ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‍ ಜಯಂತಿಗಿಲ್ಲ ಪ್ರಶಸ್ತಿ ಸಂಭ್ರಮ

Last Updated 23 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ರಾಜ್‍ಕುಮಾರ್ ಜನ್ಮದಿನವಾದ ಏಪ್ರಿಲ್‍ 24ರಂದು ನಡೆಯಬೇಕಾಗಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ನಡೆಯುತ್ತಿಲ್ಲ. ಕಾರಣ ಚುನಾವಣೆಯ ಗುಮ್ಮ!

ಸರ್ಕಾರದ ಸಿನಿಮಾ ನೀತಿಯ ಪ್ರಕಾರ, ರಾಜ್‍ ಜನ್ಮದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ‘ಕನ್ನಡ ಚಲನಚಿತ್ರೋದ್ಯಮಕ್ಕೆ ರಾಜ್‍ ಅವಿಸ್ಮರಣೀಯ ಕೊಡುಗೆ ನೀಡಿರುವುದರಿಂದ ಅವರ ಜನ್ಮದಿನದಂದು ಪ್ರತಿ ವರ್ಷ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದು’ ಎಂದು 2014-15ರ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆ ಸಂಪ್ರದಾಯ ಈ ವರ್ಷ ಪಾಲನೆಯಾಗುತ್ತಿಲ್ಲ.

ಸಿನಿಮಾ ನಿರ್ದೇಶಕ ಎನ್‍.ಎಸ್‍. ಶಂಕರ್‍ ಅಧ್ಯಕ್ಷತೆಯಲ್ಲಿ 2017ರ ಸಾಲಿನ ಆಯ್ಕೆ ಸಮಿತಿಯನ್ನು ನೇಮಿಸಲಾಗಿದೆ. ಆದರೆ, ಪೂರ್ವಸಿದ್ಧತೆಯ ಕೊರತೆಯಿಂದಾಗಿ ಪ್ರಶಸ್ತಿಗಳ ಆಯ್ಕೆಗಾಗಿ ಸಿನಿಮಾ ನೋಡುವ ಪ್ರಕ್ರಿಯೆಗೆ ಈವರೆಗೆ ಚಾಲನೆ ದೊರೆತಿಲ್ಲ. ‘ಸಮಿತಿ ನೇಮಕವಾದ ಸ್ವಲ್ಪ ದಿನದಲ್ಲೇ ಚುನಾವಣೆಯ ಪ್ರಕಟಣೆ ಹೊರಬಿತ್ತು. ಅಧಿಕಾರಿಗಳೆಲ್ಲ ಚುನಾವಣೆಯಲ್ಲಿ ಬಿಜಿಯಾಗಿರುವುದರಿಂದ ಸಿನಿಮಾ ನೋಡುವ ಕೆಲಸ ಇನ್ನೂ ಆರಂಭವಾಗಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಂಕರ್ ಹೇಳಿದರು.

ಸರಳ-ಸಂಭ್ರಮ: ರಾಜ್‌ ಅವರ 90ನೇ ಜನ್ಮದಿನವನ್ನು ನಗರದ ಕಂಠೀರವ ಸ್ಟುಡಿಯೊದಲ್ಲಿನ ಸ್ಮಾರಕದ ಬಳಿ ಇಂದು ವಿಶೇಷವಾಗಿ ಆಚರಿಸಲಾಗುತ್ತಿದೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ರಾಜ್‌ ಕುಟುಂಬದ ಸದಸ್ಯರೆಲ್ಲರೂ ಸ್ಮಾರಕ ಇರುವ ಸ್ಥಳಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸುವರು. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಅಭಿಮಾನಿಗಳೂ ನೆಚ್ಚಿನ ನಟನ ಸ್ಮಾರಕವನ್ನು ದರ್ಶಿಸಿ ಗೌರವ ಸಲ್ಲಿಸುವರು.  

ನೀತಿಸಂಹಿತೆ ಅಡ್ಡಿ: ಪ್ರತಿವರ್ಷ ರಾಜ್ ಜನ್ಮದಿನ ಸಾಕಷ್ಟು ಅದ್ದೂರಿಯಾಗಿ ನಡೆಯುತ್ತದೆ. ಅನ್ನಸಂತರ್ಪಣೆ, ಸಂಭ್ರಮಾಚರಣೆ, ರಕ್ತದಾನ ಕಾರ್ಯಕ್ರಮಗಳ ಮೂಲಕ ಜನ್ಮದಿನದ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಆಯಾಮ ದೊರೆಯುತ್ತಿತ್ತು. ಈ ವರ್ಷ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಅಭಿಮಾನಿಗಳ ಸಂಭ್ರಮಾಚರಣೆಗೆ ಕಡಿವಾಣ ಬೀಳಲಿದೆ. ಏ. 12ರಂದು ರಾಜ್‌ಕುಮಾರ್ ಪುಣ್ಯತಿಥಿಯನ್ನೂ ಸರಳವಾಗಿ ಆಚರಿಸಲಾಗಿತ್ತು.
**
‘ಟಗರು’ಗೆ ರಿಯಾಯಿತಿ; ‘ರುಸ್ತುಂ’ಗೆ ಚಾಲನೆ 
ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಏ. 24ರಂದು ಶಿವರಾಜ್‌ಕುಮಾರ್‌ ಅಭಿನಯದ ‘ಟಗರು’ ಸಿನಿಮಾಕ್ಕೆ ಟಿಕೆಟ್‌ ದರದಲ್ಲಿ ರಾಜ್ಯದಾದ್ಯಂತ ಶೇ 50 ರಿಯಾಯಿತಿ ನೀಡಲಾಗುತ್ತಿದೆ. ಬೆಂಗಳೂರಿನ ಸಂತೋಷ್ ಮತ್ತು ವೀರೇಶ್, ಮೈಸೂರಿನ ಶಾಂತಲಾ, ಮಂಡ್ಯದ ಸಂಜಯ್, ಹಾಸನದ ಎಸ್‌ಪಿಜೆ, ದಾವಣಗೆರೆಯ ಅಶೋಕ ಹಾಗೂ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ

ಗಳಲ್ಲಿ ಈ ಚಿತ್ರವನ್ನು ವೀಕ್ಷಿಸಲು ಬರುವವರಿಗೆ ಸಿಹಿ ಹಂಚುವ ಕಾರ್ಯಕ್ರಮವನ್ನೂ ಚಿತ್ರತಂಡ ಹಮ್ಮಿಕೊಂಡಿದೆ.

ಇದೇ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಚಿತ್ರ ‘ರುಸ್ತುಂ’ ಮುಹೂರ್ತ ನಡೆಯಲಿದೆ. ಸಾಹಸ ನಿರ್ದೇಶಕರಾಗಿ ಹೆಸರುಮಾಡಿರುವ ರವಿವರ್ಮ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT