ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌–ಬಿಜೆಪಿ ಬಲಪ್ರದರ್ಶನ!

ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ
Last Updated 24 ಏಪ್ರಿಲ್ 2018, 5:39 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಶಾಸಕ ಎಚ್‌.ವೈ.ಮೇಟಿ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ನಡೆದ ಮೆರವಣಿಗೆ ಇಬ್ಬರ ಬಲಪ್ರದರ್ಶನಕ್ಕೆ ವೇದಿಕೆಯಾಯಿತು.

ಉರಿಬಿಸಿಲನ್ನೂ ಲೆಕ್ಕಿಸದೇ ಕ್ಷೇತ್ರದ ವಿವಿಧೆಡೆಯಿಂದ ಬಂದಿದ್ದ ಎರಡೂ ಪಕ್ಷಗಳ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೇಸಿಗೆಯ ಮಧ್ಯಾಹ್ನ ಅಷ್ಟಾಗಿ ಜನದಟ್ಟಣೆ ಇಲ್ಲದೇ ಬಣಗುಡುವ ಬಾಗಲಕೋಟೆ ನಗರ ಜನರಿಂದ ತುಂಬಿತುಳುಕಿತು.

ಎಲ್ಲೆಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಧ್ವಜಗಳು ಹಾರಾಡಿದವು. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಎರಡೂ ಪಕ್ಷಗಳ ಚಿಹ್ನೆ ಹಾಗೂ ಬಣ್ಣಗಳನ್ನು ಒಳಗೊಂಡಿದ್ದ ಕ್ಯಾಪ್‌ಗಳು ನೆರವಾದವು.

ನಗರದ ಕಾಂಗ್ರೆಸ್ ಕಚೇರಿಯಿಂದ ಬೆಳಿಗ್ಗೆ 11ಕ್ಕೆ ಮೇಟಿ ಬೆಂಬಲಿಗರ ಮೆರವಣಿಗೆ ಆರಂಭವಾಯಿತು. ಸುತ್ತಲಿನ ಹಳ್ಳಿಗಳಿಂದ ಲಾರಿ, ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದ ಗ್ರಾಮೀಣರು ಹೆಜ್ಜೆ ಹಾಕಿದರು. ಹೂವಿನಿಂದ ಅಲಂಕೃತವಾಗಿದ್ದ ಕ್ಯಾಂಟರ್‌ನಲ್ಲಿ ನಿಂತಿದ್ದ ಮೇಟಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಶಾಸಕ ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಬಾಯಕ್ಕಾ ಮೇಟಿ ಸಾಥ್ ನೀಡಿದರು.

ಹಳೇ ಪೋಸ್ಟ್ ಆಫೀಸ್, ಕೊತ್ತಲಪ್ಪನಗುಡಿ, ಪಂಕಾ ಮಸೀದಿ, ವಲ್ಲಭಭಾಯಿ ಚೌಕ್ ದಿಂದ ಎಂ.ಜಿ ರಸ್ತೆ ಮಾರ್ಗವಾಗಿ ರೈಲ್ವೆ ನಿಲ್ದಾಣ, ಧನುಷ್ ಆಸ್ಪತ್ರೆ, ಶಕ್ತಿ ಚಿತ್ರಮಂದಿರ ಮೂಲಕ ಕಾಂಗ್ರೆಸ್ ಕಾರ್ಯಾಲಯಕ್ಕೆ ಬಂದು ಮುಕ್ತಾಯಗೊಂಡ ಮೆರವಣಿಗೆ ವೇಳೆ ಮೇಟಿ, ಬಸವೇಶ್ವರ ಹಾಗೂ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ನಂತರ ನವನಗರದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಚ್.ಜಯಾ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಮೆರವಣಿಗೆ: ನಗರದ ಕಣವಿ ವೀರಭದ್ರೆಶ್ವರ ದೇವಸ್ಥಾನದಿಂದ ಆರಂಭವಾದ ಬಿಜೆಪಿ ಮೆರವಣಿಗೆ ಟೀಕಿನಮಠ, ಆಡಳಿತ ಬಜಾರ್, ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್‌ ಮೂಲಕ ಬಂದು ಹೊಳೆ ಆಂಜನೇಯ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು.

ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಸೋಮವಾರ ಮಾಜಿ ಶಾಸಕ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಬೆಂಬಲಿಗರು ನಡೆಸಿದ ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿದವು

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಘೋಷಣೆ ಮುಗಿಲುಮುಟ್ಟಿತು.

ಚಲಿಸುವ ಆರ್ಕೆಸ್ಟ್ರಾ ಮೆರವಣಿಗೆಗೆ ರಂಗು ತುಂಬಿದರೆ, ಕೇಸರಿ ಧ್ವಜಗಳು ರಾರಾಜಿಸಿದವು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ರಾಜು ನಾಯ್ಕರ್, ಬಸಲಿಂಗಪ್ಪ ನಾವಲಗಿ, ಅಶೋಕ ಲಿಂಬಾವಳಿ, ರಾಜು ರೇವಣಕರ್ ಇದ್ದರು.

ನಂತರ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಚರಂತಿಮಠ, ನೇರವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಜಿಗಳೂರ ನಾಮಪತ್ರ ಸಲ್ಲಿಕೆ..

ಜೆಡಿಎಸ್‌–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಎಸ್‌ಪಿಯ ಮೋಹನ್ ಜಿಗಳೂರು ಕೂಡ ಸೋಮವಾರ ನಾಮಪತ್ರ ಸಲ್ಲಿಸಿದರು. ಮೇಟಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹುನಗುಂದ ಶಾಸಕ ಎಸ್.ಆರ್.ಕಾಶಪ್ಪನವರ ಬಸವೇಶ್ವರ ವೃತ್ತಕ್ಕೆ ಬಂದಾಗ ಜಯಘೋಷಣೆ ಕೂಗಿದ ಬೆಂಬಲಿಗರು ಹೆಗಲ ಮೇಲೆ ಹೊತ್ತು ಕುಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT