ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಕೊಂಡ ನಿರೀಕ್ಷಿತ; ಜಗಳೂರು ಅನಿರೀಕ್ಷಿತ!

ಕಾಂಗ್ರೆಸ್‌ ಟಿಕೆಟ್‌ ಗೊಂದಲ, ಒಳ ಬಂಡಾಯದ ಭೀತಿ
Last Updated 24 ಏಪ್ರಿಲ್ 2018, 9:46 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯ ಗೊಂದಲ ಮೇಲ್ನೋಟಕ್ಕೆ ಬಗೆಹರಿದಂತೆ ಕಂಡರೂ ಪಕ್ಷದಲ್ಲಿ ಅಲ್ಲಲ್ಲಿ ಅಸಮಾಧಾನದ ಹೊಗೆ ಹೊರಡುತ್ತಲೇ ಇದೆ.

ಈ ಬಾರಿ ಶಾಸಕ ಕೆ. ಶಿವಮೂರ್ತಿ ಅವರಿಗೆ ಮಾಯಕೊಂಡ ಕ್ಷೇತ್ರದ ಟಿಕೆಟ್‌ ಕಾಂಗ್ರೆಸ್‌ ನಿರಾಕರಿಸುತ್ತದೆ ಎಂಬುದು ನಿರೀಕ್ಷಿತವಾಗಿತ್ತು. ಆದರೆ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್‌. ಬಸವರಾಜ್‌ ಅವರಿಗೆ ಟಿಕೆಟ್‌ ಸಿಕ್ಕಿರುವುದು ಅನಿರೀಕ್ಷಿತವಾಗಿದೆ. ಶಾಸಕ ಎಚ್‌.ಪಿ. ರಾಜೇಶ್‌ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಕೈತಪ್ಪಿದ್ದೂ ಅಷ್ಟೇ ಅನಿರೀಕ್ಷಿತವಾಗಿತ್ತು. ನಂತರ ನಡೆದ ರಾಜಕೀಯ ಮೇಲಾಟಗಳಿಂದಾಗಿ ಈಗ ರಾಜೇಶ್ ಅವರೇ  ‘ಬಿ’ ಫಾರಂ ಪಡೆದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರಗಳಿಂದ ಎಂದಿನಂತೆ ಅಪ್ಪ–ಮಗ ಟಿಕೆಟ್‌ ಪಡೆದಿದ್ದಾರೆ. 87ರ ಪ್ರಾಯದಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಮಾತುಗಳು ಆರಂಭದಲ್ಲಿದ್ದವು. ಆದರೆ, ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡಿದ್ದು ಒಂದು ಹಾಗೂ ಟಿಕೆಟ್‌ ತಪ್ಪಿಸಿದರೆ ಇನ್ನೊಂದು. ಹೀಗೆ ಎರಡೆರಡು ಕಾರಣಗಳಿಗೆ ಮಧ್ಯ ಕರ್ನಾಟಕದ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಅರಿತ ಕಾಂಗ್ರೆಸ್‌ ವರಿಷ್ಠರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಅವರಿಗೆ ಟಿಕೆಟ್‌ ನೀಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಬಿಟ್ಟರೆ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳೇ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಹೊನ್ನಾಳಿಯಲ್ಲಿ ಈ ಬಾರಿ ಶಾಸಕ ಡಿ.ಜಿ. ಶಾಂತನಗೌಡರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಮಾತುಗಳು ಆರಂಭದಲ್ಲಿ ಪಕ್ಷದ ವಲಯದಲ್ಲಿ ಹರಿದಾಡಿದ್ದವು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.‍ಪಿ. ಮಂಜಪ್ಪ ಅವರೇ ಪ್ರಬಲ ಆಕಾಂಕ್ಷಿಯಾಗಿದ್ದರು ಕೂಡ. ಕೊನೆಗೆ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ. ಇಲ್ಲಿ ಒಳ ಬಂಡಾಯ ಎಷ್ಟು ಕೆಲಸ ಮಾಡುತ್ತದೆಂಬುದರ ಮೇಲೆ ಶಾಂತನಗೌಡರ ಗೆಲುವು ನಿಂತಿದೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಡುತ್ತಾರೆ.

ಚನ್ನಗಿರಿಯಲ್ಲಿ ಶಾಸಕ ವಡ್ನಾಳ್ ರಾಜಣ್ಣ ಅವರಿಗೆ ಟಿಕೆಟ್‌ಗೆ ಪ್ರಬಲ ಪೈಪೋಟಿ ಇರಲಿಲ್ಲ. ಆದರೆ, ಅಲ್ಲಿನ ಜನ ಒಮ್ಮೆ ಒಂದು ಚುನಾವಣೆಯಲ್ಲಿ ಗೆಲ್ಲಿಸಿದವರನ್ನು ಮರು ಚುನಾವಣೆಯಲ್ಲೇ ಗೆಲ್ಲಿಸಿಲ್ಲ. ಸರ್ಕಾರದ ಸಾಧನೆಗಳನ್ನೇ ಬಂಡವಾಳ ಮಾಡಿಕೊಂಡು ಮತಯಾಚನೆ ಮಾಡಬೇಕಿದೆ.

ಬಳ್ಳಾರಿ ಸೇರ್ಪಡೆ: ಮತ ಸಿಗುವುದೇ? ಹರಪನಹಳ್ಳಿ ತಾಲ್ಲೂಕಿಗೆ 371 (ಜೆ) ಅಡಿ ವಿಶೇಷ ಸೌಲಭ್ಯ ವಿಸ್ತರಿಸುವ ಉದ್ದೇಶದಿಂದ ಅದನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು ಮತ ತಂದುಕೊಡುತ್ತದೆಯೇ? ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಶಾಸಕ ಎಂ.ಪಿ. ರವೀಂದ್ರ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದ್ದರಿಂದ ರವೀಂದ್ರ ಮನಸ್ಸು ಬದಲಿಸಿದ್ದರು. ಈಗ ಅವರಿಗೆ ಟಿಕೆಟ್‌ ಸಿಕ್ಕಿದೆ. ಹರಿಹರದಿಂದ ಮುಖಂಡ ಎಸ್‌. ರಾಮಪ್ಪ ಟಿಕೆಟ್‌ ಗಿಟ್ಟಿಸಿದ್ದಾರೆ.

ಜಗಳೂರು ಟಿಕೆಟ್‌: ನಾಟಕೀಯ ಬೆಳವಣಿಗೆ

ಜಗಳೂರು ಕಾಂಗ್ರೆಸ್ ಟಿಕೆಟ್‌ ವಿಚಾರದಲ್ಲಿ ನಾಟಕೀಯ ಬೆಳವಣಿಗೆಗಳೇ ನಡೆದವು. ಟಿಕೆಟ್‌ ತಪ್ಪಿಸಿಕೊಂಡ ಶಾಸಕ ಎಚ್‌.ಪಿ. ರಾಜೇಶ್‌ ಇನ್ನಿಲ್ಲದ ಒತ್ತಡ ತಂದು ಕೊನೆಗೂ ಬಿ ಫಾರಂ ಪಡೆದುಕೊಂಡರು.

ವಾರಗಳ ಕಾಲ ನಿರಂತರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಜತೆ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮೂಲಕ ಒತ್ತಡ ಹಾಕಿಸಿದರು. ಈ ಕ್ಷೇತ್ರದಿಂದ ಟಿಕೆಟ್‌ ಪಡೆದಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಕೊನೆಗೂ ರಾಜಕೀಯ ಮೇಲಾಟಕ್ಕೆ ಮಣಿಯಬೇಕಾಯಿತು. ಈ ಮಧ್ಯೆ ಅವರು ಆಸ್ಪತ್ರೆಗೆ ಸೇರಿದ ಪ್ರಸಂಗವೂ ನಡೆಯಿತು. ಸಾಲದ್ದಕ್ಕೆ ತನಗೆ ಅನ್ಯಾಯವಾಗಿದೆ ಎಂದು ವರಿಷ್ಠರ ಬಳಿ ಅಹವಾಲು ಸಲ್ಲಿಸಲು ಅವರು ದೆಹಲಿಗೂ ತೆರಳಿದ್ದರು.

ಮಾಯಕೊಂಡದಲ್ಲಿ ಆಂಜನೇಯ ಆಟ!

ದಾವಣಗೆರೆ ಮೂಲದ ಸಚಿವ ಎಚ್. ಆಂಜನೇಯ ಅವರು ತಮ್ಮ ಅಕ್ಕನ ಮಗ ಕೆ.ಎಸ್‌. ಬಸವರಾಜ್‌ (ಬಸವಂತಪ್ಪ) ಅವರಿಗೆ ಮಾಯಕೊಂಡ ಕ್ಷೇತ್ರದಿಂದ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಳಲ್ಕೆರೆಯಿಂದ ಅವರೇ ಟಿಕೆಟ್ ಪಡೆದಿದ್ದು, ಪಕ್ಕದ ಮಾಯಕೊಂಡ ದಿಂದ ಸಂಬಂಧಿಕರಿಗೆ ಟಿಕೆಟ್‌ ನೀಡಿ ದಾವಣಗೆರೆಯಲ್ಲೂ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಇದು ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

**

ನಮ್ಮ ಪಕ್ಷದಲ್ಲಿನ ಗೊಂದಲಗಳು ಬಗೆಹರಿದಿವೆ. ಅನ್ಯ ಪಕ್ಷಗಳಲ್ಲಿನ ಟಿಕೆಟ್‌ ಗೊಂದಲಗಳು ಚುನಾವಣೆಯಲ್ಲಿ ನಮಗೆ ಅನುಕೂಲಕರವಾಗಲಿವೆ
ಎಚ್‌.ಪಿ. ಮಂಜ‍ಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT