ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ

ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚು; ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಮೆರವಣಿಗೆ
Last Updated 24 ಏಪ್ರಿಲ್ 2018, 8:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಒಟ್ಟು 17 ಮಂದಿ ನಾಮಪತ್ರ ಸಲ್ಲಿಸಿದರು.

‌ಹನೂರಿನಲ್ಲಿ 7 ಮಂದಿ, ಗುಂಡ್ಲು ಪೇಟೆಯಲ್ಲಿ 6, ಚಾಮರಾಜನಗರದಲ್ಲಿ 3 ಹಾಗೂ ಕೊಳ್ಳೇಗಾಲದಲ್ಲಿ ಒಬ್ಬರು ಉಮೇದುವಾರಿಕೆ ಸಲ್ಲಿಸಿದರು.

ಗುಂಡ್ಲುಪೇಟೆ

ಗುಂಡ್ಲುಪೇಟೆ: ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸೋಮವಾರ 6 ಮಂದಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‍ನಿಂದ ಸಚಿವೆ ಎಂ.ಸಿ.ಮೋಹನಕುಮಾರಿ, ಬಿಎಸ್‍ಪಿಯಿಂದ ಗುರುಪ್ರಸಾದ್, ಎಂ.ಇ.ಪಿ ಪಕ್ಷದಿಂದ ಎ.ಜಿ.ರಾಮಚಂದ್ರರಾವ್, ಪ್ರಜಾ ಪರಿವರ್ತನಾ ಪಾರ್ಟಿಯಿಂದ ಸಿ.ಜೆ.ಕಾಂತರಾಜ್ ಮತ್ತು ಪಕ್ಷೇತರವಾಗಿ ಸಿದ್ದಯ್ಯ ಮತ್ತು ಶೇಖರ್‌ರಾಜು ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ.ಮೋಹನಕುಮಾರಿ ಅವರು ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಪಾರ್ವತಾಂಬ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ಬಂದು ಚುನಾವಣಾಧಿಕಾರಿ ಕೆ.ಎಚ್.ಸತೀಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಸಿ.ಮೋಹನಕುಮಾರಿ, ‘ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕಳೆದ ಉಪಚುನಾವಣೆಯಲ್ಲಿ ಆಕಸ್ಮಿಕವಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಜನರ ಕೆಲಸ ಮಾಡಿದ್ದೇನೆ. ಈ ಬಾರಿ ನನ್ನ ಕೆಲಸವನ್ನು ಗಮನಿಸಿ ಬಹುಮತ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈಗಾಗಲೇ ಕ್ಷೇತ್ರದ 90 ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದೇನೆ. ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಅವರು ಬಂದು ನನ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಬೇಗೂರು, ಗುಂಡ್ಲುಪೇಟೆ ಮತ್ತು ಹಂಗಳ ಭಾಗಗಳಲ್ಲಿ ಸಮಾವೇಶ ಮಾಡಲಾಗುತ್ತದೆ’ ಎಂದರು.

‘ಹತ್ತು ತಿಂಗಳಲ್ಲಿ ಮಾಡಿರುವ ಕೆಲಸ ಮತ್ತು ಎಚ್.ಎಸ್.ಮಹದೇವಪ್ರಸಾದ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಮನಗಂಡು ನನ್ನನ್ನು ಬೆಂಬಲಿಸುತ್ತಾರೆ. ಈ ಬಾರಿಯೂ ನಾನೇ ಈ ಭಾಗದ ಜನರ ಸೇವೆ ಮಾಡುತ್ತೇನೆ’ ಎಂದರು.

ಬಿಎಸ್ಪಿ ಅಭ್ಯರ್ಥಿಯಾಗಿ ಸೋಮ ಹಳ್ಳಿ ಸಾಹುಕಾರ್ ಕುಟುಂಬದ ಗುರು ಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸಿದರು.

ಪಕ್ಷದ ಕಚೇರಿಯಿಂದ ಕಾರ್ಯಕರ್ತರು ಬಿಎಸ್ಪಿ ಹಾಗೂ ಜೆಡಿಎಸ್ ಪಕ್ಷದ ಬಾವುಟ ಹಿಡಿದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಪಕ್ಷದ ಅಧ್ಯಕ್ಷ ಎಂ.ಎನ್.ಸಂಪತ್‌, ಜಿಲ್ಲಾ ಘಟಕದ ಕಾರ್ಯದರ್ಶಿ ಕಿಲಗೆರೆಬಸವಣ್ಣ, ಮುಖಂಡರಾದ ಅರೇಪುರಮಹೇಶ್, ಜೆ.ರಮೇಶ್, ಜೆಡಿಎಸ್‍ನ ಟಿಪ್ಪು ಅವರೊಂದಿಗೆ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಗುರುಪ್ರಸಾದ್, ‘ಕಾಂಗ್ರೆಸ್ ಹಾಗೂ ಬಿಜೆಪಿಗೆ ಕ್ಷೇತ್ರದಲ್ಲಿನ ಮತದಾರರು ಮತ ನೀಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದರು.

ಚಾಮರಾಜನಗರ; ಮೂವರು

ನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಸವಿರುವ ಎಂ.ಹೊನ್ನುರಯ್ಯ, ರಾಮಸಮುದ್ರದ ಬಿ.ಎನ್.ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ, ಮಹಿಳಾ ಶಕ್ತೀಕರಣ ಪಕ್ಷದಿಂದ ಎಂ.ಆರ್.ಸರಸ್ವತಿ ನಾಮಪತ್ರ ಸಲ್ಲಿಸಿದರು.

ಹನೂರು; 7 ಉಮೇದುವಾರಿಕೆ

ಕೊಳ್ಳೇಗಾಲ: ಹನೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್, ಬಿಜೆಪಿ ಅಭ್ಯರ್ಥಿ ಪ್ರೀತನ್‍ನಾಗಪ್ಪ ಸೋಮವಾರ ಮರು ನಾಮಪತ್ರವನ್ನು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಎಂ.ಎನ್.ಮುರುಳೇಶ್‍ ಅವರಿಗೆ ಸಲ್ಲಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಜ ಯ್‍ಪ್ರಕಾಶ್, ಆರ್.ಮಹೇಶ್, ಆರ್.ಸಿದ್ದಪ್ಪ, ಲೋಕ್ ಆದಾಲತ್ ದಳದ ಅಭ್ಯರ್ಥಿ ಗಂಗಾಧರ್, ಎಂಇಪಿ ಪಕ್ಷದ ಅಭ್ಯರ್ಥಿ ಪ್ರದೀಪ್ ಕುಮಾರ್ ನಾಮಪತ್ರ ಸಲ್ಲಿಸಿದರು.

ಮಹೇಶ್‌ ನಾಮಪತ್ರ ಸಲ್ಲಿಕೆ

ಕೊಳ್ಳೇಗಾಲ: ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಎಸ್‌ಪಿ ಅಭ್ಯರ್ಥಿಯಾಗಿ ಎನ್.ಮಹೇಶ್ ಅವರು ಸೋಮವಾರ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನಮ್ಮ ಅವರಿಗೆ ನಾಮಪತ್ರ ಸಲ್ಲಿಸಿದರು.

ನಗರದ ಆರ್.ಎಂ.ಸಿ ರಸ್ತೆಯ ಲ್ಲಿರುವ ಮಂಟೇಸ್ವಾಮಿ ದೇವಾಲಯ ಹಾಗೂ ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಬಸ್‍ನಿಲ್ದಾಣದಿಂದ ನಾಗರಿಕರೊಂದಿಗೆ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಯಲ್ಲಿ  ಉಮೇದುವಾರಿಕೆ ಸಲ್ಲಿಸಿದರು.

ಜೆಡಿಎಸ್ ಪಕ್ಷದ ಮುಖಂಡ ಹಾಗೂ ನಟ, ನಿರ್ದೇಶಕ ಎಸ್.ಮಹೇಂದರ್, ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಉದಯಕುಮಾರ್, ವಕೀಲ ಡಿ.ಎಸ್ ಬಸವರಾಜು ಮೊದಲಾದವರು ಎನ್.ಮಹೇಶ್ ಅವರಿಗೆ ಸಾಥ್‌ ನೀಡಿದರು.

‘ಈ ಕ್ಷೇತ್ರದಲ್ಲಿ ಬಿಎಸ್‍ಪಿಗೆ ಪ್ರತಿಸ್ಪರ್ಧಿ ಯಾರೂ ಇಲ್ಲ. ನಮಗೆ ನಾವೇ ಪ್ರತಿಸ್ಪರ್ಧಿ. ಕ್ಷೇತ್ರದ ಜನತೆ ಮಹೇಶ್ ಅವರಿಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಅದ್ದರಿಂದ ನಮಗೆ ಪ್ರತಿಸ್ಪರ್ಧಿ ಇಲ್ಲ’ ಎಂದು ಅವರು ಹೇಳಿದರು.

ಬಿಎಸ್ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ತಾ.ಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ಗಣಿ ಉದ್ಯಮಿ ವೀರಮಾದು, ವೀರಶೈವ ಮುಖಂಡ ವೀರಭದ್ರಸ್ವಾಮಿ, ಜಾಕಿ ಸುರೇಶ್, ವಕೀಲ ರಾಜೇಂದ್ರ, ಕೆಂಪರಾಜು, ಸೋಮಣ್ಣ ಉಪ್ಪಾರ್, ಸುರೇಶ್, ನಗರಸಭೆ ಸದಸ್ಯ ಕೃಷ್ಣಯ್ಯ, ರಾಮಕೃಷ್ಣ, ರಂಗಸ್ವಾಮಿ, ಜೆಡಿಎಸ್ ಮುಖಂಡ
ರಾದ ಚಾಮರಾಜು, ಶಶಿಶೇಖರ್, ರಮೇಶ್, ಮಹೇಶ್, ಮಾದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT