ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷ ಬಿಜೆಪಿ ಟೀಕೆ ಮಾಡಿದವರಿಗೆ ಟಿಕೆಟ್: ರಾಜೂಗೌಡ ವಿಷಾದ

Last Updated 24 ಏಪ್ರಿಲ್ 2018, 10:05 IST
ಅಕ್ಷರ ಗಾತ್ರ

ಅಫಜಲಪುರ: ‘ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರಿಗೆ, ಒಳ್ಳೆಯವರಿಗೆ ಕಾಲವಿಲ್ಲದಂತಾಗಿದೆ. ಪಕ್ಷವನ್ನು ಯಾರು ಟೀಕೆ ಮಾಡುತ್ತಾರೋ ಅಂತಹವರಿಗೆ ಮಣೆ ಹಾಕುವ ದುಸ್ಥಿತಿ ಬಂದೊದಗಿದೆ. ಮಾಲೀಕಯ್ಯ ಗುತ್ತೇದಾರ ಬಿಜೆಪಿಯನ್ನು ನಿರಂತರವಾಗಿ ಟೀಕೆ ಮಾಡುತ್ತಾ ಬಂದವರು. ಆದರೆ, ಅಂತಹವರಿಗೆ ಪಕ್ಷ ಟಿಕೆಟ್‍ ನೀಡಿದೆ’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಾಜೂಗೌಡ ಪಾಟೀಲ ವಿಷಾದಿಸಿದರು.

ಇಲ್ಲಿನ ಆರ್‌.ವಿ.ಫೌಂಡೇಷನ ಕಾರ್ಯಾಲಯದಲ್ಲಿ ಸೋಮವಾರ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ 30 ವರ್ಷದಿಂದ ಅಧಿಕಾರದಲ್ಲಿರುವ ಮಾಲೀಕಯ್ಯ ಯಾವುದೇ ಕೆಲಸ ಮಾಡಿಲ್ಲ. ಇನ್ನೂ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿಗಳು ಇಲ್ಲದೇ ಜನ ಗೋಳಾಡುತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆ ಮಾಡಿಲ್ಲ. ಇನ್ನೊಂದು ಕಡೆ 2 ಬಾರಿ ಶಾಸಕರಾಗಿರುವ ಎಂ.ವೈ.ಪಾಟೀಲ ಸಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಶೇ 70ರಷ್ಟು ಜನ ಈ ಇಬ್ಬರ ನಾಯಕತ್ವದಿಂದ ಕುಸಿದು ಹೋಗಿದ್ದಾರೆ. ಈ ನಾಯಕರು ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಾರೆ. ನನ್ನ ಹಿಂದೆ ಮತದಾರರಿದ್ದಾರೆ. ಅಭಿವೃದ್ಧಿ ಪರ ಮತ ಹಾಕಲು ತಯಾರಾಗಿದ್ದಾರೆ’ ಎಂದು ಹೇಳಿಕೊಂಡರು.

‘ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಜನರಿಗೆ ಬದಲಾವಣೆ ಬೇಕಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಅಭಿವೃದ್ಧಿಯ ಸಲುವಾಗಿ ಕೆಲಸ ಮಾಡಲಾಗುವುದು. ಸಾಕಷ್ಟು ಜನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಲು ಬರುತ್ತಿದ್ದಾರೆ’ ಎಂದು ತಿಳಿಸಿದರು.

ಜಿ.ಪಂ ಮಾಜಿ ಸದಸ್ಯ ‍‍ಐಯೂಪ ಪಟೇಲ ಹಾಗೂ ಸಂಗಣ್ಣ ಕಣ್ಣಿ, ನಾಗಣಗೌಡ ಪಾಟೀಲ, ರಾಜೇಶ್ವರಿ ಸೋನಾರ, ಮೈಬೂಬ ತಾಂಬೋಳಿ ಮತ್ತಿತರರು ಪಕ್ಷೇತರ ಅಭ್ಯರ್ಥಿ ರಾಜೂಗೌಡರಿಗೆ ಬೆಂಬಲ ವ್ಯಕ್ತಪಡಿಸಿದರು.

ಎತ್ತಿನ ಬಂಡಿಯಲ್ಲಿ ಮೆರವಣಿಗೆ: ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಎತ್ತಿನ ಬಂಡಿಗಳಲ್ಲಿ ಪಕ್ಷೇತರ ಅಭ್ಯರ್ಥಿ ರಾಜೂಗೌಡರನ್ನು ಮೆರವಣಿಗೆ ಮಾಡಲಾಯಿತು.

ವಿಶೇಷವಾಗಿ ಇನ್ನೊಂದು ಬಂಡಿಯಲ್ಲಿ ರಾಜೂಗೌಡ ಕುಟುಂಬದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಬಂಡಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಜಿ.ಪಂ ಸದಸ್ಯ ಸುಮಿತ್ ಪಾಟೀಲ, ಮುಖಂಡರಾದ ಸಿದ್ದಣಗೌಡ ಪಾಟೀಲ, ಬಸಣ್ಣ ಗುಣಾರಿ, ರಾಜು ನಿಂಬಾಳ, ಶಿವು ಪ್ಯಾಟಿ, ಮಹಾಂತೇಶ ಉಜನಿ, ನಾಗಣ್ಣ ಪಾಟೀಲ ಮಣೂರ, ಮಲ್ಲಿನಾಥ ಕುಂಬಾರ ಮಾರುತಿ ಚವಾಣ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT