ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವನಾದ ಮೇಲೆ ಒಂದು ಗುಂಟೆಯೂ ಖರೀದಿಸಿಲ್ಲ’

Last Updated 24 ಏಪ್ರಿಲ್ 2018, 9:49 IST
ಅಕ್ಷರ ಗಾತ್ರ

ಧಾರವಾಡ: ತಮ್ಮ ಬೆಂಬಲಿಗರೊಂದಿಗೆ ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸೋಮವಾರ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.

ಇದಕ್ಕೊ ಮೊದಲು ಹಳೇ ಎಪಿಎಂಸಿಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮುರುಘಾಮಠಕ್ಕೆ ತೆರಳಿ ಮೃತ್ಯುಂಜಯ ಅಪ್ಪಗಳ ಆಶೀರ್ವಾದ ಪಡೆದು, ಶಿವಾಜಿ ವೃತ್ತದಲ್ಲಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಚಕ್ಕಡಿಯಲ್ಲಿ ಶಿವಾಜಿ ವೃತ್ತ, ರೀಗಲ್‌ ವೃತ್ತ, ಮಾರುಕಟ್ಟೆ ಪ್ರದೇಶ, ಹಳೇ ಬಸ್‌ ನಿಲ್ದಾಣದ ಮಾರ್ಗವಾಗಿ ಉಪವಿಭಾಗ ಕಚೇರಿ ತಲುಪಿದರು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ನಡುವೆ ಕಲಾಭವನದ ಎದುರಿಗೆ ಇರುವ ಅಂಬೇಡ್ಕರ್‌ ಮೂರ್ತಿಗೂ ಮಾಲಾರ್ಪಣೆ ಮಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಅಲೆ ಇದೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಅನಿಲ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳು ನಮ್ಮ ಕೈ ಹಿಡಿಯಲಿವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆಸ್ತಿ ಪ್ರಮಾಣ ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ರಿಯಲ್‌ ಎಸ್ಟೇಟ್‌ ಕಿಂಗ್‌ ಇದ್ದಂತೆ. ಅವರ ಆಸ್ತಿ ಪ್ರಮಾಣ ಹೆಚ್ಚಾಗಿರಬೇಕೇ ಹೊರತು, ನನ್ನದಲ್ಲ. ಡೇರಿಗಾಗಿ ನಾನು ಬಹಳ ವರ್ಷಗಳ ಹಿಂದೆ ಪ್ರತಿ ಎಕರೆಗೆ ₹12,000 ಖರೀದಿ ಮಾಡಿದ್ದ ಜಮೀನಿನ ಆಸ್ತಿ ಮೌಲ್ಯ ಈಗ ₹30ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ, ಆಸ್ತಿ ಮೌಲ್ಯ ಹೆಚ್ಚಾಗಿದೆ. ಸಚಿವನಾದ ನಂತರ ಒಂದು ಗುಂಟೆ ಜಮೀನೂ ಹೆಚ್ಚಾಗಿಲ್ಲ. ಪೂರ್ವಜರಿಂದ ಬಂದ ಆಸ್ತಿಯೇ ಅಪಾರ ಪ್ರಮಾಣದಲ್ಲಿರುವುದರಿಂದ ನನಗೆ ಜಮೀನು ಕಬಳಿಸುವ ಆಸೆ ಇಲ್ಲ’ ಎಂದರು.

‘ಬಿಎಸ್‌ವೈಗೆ ಮೂರು ತಿಂಗಳೂ ಸಿಗದು ಸಿಎಂ ಪಟ್ಟ’

ಧಾರವಾಡ: ಬಿಜೆಪಿ ಅಧಿಕಾರಕ್ಕೆ ಬಂದರೆ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಕನಿಷ್ಠ ಮೂರು ತಿಂಗಳೂ ಮುಖ್ಯಮಂತ್ರಿಯಾಗಲು ಆ ಪಕ್ಷದವರು ಬಿಡುವುದಿಲ್ಲ ಎಂದು ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ನಾನು ಧುಮುಕಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾರೇ ಬಂದು ಪ್ರಚಾರ ಮಾಡಲಿ, ಕಾಂಗ್ರೆಸ್‌ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಹೊರಗಿನಿಂದ ಬಂದವರ ಮಾತು ಕೇಳುವಷ್ಟು ದಡ್ಡರು ಕರ್ನಾಟಕದವರಲ್ಲ. ಇಲ್ಲಿ ಸುಶಿಕ್ಷಿತ ಹಾಗೂ ಪ್ರಬುದ್ಧ ಮತದಾರರು ಇದ್ದಾರೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿ ಘೋಷಿಸಿದ್ದ ಭರವಸೆಗಳು ಬಹುತೇಕ ಈಡೇರಿವೆ. ಹಲವು ಭಾಗ್ಯಗಳು ಯಶಸ್ವಿಯಾಗಿರುವುದೇ ಕಾಂಗ್ರೆಸ್‌ ಗೆಲುವಿಗೆ ಶ್ರೀರಕ್ಷೆಯಾಗಲಿದೆ’ ಎಂದರು.

ಪಕ್ಷದ ತಾರಾ ಪ್ರಚಾರಕರು ಯಾರು ಎಂಬ ಪ್ರಶ್ನೆಗೆ, ‘ನಾನೇ ಇದ್ದೀನಲ್ಲ. ಈ ಭಾಗದಲ್ಲಿ ನಾನೇ ತಾರಾ ಪ್ರಚಾರಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT