ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಸಾವಿರ ಜನರಿಗೆ ವಿವಿ ಪ್ಯಾಟ್ ಮಾಹಿತಿ

ತರಬೇತಿ ಕಾರ್ಯಾಗಾರದಲ್ಲಿ ಈಶಾನ್ಯ ವಲಯ ಐಜಿಪಿ ಎಸ್.ಮುರುಗನ್ ಶ್ಲಾಘನೆ
Last Updated 24 ಏಪ್ರಿಲ್ 2018, 10:08 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲಾ ಸ್ವೀಪ್ ಸಮಿತಿಯಿಂದ ಒಂದೇ ದಿನದಲ್ಲಿ ಸುಮಾರು 15 ಸಾವಿರ ಜನರಿಗೆ ವಿವಿ ಪ್ಯಾಟ್ ಯಂತ್ರದ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಈಶಾನ್ಯ ವಲಯ ಐಜಿಪಿ ಎಸ್. ಮುರುಗನ್ ಹೇಳಿದರು.

ಇಎಸ್‌ಐಸಿ ಆಸ್ಪತ್ರೆಯ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇವಿಎಂ ಮತ್ತು ವಿವಿ ಪ್ಯಾಟ್ ಪರಿಚಯ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆಯು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಮಾತ್ರವಲ್ಲ, ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಬಲಗೊಳಿ ಸುವ ಪ್ರಕ್ರಿಯೆ ಆಗಿದೆ. ಮತದಾರರಿಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನೀಡಲಾಗಿದೆ. ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಬೇಕಾದರೆ ಆಯೋಗ ರೂಪಿಸಿರುವ ನಿಯಮಗಳಂತೆ ಚುನಾವಣಾ ಪ್ರಕ್ರಿಯೆ ನಡೆಯಬೇಕು ಮತ್ತು ಪ್ರತಿಯೊಬ್ಬ ಮತದಾರ ಕಡ್ಡಾಯ ವಾಗಿ ಮತ ಚಲಾಯಿಸಬೇಕು’ ಎಂದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ‘ಕಲಬುರ್ಗಿ ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ವಿಭಾಗದ ತಾಲ್ಲೂಕುಗಳ ಶಿಕ್ಷಕರು, ಕಲಬುರ್ಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಅಧಿಕಾರಿ, ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಬ್ಯಾಂಕ್ ಸಿಬ್ಬಂದಿ, ಮಾದರಿ ನೀತಿ ಸಂಹಿತೆ ತಂಡ, ಇಎಸ್‌ಐಸಿ ಆಸ್ಪತ್ರೆ ಸಿಬ್ಬಂದಿ, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಮಾಸ್ಟರ್ ಟ್ರೇನರ್ ಡಾ. ಶಶಿಶೇಖರ ರೆಡ್ಡಿ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ತರಬೇತಿ ನೀಡಿದರು. ಸ್ವೀಪ್ ಗೀತೆ, ಚುನಾವಣಾ ಆಯೋಗದಿಂದ ರೂಪಿಸಿರುವ ವಿಡಿಯೋ ಮತ್ತು ಗೀತಗಾಯನ ಸಿ.ಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಇದ್ದರು.

**

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿ ಪ್ಯಾಟ್ ಯಂತ್ರ ಬಳಸಲಾಗುತ್ತಿದೆ. ಶಿಕ್ಷಕರು ಈ ಯಂತ್ರದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು
- ಹೆಪ್ಸಿಬಾರಾಣಿ ಕೊರ್ಲಪಾಟಿ, ಅಧ್ಯಕ್ಷೆ, ಜಿಲ್ಲಾ ಸ್ವೀಪ್ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT