ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಸರ್ಕಾರ ₹4 ಲಕ್ಷ ಕೋಟಿ ಸಾಲ ವಸೂಲಿ ಮಾಡಿದೆ ಎಂಬ ಬಿಜೆಪಿ ಮಾಹಿತಿ ನಿಜವೇ?

Last Updated 24 ಏಪ್ರಿಲ್ 2018, 5:33 IST
ಅಕ್ಷರ ಗಾತ್ರ

ಬೆಂಗಳೂರು: ದಿವಾಳಿ ಕಾಯ್ದೆ – 2016ರ ಅಡಿಯಲ್ಲಿ ಎನ್‌ಡಿಎ ಸರ್ಕಾರ ₹4 ಲಕ್ಷ ಕೋಟಿ ಎನ್‌ಪಿಎ (ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲ) ವಸೂಲಿ ಮಾಡಿದೆ ಎಂದು ಏಪ್ರಿಲ್ 14ರಂದು ಬಿಜೆಪಿಯ ರಾಷ್ಟ್ರ ಘಟಕದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ‘ನಮೋ ಆ್ಯಪ್‌’ನಲ್ಲೂ ಈ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂಬುದನ್ನು ಸಾಕ್ಷ್ಯಗಳ ಸಮೇತ ಆಲ್ಟ್‌ನ್ಯೂಸ್ ಜಾಲತಾಣ ಬಯಲಿಗೆಳೆದಿದೆ.

ಟ್ವೀಟ್‌ನಲ್ಲೇನಿತ್ತು?: ‘ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯಮಿಗಳಿಗೆ ನೀಡಲಾದ ಸುಮಾರು ₹9 ಲಕ್ಷ ಕೋಟಿ ಸಾಲದ ಪೈಕಿ ₹4 ಲಕ್ಷ ಕೋಟಿಯನ್ನು ದಿವಾಳಿ ಕಾಯ್ದೆ – 2016ರ ಅಡಿಯಲ್ಲಿ ಎನ್‌ಡಿಎ ಸರ್ಕಾರ ವಸೂಲಿ ಮಾಡಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಅಂತರ್ಜಾಲತಾಣ ಮತ್ತು ‘ನಮೋ ಆ್ಯಪ್‌’ನಲ್ಲಿಯೂ ಈ ವಿಷಯವನ್ನು ಹಂಚಿಕೊಳ್ಳಲಾಗಿತ್ತು. ಕೇಂದ್ರ ಸಚಿವರು, ಬಿಜೆಪಿ ಸಂಸದರು, ಶಾಸಕರು ಸೇರಿದಂತೆ ಅನೇಕರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದರು.

ಇದರ ಆಧಾರದಲ್ಲಿ ಕೆಲವು ಮಾಧ್ಯಮಗಳೂ ಈ ಸುದ್ದಿ ಪ್ರಕಟಿಸಿದ್ದವು. ಈ ವಿಷಯಕ್ಕೆ ಸಂಬಂಧಿಸಿ ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ಅವರ ಹೇಳಿಕೆ ಉಲ್ಲೇಖಿಸಿ ಎಕಾನಮಿಕ್ ಟೈಮ್ಸ್ ಸಹ ವರದಿ ಮಾಡಿತ್ತು.

ಸಾಲ ವಸೂಲಾತಿ ವಿಷಯವನ್ನು ಪೋಸ್ಟ್‌ಕಾರ್ಡ್ ನ್ಯೂಸ್ ಜಾಲತಾಣ ವೈಭವೀಕರಿಸಿ ಪ್ರಕಟಿಸಿತ್ತು. ಇದನ್ನು ಅನೇಕ ಮಂದಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಇದರಿಂದಾಗಿ ತಪ್ಪು ಮಾಹಿತಿ ಜನರಲ್ಲಿ ಹರಡುವಂತಾಗಿತ್ತು. ಈ ವರದಿಗಳ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಫಸ್ಟ್‌ಪೋಸ್ಟ್‌ ಜಾಲತಾಣಗಳು ಅನುಮಾನವನ್ನೂ ವ್ಯಕ್ತಪಡಿಸಿದ್ದವು ಎಂದು ಆಲ್ಟ್‌ನ್ಯೂಸ್ ವರದಿಯಲ್ಲಿ ಹೇಳಲಾಗಿದೆ.

ಸದ್ಯ ಟ್ವೀಟ್‌ ಅನ್ನು ಬಿಜೆಪಿ ಟ್ವಿಟರ್‌ ಖಾತೆಯಿಂದ, ನಮೋ ಆ್ಯಪ್‌ನಿಂದ ಹಾಗೂ ಪ್ರಧಾನಿಯವರ ಜಾಲತಾಣದಿಂದ ಅಳಿಸಿಹಾಕಲಾಗಿದೆ.

(ಪ್ರಧಾನಿ ನರೇಂದ್ರ ಮೋದಿಯವರ ಜಾಲತಾಣದಲ್ಲಿ ಪ್ರಕಟಗೊಂಡಿದ್ದ ವರದಿ)

ಆರ್‌ಬಿಐ ಅಂಕಿಅಂಶ ಏನು ಹೇಳುತ್ತದೆ?

ಸಾಲ ವಸೂಲಾತಿಗೆ ಸಂಬಂಧಿಸಿ ಆರ್‌ಬಿಐ ಅಂಕಿಅಂಶ ಭಿನ್ನವಾಗಿದೆ. ಹಣಕಾಸು ಇಲಾಖೆಯ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಸಾಲದ ಖಾತೆ ರದ್ದತಿಗೆ ನಿರ್ಧರಿಸಲಾದ ₹2.73 ಲಕ್ಷ ಕೋಟಿ ಎನ್‌ಪಿಎ ಪೈಕಿ ಕೇವಲ ₹ 29,343 ಕೋಟಿಯನ್ನಷ್ಟೇ ಬ್ಯಾಂಕ್‌ಗಳು ವಸೂಲಿ ಮಾಡಿಕೊಂಡಿವೆ.

(ಸಚಿವರು ರಾಜ್ಯಸಭೆಗೆ ನೀಡಿದ ಆರ್‌ಬಿಐ ಅಂಕಿಅಂಶದ ಪ್ರತಿ)

ಸಾಲದ ಖಾತೆ ರದ್ದತಿಗೂ ಮನ್ನಾಕ್ಕೂ ಇದೆ ವ್ಯತ್ಯಾಸ

ಸಾಲ ಮನ್ನಾ ಮಾಡುವುದಕ್ಕೂ ಸಾಲದ ಖಾತೆ ರದ್ದತಿಗೂ (ವಸೂಲಿ ಮಾಡಲು ಸಾಧ್ಯವಾಗದ್ದು ಎಂದು ಘೋಷಿಸಲಾದ ಸಾಲವನ್ನು ಬ್ಯಾಂಕ್‌ಗಳು ಬ್ಯಾಲೆನ್ಸ್‌ಶೀಟ್‌ನಿಂದ ತೆಗದುಹಾಕುವ ಪ್ರಕ್ರಿಯೆ. ಈ ಮೊತ್ತವನ್ನು ಗಳಿಕೆಯಲ್ಲಿ ಕಡಿತ ಅಥವಾ ನಷ್ಟ ಎಂದು ಪರಿಗಣಿಸಲಾಗುತ್ತದೆ) ವ್ಯತ್ಯಾಸವಿದೆ. ಸಾಲದ ಖಾತೆ ರದ್ದಾಯಿತೆಂದ ಮಾತ್ರಕ್ಕೆ ಸಾಲಗಾರನಿಕೆ ಕ್ಲೀನ್‌ಚಿಟ್‌ ನೀಡಿದಂತಾಗುವುದಿಲ್ಲ. ಆ ಸಾಲ ವಸೂಲಿ ಮಾಡಿದಂತೆಯೂ ಆಗುವುದಿಲ್ಲ.

ಸದ್ಯ ಸಾಲ ವಸೂಲಾತಿ ಪ್ರಮಾಣ ಶೇಕಡ 10.77ರಷ್ಟಿದೆ. ಅಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಶೇಕಡ 89ಕ್ಕಿಂತಲೂ ಹೆಚ್ಚು ವಸೂಲಾಗದ ಸಾಲದ ಖಾತೆಗಳನ್ನು ರದ್ದು ಮಾಡಿವೆ ಎನ್ನಲಾಗಿದೆ.

‘ತಪ್ಪಾಗಿ ಅರ್ಥೈಸಲಾಗಿದೆ’: ವಸೂಲಾಗದ ಸಾಲಕ್ಕೆ ಸಂಬಂಧಿಸಿ ನೀಡಲಾಗಿರುವ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾಗಿ ಆಲ್ಟ್‌ನ್ಯೂಸ್ ವರದಿ ಉಲ್ಲೇಖಿಸಿದೆ.

‘ವಸೂಲಾಗದ ಸಾಲದ ಪೈಕಿ ಶೇಕಡ 50ರಷ್ಟನ್ನು ದಿವಾಳಿ ಕಾಯ್ದೆ ಅಡಿ ಪರಿಗಣಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ಪ್ರಸ್ತುತ, ₹3.30 ಲಕ್ಷ ವಸೂಲಾಗದ ಸಾಲದ ಪ್ರಕರಣವನ್ನು ಎನ್‌ಸಿಎಲ್‌ಟಿಗೆ (ರಾಷ್ಟ್ರೀಯ ಕಂಪೆನಿಗಳ ಕಾನೂನು ನ್ಯಾಯಾಧಿಕರಣ) ಹಸ್ತಾಂತರಿಸಲಾಗಿದೆ. ₹ 83 ಸಾವಿರ ಕೋಟಿ ಸಾಲ ಸಂದಾಯವಾಗಿದೆ. ಇವೆರಡೂ ಸೇರಿ ₹ 4 ಲಕ್ಷ ಕೋಟಿ ಮೀರುತ್ತದಷ್ಟೆ’ ಎಂದು ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT