾಜ್‌ಕುಮಾರ್‌ ಅವರಂತಹ ನಟ ಭಾರತದಲ್ಲೇ ಇಲ್ಲ’ ಎಂದಾಗ ಅಣ್ಣವ್ರೂ ಭಾವುಕರಾಗಿದ್ದರು.

ಮುಖ್ಯ ಅತಿಥಿಯಾಗಿ ರಾಜ್‌ಕುಮಾರ್

ತೆಲುಗಿನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರ್ ಅವರೊಂದಿಗೂ ರಾಜ್‌ಕುಮಾರ್‌ ಅವರು ಉತ್ತಮ ಸ್ನೇಹ ಸಂಬಂಧವಿತ್ತು. ಭಕ್ತ ಕುಂಬಾರ ಚಿತ್ರದ ತೆಲುಗು ಅವತರಣಿಕೆ ಚಕ್ರಧರ್ ಚಿತ್ರದಲ್ಲಿ ನಾಗೇಶ್ವರ್‌ ರಾವ್ ನಟಿಸಿದ್ದರು. ಈ ಚಿತ್ರಗಳ ಶತದಿನೋತ್ಸವ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಆಗ ರಾಜ್‌ಕುಮಾರ್‌ ಅವರ ಭಕ್ತ ಕುಂಬಾರ ಚಿತ್ರದ ಬಗ್ಗೆ ಮತನಾಡಿದ ನಾಗೇಶ್ವರ್‌ ರಾವ್ ‘ರಾಜ್‌ ನಟನೆಯಲ್ಲಿ ಅರ್ಧದಷ್ಟು ಮಾಡಿದ್ದರೂ’ ನನ್ನ ಜನ್ಮ ಧನ್ಯ ಎಂದಿದ್ದರು’ ಕೂಡಲೇ ರಾಜ್‌ಕುಮಾರ್ ಅವರು ‘ಎಂಥ ಮಾತು ಸರ್‌... ನಾನು ನಿಮ್ಮ ‘ದೇವದಾಸ್‌’ ಚಿತ್ರ ನೋಡಿ ನಟನೆ ಕಲಿತವನು ನೀವೇ  ಹೇಳಿದರೆ’ ನನಗೆ ಏನು ಹೇಳಬೇಕು ಎಂದೇ ಗೊತ್ತಾಗುವುದಿಲ್ಲ ಎಂದರು.

ಈ ಸ್ನೇಹದಿಂದಲೇ ನಾಗೇಶ್ವರ ರಾವ್ ನಟನೆಯ ಪ್ರೇಮಾಭಿಷೇಕಂ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ನಾಗೇಶ್ವರ ರಾವ್ ಕೇಳಿಕೊಂಡಿದ್ದರು.

ಅಲ್ಲಿಗೆ ಹೋದಾಗ ವಿಮಾನ ನಿಲ್ದಾಣದಲ್ಲಿ ಸ್ವತಃ ನಾಗೇಶ್ವರ ರಾವ್ ಅವರೇ ಹೂಗುಚ್ಛ ಹಿಡಿದು ಕಾದು ನಿಂತಿದ್ದರು. ಅವರನ್ನು ನೋಡಿದ ಕೂಡಲೇ ರಾಜ್‌ಕುಮಾರ್ ಅವರು ‘ಅಯ್ಯೊ ಸರ್... ನಾನೇ ಬರ್ತಿದ್ದೆ. ನೀವು ಕಾಯುವ ಅಗತ್ಯವಿರಲಿಲ್ಲ ಎಂದರು’ ಆಗ ನಾಗೇಶ್ವರ ರಾವ್ ಅವರು ‘ಅದೇನು, ರಾಜ್‌ಕುಮಾರ್ ಅವರಂತಹ ನಟನಿಗಾಗಿ ಕಾಯುವ ಯೋಗ್ಯತೆಯೂ ನನಗೆ ಇಲ್ಲವೇ’ ಎಂದರು.  ‘ವಜ್ರ ಮತ್ತು ಚಿನ್ನ ಸೇರಿ ಮಿಳಿತಗೊಂಡ ಅಪೂರ್ವ ಚಿಂತಾಮಣಿ ರಾಜಕುಮಾರ್’ ಎಂದು ಕಾರ್ಯಕ್ರಮದಲ್ಲಿ ಹೊಗಳಿದ್ದರು.

ಒಂದೇ ಕಥೆಗಳಲ್ಲಿ ರಾಜ್‌ಕುಮಾರ್–ಎನ್‌ಟಿಆರ್

ತೆಲುಗು ಚಿತ್ರರಂಗದ ಮೇರು ನಟ ಎನ್‌ಟಿಆರ್ ಮತ್ತು ರಾಜ್‌ಕುಮಾರ್ ಅವರು ಒಂದೇ ಕಥೆ ಆಧರಿಸಿದ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಅವರೊಂದಿಗೂ ರಾಜ್‌ಕುಮಾರ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ವೀರಕೇಸರಿ, ಸತ್ಯ ಹರಿಶ್ಚಂದ್ರ ಮುಂತಾದ ಸಿನಿಮಾಗಳಿಗಾಗಿ ಒಂದೇ ಸೆಟ್‌ನಲ್ಲಿ ಅವರು ನಟಸಿದ್ದರು.

ಒಮ್ಮೆ ಹೈದರಾಬಾದ್‌ಗೆ ಬಂದಿದ್ದ ರಾಜ್‌ಕುಮಾರ್ ಅವರನ್ನು ಎನ್‌ಟಿಆರ್ ಅವರು ರಾತ್ರಿ ಭೋಜನಕ್ಕೆ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಕಾರ್ಯಕ್ರಮ ಮುಗಿಯುವುದು ತಡವಾಗುತ್ತದೆ. ನೀವು ಊಟ ಮಾಡಿ ಎಂದು ರಾಜ್‌ಕುಮಾರ್ ಹೇಳಿದ್ದರು. ರಾತ್ರಿ 11ಗಂಟೆಗೆ ರಾಜ್‌ಕುಮಾರ್ ಅವರು ಮನೆಗೆ ಹೋದಾಗ ಎನ್‌ಟಿಆರ್ ಊಟ ಮಾಡದೇ ಕಾದು ಕುಳಿತಿದ್ದರು.

ಹಿಂದಿ ಚಿತ್ರರಂಗದ ಜತೆಗೂ ರಾಜ್‌ಕುಮಾರ್‌ ಅವರ ಒಡನಾಟ ಚೆನ್ನಾಗಿತ್ತು. ಅಮಿತಾಬ್‌ ಬಚ್ಚನ್‌ ಅವರು ಕೂಲಿ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆಗೆ ಸೇರಿದಾಗ ರಾಜ್‌ಕುಮಾರ್ ಹರಕೆ ಹೊತ್ತಿದ್ದರು.

ಈ ವಿಷಯವನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ ಬಿಗ್‌ಬಿ. ಅವರ ವ್ಯಕ್ತಿತ್ವವನ್ನು, ಮಾನವೀಯತೆಯನ್ನು ಪ್ರಶಂಸಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT