ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಎಚ್.ಪೂಜಾರ, ತಪಶೆಟ್ಟಿ ಬಿಜೆಪಿಗೆ?

ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರ ಶತಪ್ರಯತ್ನ
Last Updated 24 ಏಪ್ರಿಲ್ 2018, 5:47 IST
ಅಕ್ಷರ ಗಾತ್ರ

ಬಾಗಲಕೋಟೆ: ಕಾಂಗ್ರೆಸ್‌ ಟಿಕೆಟ್ ವಂಚಿತರಾದ ಮಾಜಿ ಶಾಸಕ ಪಿ.ಎಚ್.ಪೂಜಾರ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಟಸ್ಥರಾಗಿ ಉಳಿದಿದ್ದಾರೆ. ನಗರದಲ್ಲಿ ಸೋಮವಾರ ಶಾಸಕ ಎಚ್.ವೈ.ಮೇಟಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಪಕ್ಷದ ಬಲಪ್ರದರ್ಶನ ಮೆರವಣಿಗೆಯಲ್ಲೂ ಇಬ್ಬರು ಕಾಣಿಸಿಕೊಳ್ಳಲಿಲ್ಲ.

ಬಿಜೆಪಿಗೆ ಸೆಳೆಯುವ ಪ್ರಯತ್ನ:

ಒಂದೆಡೆ ಇಬ್ಬರನ್ನೂ ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ. ಇನ್ನೊಂದೆಡೆ ಅತೃಪ್ತಿ ಶಮನಗೊಳಿಸಿ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

‘ಶಾಸಕ ಎಚ್‌.ವೈ.ಮೇಟಿಗೆ ಟಿಕೆಟ್ ಖಚಿತಗೊಳ್ಳುತ್ತಿದ್ದಂತೆಯೇ ಕೇಂದ್ರ ಸಚಿವ ಅನಂತಕುಮಾರ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿ.ಎಚ್.ಪೂಜಾರ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಮಧ್ಯಸ್ಥಿಕೆಯ ಹೊಣೆ ವಹಿಸಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ವಿಧಾನಪರಿಷತ್ ಸ್ಥಾನಮಾನ ನೀಡುವ ಭರವಸೆ ಕೂಡ ಮುಖಂಡರಿಂದ ವ್ಯಕ್ತವಾಗಿದೆ’ ಎನ್ನಲಾಗಿದೆ.

ಅನ್ನದ ಋಣ!:

ಪಕ್ಷ ಸಂಘಟನೆಗೆಂದು ಬಾಗಲಕೋಟೆಗೆ ಬರುತ್ತಿದ್ದ ವೇಳೆ ಪೂಜಾರ ವಕೀಲರ ಮನೆಯಲ್ಲಿ ಊಟ ಮಾಡುತ್ತಿದ್ದೇವೆ. ಅವರ ಮನೆಯ ಅನ್ನದ ಋಣವಿದೆ. ಪಕ್ಷಕ್ಕೆ ವಾಪಸ್‌ ಕರೆತರಲು ಮನವೊಲಿಸಿ ಎಂದು ಸ್ವತಃ ಅನಂತಕುಮಾರ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಇದೇ 24ರಂದು ಜಮಖಂಡಿ, ಮುಧೋಳಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬರಲಿದ್ದಾರೆ. ಈ ವೇಳೆ ಪೂಜಾರ ಹಾಗೂ ತಪಶೆಟ್ಟಿ ಅವರೊಂದಿಗೆ ಚರ್ಚಿಸಿ ಮನವೊಲಿಸಲಿದ್ದಾರೆ. ಈ ಸಂಧಾನಕ್ಕೆ ಮಾಜಿ ಶಾಸಕ ವೀರಣ್ಣಚರಂತಿಮಠ ಕೂಡ ಸಮ್ಮತಿಸಿದ್ದಾರೆ ಎಂದು ಗೊತ್ತಾಗಿದೆ.

ಸಿಎಂ ಜೊತೆ ಮಾತುಕತೆ:

ಪಿ.ಎಚ್.ಪೂಜಾರ ಹಾಗೂ ತಪಶೆಟ್ಟಿ ಅವರನ್ನು ಪಕ್ಷದಲ್ಲಿಯೇ ಉಳಿಸಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್‌ನಲ್ಲೂ ಚಾಲನೆ ಸಿಕ್ಕಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೂಜಾರ ಅವರಿಗೆ ಕರೆ ಮಾಡಿ ಮಾತಾಡಿದ್ದಾರೆ. ‘ಹಿಂದೆ ಆಗಿರುವ ತಪ್ಪು, ಸಣ್ಣಪುಟ್ಟ ವೈಮನಸ್ಸು ಸರಿಪಡಿಸೋಣ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಬೇಡ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಿಮಗೆ ಸೂಕ್ತ ಗೌರವ ಕಲ್ಪಿಸುವ ಜವಾಬ್ದಾರಿ ನಾನೇ ತೆಗೆದುಕೊಳ್ಳಲಿದ್ದೇನೆ’ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಬಾದಾಮಿಗೆ ಬರಲಿರುವ ಸಿಎಂ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಮತ್ತೊಮ್ಮೆ ಪೂಜಾರ ಹಾಗೂ ತಪಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪೂಜಾರ ಮನವೊಲಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಕೂಡ ಎರಡು ಬಾರಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಆದರೆ ಅವರು ಯಾವುದೇ ನಿರ್ಧಾರ ತಿಳಿಸಿಲ್ಲ. ನನ್ನ ತೀರ್ಮಾನ ಬೆಂಬಲಿಗರ ಭವಿಷ್ಯ ನಿರ್ಧರಿಸಲಿದೆ. ಹಾಗಾಗಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ’ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 25ಕ್ಕೆ ನಿರ್ಧಾರ: ತಪಶೆಟ್ಟಿ

ಕಳೆದ ಬಾರಿ ಪಕ್ಷಕ್ಕೆ ಕರೆತರುವಾಗ ನೀಡಿದ್ದ ಭರವಸೆಯಂತೆ ಶಾಸಕ ಎಚ್‌.ವೈ.ಮೇಟಿ ನಡೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಪ್ರಕಾಶ ತಪಶೆಟ್ಟಿ, ‘ಮುಂದಿನ ರಾಜಕೀಯ ನಡೆ ಬಗ್ಗೆ ಏಪ್ರಿಲ್‌ 25ರಂದು ತೀರ್ಮಾನ ಕೈಗೊಳ್ಳುವೆ’ ಎಂದು ತಿಳಿಸಿದರು.

‘ನನಗೆ ಸಿಎಂ ಇಲ್ಲವೇ ಪಕ್ಷದ ಯಾವುದೇ ನಾಯಕರ ಬಗ್ಗೆ ಬೇಸರವಿಲ್ಲ. ನಮ್ಮ ಸಮಾಜದ ಹಿರಿಯರು ಹಾಗೂ ನನ್ನ ತಾಯಿಗೆ ಮಾತು ಕೊಟ್ಟು ಪಕ್ಷಕ್ಕೆ ಕರೆತಂದಿದ್ದ ಮೇಟಿ, ನನ್ನ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನ ನೀಡಲಿಲ್ಲ. ಸಮಾಜಕ್ಕೂ ಯಾವುದೇ ಅನುಕೂಲ ಮಾಡಿಕೊಡಲಿಲ್ಲ. ನಗರಸಭೆಯಲ್ಲಿ ನೀತಿ–ನಿರ್ಧಾರದ ವಿಚಾರದಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಬಸವೇಶ್ವರ ಬ್ಯಾಂಕಿನ ಶತಮಾನೋತ್ಸವಕ್ಕೆ ಸಿಎಂ ಬಂದಾಗ ಹಿಂಬಾಲಕರು ಕಾರ್ಯಕ್ರಮಕ್ಕೆ ಬರದಂತೆ ನೋಡಿಕೊಂಡರು. ನಮ್ಮನ್ನು ಕರೆತರುವಾಗ ಮಧ್ಯಸ್ಥಿಕೆ ವಹಿಸಿದ್ದ ಹಿರಿಯರಾದ ಎಸ್.ಆರ್.ಪಾಟೀಲ ಹಾಗೂ ಅಜಯಕುಮಾರ ಸರನಾಯಕ ಕೂಡ ನಂತರ ಅಸಹಾಯಕರಾಗಬೇಕಾಯಿತು’ ಎಂದು ತಪಶೆಟ್ಟಿ ಹೇಳುತ್ತಾರೆ.

**

ಬಿಜೆಪಿ ನಾಯಕರು ನನ್ನೊಂದಿಗೆ ಚರ್ಚಿಸಿರುವುದು ನಿಜ. ಕಾಂಗ್ರೆಸ್ ಮುಖಂಡರೂ ಮಾತಾಡಿದ್ದಾರೆ. ಪಕ್ಷದಲ್ಲಿ ಉಳಿಯಬೇಕೆ, ಬೇಡವೇ ಎಂಬುದರ ಬಗ್ಗೆ ಮಂಗಳವಾರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇನೆ
- ಪಿ.ಎಚ್.ಪೂಜಾರ, ಮಾಜಿ ಶಾಸಕ

**

ತುರ್ತು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದೆ. ಹಾಗಾಗಿ ಶಾಸಕ ಎಚ್.ವೈ.ಮೇಟಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ 
- ಪ್ರಕಾಶ ತಪಶೆಟ್ಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT