ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಾನುಘಟಿ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ

ಜಗದೀಶ ಶೆಟ್ಟರ್‌, ಪ್ರಸಾದ ಅಬ್ಬಯ್ಯ, ರಾಜಣ್ಣಾ ಕೊರವಿ ನಾಮಪತ್ರ ಸಲ್ಲಿಕೆ
Last Updated 24 ಏಪ್ರಿಲ್ 2018, 9:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅವರು ಸೋಮವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮೊದಲು ಮೂವರೂ ಅಭ್ಯರ್ಥಿಗಳು ಪ್ರತ್ಯೇಕವಾಗಿ ತಮ್ಮ ಸಾವಿರಾರು ಬೆಂಬಲಿಗರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಡಗೂಡಿ ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶಿಸಿದರು.

ಜಗದೀಶ ಶೆಟ್ಟರ್‌: ಸೆಂಟ್ರಲ್‌ ಕ್ಷೇತ್ರವನ್ನು ಸತತ ಐದು ಬಾರಿ ಈಗಾಗಲೇ ಪ್ರತಿನಿಧಿಸಿರುವ ಶೆಟ್ಟರ್‌ ಅವರು, ಆರನೇ ಬಾರಿಗೆ ಆಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಸೆಂಟ್ರಲ್‌ ಕ್ಷೇತ್ರ ವ್ಯಾಪ್ತಿಯ ಉದಯನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ತೆರದ ವಾಹನವನ್ನೇರಿ ದಾದಿಯುದ್ದಕ್ಕೂ ನೆರೆದಿದ್ದ ಸಾರ್ವಜನಿಕರಿಗೆ ಶೆಟ್ಟರ್‌ ಕೈಮುಗಿಯುವ ಮೂಲಕ ಮತಯಾಚಿಸಿದರು. ಅವರ ಪತ್ನಿ ಶಿಲ್ಪಾ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಸಹೋದರ ಪ್ರದೀಪ ಶೆಟ್ಟರ್‌, ಉಪಮೇಯರ್‌ ಮೇನಕಾ ಹುರುಳಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಡಿ.ಕೆ.ಚವ್ಹಾಣ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉದ್ಯಮಿ ವಿಜಯ ಸಂಕೇಶ್ವರ, ಅಶೋಕ ಕಾಟವೆ, ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರು ಸಾಥ್‌ ನೀಡಿದರು.

ನಾಗಶೆಟ್ಟಿಕೊಪ್ಪದ ಹನುಮ ದೇವಾಲಯ, ಭವಾನಿನಗರದ ರಾಘವೇಂದ್ರ ಸ್ವಾಮಿಮಠ, ದೇಶಪಾಂಡೆ ನಗರದ ಕಾಮಾಕ್ಷಿಗುಡಿ ಮತ್ತು ಕೋರ್ಟ್‌ ಸರ್ಕಲ್‌ ಬಳಿ ಇರುವ ಸಾಯಿ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದರು.

ಕಲಾ ತಂಡಗಳ ವಾದ್ಯ ವೈಭವ, ಕಾರ್ಯಕರ್ತರ ನೃತ್ಯದ ನಡುವೆ ಮೆರವಣಿಗೆಯಲ್ಲಿ ಸಾಗಿ ಬಂದ ಶೆಟ್ಟರ್‌ ಅವರಿಗೆ ಅಭಿಮಾನಿಗಳು ಹೂಹಾರ ಹಾಕಿ ಶುಭ ಕೋರಿದರು.

‘ನನಗೆ ಆರನೇ ಬಾರಿಯೂ ಕ್ಷೇತ್ರದ ಮತದಾರರು ಹೆಚ್ಚಿನ ಮತಗಳಿಂದ ಆಶೀರ್ವಾದ ಮಾಡುವ ವಿಶ್ವಾಸವಿದೆ’ ಎಂದು ಶೆಟ್ಟರ್‌ ಹೇಳಿದರು.
‘ಕಳೆದ 25 ವರ್ಷಗಳಿಂದ ಸ್ವಚ್ಛ ಆಡಳಿತ ನಡೆಸಿರುವುದರಿಂದ ವಿರೋಧಿಗಳಿಗೆ ನನ್ನ ವಿರುದ್ಧ ಆರೋಪ ಮಾಡಲು ವಿಷಯಗಳೇ ಇಲ್ಲದಿರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಪ್ರಸಾದ ಅಬ್ಬಯ್ಯ: ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಕಿತ್ತೂರು ಚನ್ನಮ್ಮ ವೃತ್ತದ ಸಮೀಪ ಇರುವ ಬಾಸೆಲ್‌ ಮಿಷನ್‌ ಚರ್ಚ್‌ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿದ್ಧಾರೂಢಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ಫತೇಶಾವಲಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಅದ್ಧೂರಿ ಮೆರವಣಿಗೆ ಬಂದರು. ಕಲಾ ಮೇಳಗಳ ವಾದ್ಯ ವೈಭವ, ಪಟಾಕಿ ಆರ್ಭಟ ಮತ್ತು ಕಾರ್ಯಕರ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ಬಯ್ಯ, ‘ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ನೋಡಿದರೆ ನಾನು 2ನೇ ಬಾರಿಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸಮಲ್‌ ಜೈನ್‌, ಸತೀಶ ಮೆಹರವಾಡೆ, ರಾಜಾ ದೇಸಾಯಿ, ಮೌಲಾ ಕುಮಟಾಕರ, ಸುನೀತಾ ಹುರಕಡ್ಲಿ, ಗಣೇಶ ಟಗರಗುಂಟಿ, ಬಂಗಾರೇಶ ಹಿರೇಮಠ, ಬಷೀರ್‌ ಗುಡಮಾಲ, ರಜತ್‌ ಉಳ್ಳಾಗಡ್ಡಿ, ಅನ್ವರ್‌ ಮುಧೋಳ ಮೆರವಣಿಗೆಯಲ್ಲಿ ಅಬ್ಬಯ್ಯ ಅವರಿಗೆ ಸಾಥ್‌ ನೀಡಿದರು.

ರಾಜಣ್ಣಾ ಕೊರವಿ: ಸೆಂಟ್ರಲ್‌ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ಅವರು ಉಣಕಲ್‌ ಸಿದ್ದಪ್ಪಜ್ಜನ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಕ್ಕಡಿಯನ್ನೇರಿ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಹೆಗಲ ಮೇಲೆ ಹಸಿರು ಟವೆಲ್‌, ಕೈಯಲ್ಲಿ ಜೆಡಿಎಸ್‌ ಧ್ವಜ ಹಿಡಿದು ಸಾವಿರಾರು ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮೂರುಸಾವಿರಪ್ಪ ಕೊರವಿ, ಡಾ.ಅಬ್ದುಲ್‌ ಕರೀಂ ಮೊದಲಾವರು ಕೊರವಿ ಅವರ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

‘ಆರು ತಿಂಗಳಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದೇನೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಜೆಡಿಎಸ್‌ ಪರ ಒಲವು ವ್ಯಕ್ತವಾಗುತ್ತಿದೆ. ಗೆಲ್ಲುವ ವಿಶ್ವಾಸವಿದೆ’ ಎಂದು ರಾಜಣ್ಣ ಕೊರವಿ ಹೇಳಿದರು.

ಸಂಚಾರ ದಟ್ಟಣೆ: ಜನ ತತ್ತರ

ಹುಬ್ಬಳ್ಳಿ: ನಾಮಪತ್ರ ಸಲ್ಲಿಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಿದ ಕಾರಣ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ ಮತ್ತು ಕೊಪ್ಪಿಕರ್‌ ರಸ್ತೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ  ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.ಮಿನಿ ವಿಧಾನಸೌಧ ಮತ್ತು ಮಹಾನಗರ ಪಾಲಿಕೆ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ಕಾರಣ, ವಿವಿಧ ಕೆಲಸಕ್ಕೆ ಬಂದಿದ್ದ ಜನರೂ ಬರಿಗೈಯಲ್ಲಿ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT