ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಉಮೇದುವಾರಿಕೆ ಸಲ್ಲಿಕೆ ಅಬ್ಬರ

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆ, ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ
Last Updated 24 ಏಪ್ರಿಲ್ 2018, 10:41 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಇದ್ದು, ಜಿಲ್ಲೆಯಾದ್ಯಂತ ಸೋಮವಾರ ಉಮೇದುವಾರಿಕೆ ಸಲ್ಲಿಕೆ ಅಬ್ಬರ ಜೋರಾಗಿತ್ತು.

ಪ್ರಮುಖ ಮೂರೂ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಂಯುಕ್ತ ಜನತಾ ದಳ, ನಮ್ಮ ಕಾಂಗ್ರೆಸ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್‌ ರೋಡ್‌ ಶೋ ನಡೆಸಿದರು.

ಕಾರ್ಯಕರ್ತರು ರೋಡ್‌ ಶೋ ಉದ್ದಕ್ಕೂ ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಪರ ಜೈಕಾರ ಕೂಗಿದರು. ಅಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಪಕ್ಷಗಳ ಬಾವುಟಗಳು ರಾರಾಜಿಸುತ್ತಿದ್ದವು. ವಿಧಾನ ಪರಿಷತ್‌ ಸದಸ್ಯರು ಹಾಗೂ ಪಕ್ಷಗಳ ಹಿರಿಯ ಮುಖಂಡರು ಅಭ್ಯರ್ಥಿಗಳ ಜತೆ ರೋಡ್‌ ಶೋನಲ್ಲಿ ಪಾಲ್ಗೊಂಡರು.

ಹಲವು ಅಭ್ಯರ್ಥಿಗಳು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಚುನಾವಣಾಧಿಕಾರಿಗಳ ಕಚೇರಿ ಬಳಿ ಕಾರ್ಯಕರ್ತರ ದೊಡ್ಡ ದಂಡೇ ಕಂಡುಬಂತು. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಬ್ಯಾರಿಕೇಡ್‌ ಹಾಕಲಾಗಿತ್ತು. ಜತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಕೆಲವೆಡೆ ಕಾರ್ಯಕರ್ತರು ಪೊಲೀಸ್ ಸರ್ಪಗಾವಲು ಭೇದಿಸಿ ಕಚೇರಿಗಳತ್ತ ನುಗ್ಗಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

46 ನಾಮಪತ್ರ: ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರದ ಏಳು ದಿನಗಳಿಗೆ ಹೋಲಿಸಿದರೆ ಸೋಮವಾರ ಅತಿ ಹೆಚ್ಚು 46 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಮುಳಬಾಗಿಲು ಮೀಸಲು ಕ್ಷೇತ್ರವೊಂದರಲ್ಲೇ 15 ನಾಮಪತ್ರ ಸಲ್ಲಿಕೆಯಾದವು. ಉಳಿದಂತೆ ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರದಲ್ಲಿ 2, ಕೆಜಿಎಫ್‌ ಮೀಸಲು ಕ್ಷೇತ್ರದಲ್ಲಿ 10, ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ 3, ಕೋಲಾರ ಸಾಮಾನ್ಯ ಕ್ಷೇತ್ರದಲ್ಲಿ 10 ಮತ್ತು ಮಾಲೂರು ಸಾಮಾನ್ಯ ಕ್ಷೇತ್ರದಲ್ಲಿ 6 ನಾಮಪತ್ರ ಸಲ್ಲಿಕೆಯಾಗಿವೆ.

ಜಿಲ್ಲಾ ಕೇಂದ್ರದ ಕೋಲಾರ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ವರ್ತೂರು ಪ್ರಕಾಶ್‌, ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ, ಬಿಜೆಪಿ ಅಭ್ಯರ್ಥಿ ಓಂಶಕ್ತಿ ಚಲಪತಿ, ಸಂಯುಕ್ತ ಜನತಾ ದಳದಿಂದ ಸುಧಾಕರ್‌ ಗೌಡ, ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿಯಿಂದ (ಎಐಎಂಇಪಿ) ತನ್ವೀರ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಆರ್‌ಪಿಐ) ಮಂಜುಳಾ ಉಮೇದುವಾರಿಕೆ ಸಲ್ಲಿಸಿದರು.

ಪಕ್ಷೇತರರಾಗಿ ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ತಾಯಿ ಗೌರಮ್ಮ, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಎನ್‌.ಪ್ರಕಾಶ್‌ ಮತ್ತು ಶ್ರೀರಾಮ್ ನಾಮಪತ್ರ ಹಾಕಿದರು.

ಡಿ.ಕೆ.ರವಿ ತಾಯಿ ಆಶೀರ್ವಾದ: ಬಿಜೆಪಿ ಅಭ್ಯರ್ಥಿ ಓಂಶಕ್ತಿ ಚಲಪತಿ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಡಿ.ಕೆ.ರವಿಯವರ ತಾಯಿ ಗೌರಮ್ಮರ ಕಾಲಿಗೆ ನಮಸ್ಕರಿಸಿ, ‘ನಿಮ್ಮ ಮಗನ ವರ್ಗಾವಣೆಯಾದಾಗ ಬೀದಿಗಿಳಿದು ಹೋರಾಟ ಮಾಡಿದೆ. ನನ್ನನ್ನು ತಮ್ಮ ಮಗನೆಂದು ತಿಳಿದು ಚುನಾವಣೆಯಲ್ಲಿ ಆಶೀರ್ವದಿಸಿ’ ಎಂದು ಮನವಿ ಮಾಡಿದರು. ಗೌರಮ್ಮ ನಸು ನಗುತ್ತಾ, ‘ಒಳ್ಳೆಯದಾಗಲಿ’ ಎಂದು ಆಶೀರ್ವಾದ ಮಾಡಿದರು.

ತಾರಾ ಮೆರುಗು: ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಮೃದ್ಧಿ ಮಂಜುನಾಥ್‌ ಅವರು ಚಿತ್ರ ನಟರಾದ ಪ್ರೇಮ್‌, ಪ್ರಜ್ವಲ್‌ ದೇವರಾಜ್‌ ಮತ್ತು ನಿರ್ದೇಶಕ ದಿನಕರ್ ತೂಗುದೀಪ ಜತೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಜತೆಗೆ ಮುಳಬಾಗಿಲು ನಗರದ ಸೋಮೇಶ್ವರ ನಗರದಿಂದ ಚುನಾವಣಾಧಿಕಾರಿ ಕಚೇರಿವರೆಗೆ ರೋಡ್‌ ಶೋ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಸಹ ಬೃಹತ್‌ ರೋಡ್‌ ಶೋ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT