ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ

ಜೆಡಿಎಸ್‌ ಅಭ್ಯರ್ಥಿ ಜೀವಿಜಯ, ಪಕ್ಷೇತರ ಅಭ್ಯರ್ಥಿಯಾಗಿ ಎನ್‌. ಮುತ್ತಪ್ಪ ಕಣಕ್ಕೆ
Last Updated 24 ಏಪ್ರಿಲ್ 2018, 10:33 IST
ಅಕ್ಷರ ಗಾತ್ರ

ಮಡಿಕೇರಿ: ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಒಂದು ದಿನ ಮಾತ್ರವೇ ಬಾಕಿಯಿದ್ದು, ಸೋಮವಾರ ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು.

ಕೊಡಗು ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆ ಅಖಾಡಕ್ಕೆ ಪ್ರವೇಶಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎ. ಜೀವಿಜಯ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ನಡೆಸದೇ ಜಿಲ್ಲಾಡಳಿತ ಭವನಕ್ಕೆ ಕಾರ್ಯಕರ್ತರೊಂದಿಗೆ ಬಂದ ಜೀವಿಜಯ, ಪುತ್ರ ಸಂಜಯ್‌ ಜೀವಿಯ, ಮುಖಂಡರಾದ ರಾಜಾರಾವ್, ಸುರೇಶ್, ಎಸ್.ಎಂ. ಡಿಸಿಲ್ವಾ ಅವ ರೊಂದಿಗೆ ತೆರಳಿ ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಕೋನರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ವಾಪಸ್‌ ಬಂದ ಬಳಿಕ ಬೆಂಬಲಿಗರು ಎಚ್.ಡಿ. ಕುಮಾರಸ್ವಾಮಿ ಹಾಗೂ ಜೀವಿಜಯ್ ಪರ ಘೋಷಣೆ ಕೂಗಿದರು. ಸ್ವಲ್ಪ ದೂರ ಮೆರವಣಿಗೆಯಲ್ಲಿ ಸಾಗಿದ ಅವರು ವಾಪಸ್‌ ತೆರಳಿದರು.

ಬಂಡಾಯದ ಬಿಸಿ: ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ನಾಪಂಡ ಮುತ್ತಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕೂರ್ಗ್‌ ಕ್ಲಬ್‌ ಆವರಣದಿಂದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ನಾಪಂಡ ಮುತ್ತಪ್ಪ, ಮುಖಂಡರಾದ ಅಮೀದ್, ಕಿಶೋರ್‌, ಅಜ್ಜಳ್ಳಿ ರವಿ, ಪವನ್‌ ತಿಮ್ಮಯ್ಯ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅದರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪಿರಿಯಾಪಟ್ಟಣದ ಪಿ.ಎಸ್. ಯಡೂರಪ್ಪ ಹಾಗೂ ಮೂರ್ನಾಡಿನ ಬೈಲಮನೆ ತಿಮ್ಮಯ್ಯ ಸಹ ನಾಮಪತ್ರ ಸಲ್ಲಿಸಿದರು.

ಬಿ.ಎ. ಜೀವಿಜಯ ಮಾತನಾಡಿ, ‘ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಕ್ಷೇತ್ರದಲ್ಲಿ ಒಂದು ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತಿರುವೆ. ಜನರ ಆಶೀರ್ವಾದ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ನಾಪಂಡ ಮುತ್ತಪ್ಪ ಮಾತನಾಡಿ, ‘ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದೇನೆ. ಕೊನೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾರು ಕಣದಲ್ಲಿ ಉಳಿಯಲಿದ್ದಾರೆ ಎಂಬುದು ತಿಳಿಯಲಿದೆ’ ಎಂದು ಹೇಳಿದರು.

‘ಚಂದ್ರಮೌಳಿ ಅವರಿಗೆ ಬಿ– ಫಾರಂ ನೀಡಿದ್ದರೆ ನಾನು ನಾಮಪತ್ರ ಸಲ್ಲಿಸುತ್ತಿರಲಿಲ್ಲ. ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗೆ ಟಿಕೆಟ್ ನೀಡಿರುವ ಕಾರಣ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ. ಈ ಮೊದಲು ನನಗೆ ಟಿಕೆಟ್‌ ಎಂದು ಹೈಕಮಾಂಡ್‌ ನಿರ್ಧರಿಸಿತ್ತು. ಕೊನೆಯ ಗಳಿಗೆಯಲ್ಲಿ ಬದಲಾವಣೆ ಮಾಡಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಬೇಡ. ವಿಧಾನ ಪರಿಷತ್‌ ಸದಸ್ಯ ಸ್ಥಾನ ಅಥವಾ ಜಿಲ್ಲಾ ಅಧಕ್ಷ ಹುದ್ದೆ ನೀಡುವ ಭರವಸೆ ನೀಡಿದ್ದರು. ಅದನ್ನು ತಿರಸ್ಕಾರ ಮಾಡಿರುವೆ’ ಎಂದು ಹೇಳಿದರು.

ನಾಮಪತ್ರ ಸಲ್ಲಿಸಿದ ಯಡೂರಪ್ಪ

ಮಡಿಕೇರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಯಡೂರಪ್ಪ ಸಹ ನಾಮಪತ್ರ ಸಲ್ಲಿಸಿದರು. ಇದೇನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನಾಮಪತ್ರ ಸಲ್ಲಿಸಿದರೆ ಎಂದು ಭಾವಿಸಬೇಡಿ. ಅವರು ಯಡಿಯೂರಪ್ಪ ಅಲ್ಲ; ಯಡೂರಪ್ಪ!
ಸಮಾಜಸೇವೆ ಕ್ಷೇತ್ರ ಕನಸು ಹೊತ್ತು ಪಿರಿಯಾಪಟ್ಟಣದ ಪಿ.ಎಸ್‌. ಯಡೂರಪ್ಪ ಎಂಬುವರು ನಾಮಪತ್ರ ಸಲ್ಲಿಸಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಯಾರ ಒತ್ತಡವೂ ಇರಲಿಲ್ಲ. ಸ್ವಇಚ್ಛೆಯಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

**

ಜೆಡಿಎಸ್ ಪ್ರತಿಸ್ಪರ್ಧಿ ಅಲ್ಲ ಎಂಬ ವಾದ ಅರ್ಥಹೀನ. ಫಲಿತಾಂಶದಲ್ಲಿ ಯಾರು ಪ್ರತಿಸ್ಪರ್ಧಿ ಎಂಬುದು ಗೊತ್ತಾಗಲಿದೆ
– ಬಿ.ಎ. ಜೀವಿಜಯ, ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT