ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ: ಪವಾರ್

ನಿಪ್ಪಾಣಿ: ಅಭಿಷ್ಟ ಚಿಂತನ ಕಾರ್ಯಕ್ರಮದಲ್ಲಿ ಕಬ್ಬುಬೆಳೆಗಾರರ ಸಮಸ್ಯೆ ಪ್ರಸ್ತಾಪ
Last Updated 24 ಏಪ್ರಿಲ್ 2018, 5:56 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಕಬ್ಬು ಬೆಳೆದಿರುವ ಎಕರೆಗೆ ₹2 ಸಾವಿರ ಕೊಡುವಷ್ಟೂ ಸಕ್ಕರೆ ಕಾರ್ಖಾನೆಗಳಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಖಾನೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯ’ ಎಂದು ಕೇಂದ್ರದ ಮಾಜಿ ಸಚಿವ ಶರದ ಪವಾರ ಹೇಳಿದರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುಭಾಷ ಜೋಶಿ ಅವರ 75ನೇ ಅಮೃತ ಮಹೋತ್ಸವ ಜನ್ಮ ದಿನದ ಅಂಗವಾಗಿ ಇಲ್ಲಿನ ಶ್ರೀ ಸಮರ್ಥ ವ್ಯಾಯಾಮ ಶಾಲೆಯ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ಅಭಿಷ್ಟ ಚಿಂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶೇ 60ರಷ್ಟು ಕೃಷಿ ಮೇಲೆ ಅವಲಂಬಿತರಾದ ನಮ್ಮ ದೇಶದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ದೇಶದ ಆರ್ಥಿಕ ಪರಿಸ್ಥಿತಿಗೆ ಕುತ್ತು ಬರಲಿದೆ. ರೈತ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಲೇ ಇದೆ. ರೈತರು, ಕಬ್ಬು, ಸಕ್ಕರೆ ಮತ್ತು ಕಾರ್ಖಾನೆಗಳ ಕುರಿತು ಪ್ರಧಾನಿ ಮತ್ತು ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ವಿವರವಾಗಿ ಚರ್ಚಿಸಿ, ಕಬ್ಬಿಗೆ ಯೋಗ್ಯ ಬೆಲೆ ಸಿಗುವ ನಿಟ್ಟಿನಲ್ಲಿ ಒತ್ತಾಯಿಸಿದ್ದೇನೆ’ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ ‘ಇಂದು ರೈತರು ದೇಶದ ಎಲ್ಲೆಡೆ ರಸ್ತೆಗಿಳಿದು ಆಂದೋಲನ ಮಾಡುತ್ತಿದ್ದುದು ಕೇಂದ್ರ ಸರ್ಕಾರಕ್ಕೆ ಕಾಣುತ್ತಿಲ್ಲ. ₹15 ಲಕ್ಷ ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತಹ ಸುಳ್ಳು ಭರವಸೆಗಳನ್ನು ನೀಡಿದ ಸರ್ಕಾರವು ಜನರನ್ನು ತಪ್ಪು ದಾರಿಗೆ ಎಳೆದಿದೆ’ ಹರಿಹಾಯ್ದರು.

ಸುಭಾಷ ಜೋಶಿಯವರು ಮಾತನಾಡಿ ‘ಮತವನ್ನು ದಾನ ಮಾಡಬೇಕು, ಆದರೆ ದಾನವನ್ನು ಸ್ವೀಕರಿಸಿ ಮತ ದಾನ ಮಾಡುವುದು ಸರಿಯಲ್ಲ. ನನ್ನ ಬೆಂಬಲದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಒಂದು ಸಂಚಲನ ಮೂಡಿದೆ. ನನ್ನ ಬೆಂಬಲವನ್ನು ಸೂಚಿಸಿದ ನಂತರ ಕಾಕಾಸಾಹೇಬರಲ್ಲಿಯೂ ಉತ್ಸಾಹ ಇಮ್ಮಡಿಸಿದೆ. ಸರ್ಕಾರದ ತಪ್ಪು ಧೋರಣೆಯಿಂದಾಗಿ ಇಂದು ಕಾರ್ಖಾನೆಗಳು ನಡೆಸುವುದು ಕಷ್ಟಕರ. ಕಾರ್ಖಾನೆಗಳ ಮತ್ತೆ ಏಳಿಗೆಯಾಗಬೇಕಾದರೆ ಅದು ಮಾಜಿ ಸಚಿವ ಶರದ ಪವಾರ ಅವರಿಂದಲೆ ಸಾಧ್ಯ’ ಎಂದರು.

ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಸಂಸದ ಪ್ರಕಾಶ ಹುಕ್ಕೇರಿ, ಸಂಸದ ಧನಂಜಯ ಮಹಾಡಿಕ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಶಾಸಕ ಹಸನ ಮುಶ್ರೀಫ್‌, ಸ್ಥಳೀಯ ನಗರಸಭೆ ಅಧ್ಯಕ್ಷ ವಿಲಾಸ್‌ ಗಾಡಿವಡ್ಡರ್‌, ಮೋಹನ ಬುಡಕೆ, ಜಯವಂತ ಪಾಟೀಲ, ಮಾತನಾಡಿದರು. ಸುನೀತಾ ಜೋಶಿ, ಎಐಸಿಸಿ ರಾಜ್ಯ ಉಪಾಧ್ಯಕ್ಷ ವೀರಕುಮಾರ ಪಾಟೀಲ, ಚಂದ್ರಕಾಂತಅಣ್ಣಾ ಕೋಠಿವಾಲೆ, ಪಪ್ಪುಅಣ್ಣಾ ಪಾಟೀಲ, ರಾವಸಾಹೇಬ ಪಾಟೀಲ, ಮಾಜಿ ಸಂಸದೆ ನಿವೇದಿತಾ ಮಾನೆ, ಸಂಧ್ಯಾದೇವಿ ಕುಪೇಕರ, ಸಂಜಯ ಮಂಡಲಿಕ, ಸ್ವರೂಪ ಮಹಾಡಿಕ, ಕಲ್ಲಪ್ಪಾಣ್ಣಾ ಆವಾಡೆ, ಲಕ್ಷ್ಮಣರಾವ ಚಿಂಗಳೆ, ಬಾಳಾಸಾಹೇಬ ದೇಸಾಯಿ ಸರ್ಕಾರ, ಮೊದಲಾದವರು ಸೇರಿದಂತೆ ನಗರಸಭೆ ಸದಸ್ಯರು ವೇದಿಕೆಯಲ್ಲಿದ್ದರು. ಶರದ ಪವಾರ ಜೋಶಿ ದಂಪತಿಯನ್ನು ಪುಷ್ಪಹಾರ ಹಾಕಿ ಗೌರವಿಸಿದರು. ನಂತರ ಅವರನ್ನು ಕಬ್ಬು ಬೆಳೆಗಾರರು ಸತ್ಕರಿಸಿದರು.. ನಗರಸಭೆ ಉಪಾಧ್ಯಕ್ಷ ಸುನೀಲ ಪಾಟೀಲ ವಂದಿಸಿದರು.

**

ವಿಧಾನಸಭೆಯಲ್ಲಿ ಶೇ 100ರಷ್ಟು ಹಾಜರಿರುತ್ತಿದ್ದ ಸುಭಾಷ ಜೋಶಿ ಕಳಂಕರಹಿತರು. ಇಂತಹ ವ್ಯಕ್ತಿಗಳನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ
- ಆರ್‌.ವಿ. ದೇಶಪಾಂಡೆ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT