ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ಕೇಂದ್ರ ರದ್ದುಪಡಿಸಲಿ

Last Updated 23 ಏಪ್ರಿಲ್ 2018, 19:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಕಾಶಕರು ಲೇಖಕರಿಗೆ ನೀಡುವ ರಾಯಧನ ಹಾಗೂ ಕಾಗದದ ಮೇಲಿನ ಶೇ 12ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಕೇಂದ್ರ ಸರ್ಕಾರ ರದ್ದುಪಡಿಸಬೇಕು ಎಂದು ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸಂಚಾಲಕ ಡಾ.ಸಿದ್ಧಲಿಂಗಯ್ಯ ಆಗ್ರಹಿಸಿದರು.

ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಪುಸ್ತಕ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಪ್ರಕಾಶಕರು ರಾಯಧನ ನೀಡುವುದೇ ಕಷ್ಟಕರವಾಗಿರುವಾಗ, ಅದರ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಂಗೀತದ ಪುಸ್ತಕಗಳ ಮೇಲೆ ಹೆಚ್ಚುವರಿಯಾಗಿ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಸಂಗೀತ ಹಾಡಬಾರದು, ಅಳಬೇಕು ಎಂಬ ಉದ್ದೇಶ ಇದರ ಹಿಂದೆ ಇರಬಹುದು. ಈ ತೆರಿಗೆ ಹಾಕಿದವರು ಸಂಗೀತ ವಿರೋಧಿಗಳಾಗಿದ್ದು, ಗೋಳಾಟವನ್ನು ಇಟ್ಟಪಡುವವರಾಗಿರಬಹುದು ಎಂದು ಲೇವಡಿ ಮಾಡಿದರು.

ಪತ್ರಿಕೆಗಳಿಗೆ ಸಬ್ಸಿಡಿ ದರದಲ್ಲಿ ಕಾಗದ ಪೂರೈಸಲಾಗುತ್ತಿದೆ. ಅದೇ ರೀತಿ, ಪುಸ್ತಕ ಪ್ರಕಾಶಕರಿಗೂ ಸಬ್ಸಿಡಿ ದರದಲ್ಲಿ ಕಾಗದವನ್ನು ನೀಡಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿಯು ₹300 ಕೋಟಿ ಗ್ರಂಥಾಲಯ ಉಪಕರಣವನ್ನು (ಸೆಸ್‌) ಬಾಕಿ ಉಳಿಸಿಕೊಂಡಿದೆ. ಈ ಕರವನ್ನು ಗ್ರಂಥಾಲಯ ಇಲಾಖೆಗೆ ಕೂಡಲೇ ನೀಡಬೇಕು. ಇದರಿಂದ ಗ್ರಂಥಾಲಯವು ಈಗ ಖರೀದಿಸುತ್ತಿರುವ 300 ಪುಸ್ತಕಗಳ ಬದಲಿಗೆ 500 ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಇದರಿಂದ ಪ್ರಕಾಶಕರು ಹಾಗೂ ಲೇಖಕರಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯ ಸರ್ಕಾರವು ಪುಸ್ತಕ ನೀತಿಯನ್ನು ಅಂಗೀಕರಿಸಿದೆ. ಅದನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಕವಿ ಹಾಗೂ ಲೇಖಕರು ಸರ್ವಾಧಿಕಾರಿಗಳೇ. ಅವರು ಇಷ್ಟ ಬಂದಿದ್ದನ್ನು ಬರೆಯಬಹುದು. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಪ್ರಕಟಿಸುವ ಸಂದರ್ಭದಲ್ಲಿ ಪ್ರಕಾಶಕರು ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಪಾಲಿಕೆಯು ಸಂಗ್ರಹಿಸುತ್ತಿರುವ ತೆರಿಗೆಯಲ್ಲಿ ಆರೋಗ್ಯ ಉಪಕರಕ್ಕೆ ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ. ಆದರೆ, ಗ್ರಂಥಾಲಯ ಉಪಕರಕ್ಕೆ ಪ್ರತ್ಯೇಕ ಬ್ಯಾಂಕ್‌ ಖಾತೆಯೇ ಇಲ್ಲ. ಇದರಿಂದ, ಪಾಲಿಕೆಯು ಕೋಟ್ಯಂತರ ರೂಪಾಯಿ ಕರವನ್ನು ಗ್ರಂಥಾಲಯ ಇಲಾಖೆಗೆ ನೀಡದೇ ಬಾಕಿ ಉಳಿಸಿಕೊಂಡಿದೆ. ಇನ್ನು ಮುಂದಾದರೂ ಪ್ರತ್ಯೇಕ ಖಾತೆಯನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

ರಾಯಧನ ಹಾಗೂ ಕಾಗದದ ಮೇಲೆ ಶೇ 12ರಷ್ಟು ಜಿಎಸ್‌ಟಿ ಹಾಕಿರುವುದನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪುಸ್ತಕ ಪ್ರಾಧಿಕಾರದಿಂದ ಪತ್ರ ಬರೆಯಲಾಗಿದೆ ಎಂದರು.

ಪುಸ್ತಕ ಖರೀದಿ ಮಿತಿ ₹1.5 ಲಕ್ಷಕ್ಕೆ
ಕನ್ನಡ ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಪ್ರಕಾಶಕರಿಂದ ₹1 ಲಕ್ಷ ಮೊತ್ತದ ಪುಸ್ತಕಗಳನ್ನು ಖರೀದಿಸುತ್ತಿತ್ತು. ಪ್ರಸಕ್ತ ವರ್ಷದಿಂದ ಈ ಮಿತಿಯನ್ನು ₹1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, ಪುಸ್ತಕಗಳ ಸಂಖ್ಯೆಯನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದೆ ಎಂದು ಡಾ.ವಸುಂಧರಾ ಭೂಪತಿ ತಿಳಿಸಿದರು.

**

ನಾನು ಮೂಲತಃ ಎಡಪಂಥೀಯ ವ್ಯಕ್ತಿ. ಆದರೆ, ಈಗ ಸ್ವಲ್ಪ ಫ್ಲೆಕ್ಸಿಬಲ್‌ ಆಗಿದ್ದೇನೆ.
– ಡಾ.ಸಿದ್ಧಲಿಂಗಯ್ಯ, ಕವಿ

**

ಕನ್ನಡ ಪುಸ್ತಕ ಪ್ರಕಟಿಸಿದ್ದರಿಂದ ನನಗೆ ಅನ್ಯಾಯವಾಗಿಲ್ಲ. ಸಾಯುವವರೆಗೂ ಇದೇ ವೃತ್ತಿಯಲ್ಲಿ ಮುಂದುವರಿಯುವೆ.
  – ಶ್ರೀನಿವಾಸ್‌, ಭಾರತಿ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT