ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಯೋಜನೆ ಮರೀಚಿಕೆ

ಪ್ರಚಾರಕ್ಕಷ್ಟೇ ಸಿಮಿತಗೊಂಡ ಶಾಶ್ವತ ನೀರಾವರಿ; ಸ್ಥಳೀಯ ಜಲಮೂಲಗಳ ಅಭಿವೃದ್ಧಿ ನಿರ್ಲಕ್ಷ್ಯ
Last Updated 24 ಏಪ್ರಿಲ್ 2018, 10:47 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ನೀರಿಗೆ ಹಾಹಾಕಾರ.  ಮಳೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆಯಾದರೂ ಶಾಶ್ವತ ನೀರಾವರಿ ಎನ್ನುವುದು ಮರೀಚಿಕೆಯಾಗಿದೆ.

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಈ ಭಾಗದ ಜನಪ್ರತಿನಿಧಿಗಳು ತಮ್ಮ ರಾಜಕೀಯ ಆರಂಭಿಸುವುದೇ ನೀರಿನಿಂದ. ಶಾಶ್ವತ ನೀರಾವರಿ ಕಲ್ಪಿಸುವ ಭರವಸೆ ನೀಡುತ್ತಲೇ ಅಧಿಕಾರಕ್ಕೆ ಬಂದಿದ್ದ ಹಲವು ಶಾಸಕರು, ಸಚಿವರು ರಾಜಕೀಯ ಜೀವನದೂದ್ದಕ್ಕೂ ಭರವಸೆಯಲ್ಲೇ ಕಾಲ ಕಳೆದಿದ್ದಾರೆ.

ನೀರಿನ ವಿಚಾರವಿಲ್ಲದೆ ಚುನಾವಣಾ ಪ್ರಚಾರವೇ ಇಲ್ಲ. ಆರೂವರೆ ದಶಕದಿಂದ ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳದ್ದೇ ಕಾರುಬಾರು. ಅವರ ಚುನಾವಣಾ ಪ್ರಣಾಳಿಕೆಯಲ್ಲೂ ನೀರಿಗೆ ಮೊದಲ ಆದ್ಯತೆ. ಆದರೆ ಆ ಭರವಸೆ ಜಾರಿಯಾಗಲೇ ಇಲ್ಲ ಎನ್ನುವುದು ಗಂಭೀರ ವಿಷಯ.

ಬಂಗಾರಪೇಟೆ, ಕೋಲಾರ, ಮಾಲೂರು ಮತ್ತು 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ದಶಕದ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇಲ್ಲಿನ ಯರಗೋಳ್ ಜಲಾಶಯಕ್ಕೆ ಶಂಕು ಸ್ಥಾಪನೆ ಮಾಡಿದರು.

ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಯರಗೋಳ್ ಯೋಜನೆ ಹಾಗೂ ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಗೆ ಕಾಳಜಿ ವಹಿಸಿಲ್ಲ. ಬದಲಾಗಿ ಎತ್ತಿನಹೊಳೆ, ಕೆ.ಸಿ.ವ್ಯಾಲಿ ಯೋಜನೆ ಹೀಗೆ ಹಲ ನೀರಾವರಿ ಯೋಜನೆ ಪ್ರಸ್ತಾಪಿಸುತ್ತಿವೆ. ಆದರೆ ಇದುವರೆಗೂ ಯಾವುದೇ ನಿರ್ದಿಷ್ಟ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಿಲ್ಲ.
ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ಕೆರೆ ಕುಂಟೆಗಳೇ ನೀರಿನ ಮುಖ್ಯ ಜೀವಾಳ. ಮಳೆ ನೀರು ಸಂರಕ್ಷಣೆ, ಕೆರೆಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದ ಸರ್ಕಾರ, ದೂರದಲ್ಲಿ ಸಿಗುವ ನೀರನ್ನು ಇಲ್ಲಿಗೆ ಸರಬರಾಜು ಮಾಡುವ ಯೋಜನೆ ರೂಪಿಸಿ ವಿಫಲವಾಗುತ್ತಿವೆ.

ದಶಕದಿಂದ ಇಲ್ಲಿ ಸರಾಸರಿ ಮಳೆ ಬೀಳುತ್ತಿದೆ. ಆದರೆ ಬೀಳುವ ಮಳೆಯನ್ನು ಸಮರ್ಪಕವಾಗಿ ಸಂಗ್ರಹಿಸುವ ಕಟ್ಟುನಿಟ್ಟಿನ ಕೆಲಸಕ್ಕೆ ಸರ್ಕಾರ ಕೈ ಹಾಕಿಲ್ಲ. ಇಲ್ಲಿನ ನೀರಿನ ಸೆಲೆಗಳ ಪುನಶ್ಚೇತನ ಕಾರ್ಯ ಕೂಡ ನಡೆದಿಲ್ಲ.

ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು, ಬಟ್ಟಲಿನಾಕಾರದಲ್ಲಿದ್ದ ಕೆರೆಗಳು ತಟ್ಟೆಯಾಕಾರ ಪಡೆದಿವೆ. ಮರಳು ದಂಧೆಗೆ ಸಿಲುಕಿರುವ ಹಲವು ಕೆರೆಗಳು ನೀರು ಹೀರಿಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಂಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮರಳುಗಾಡಾಗುವ ಸಾಧ್ಯತೆಯಿದೆ.

ಮತ್ತೊಂದೆಡೆ ಕೆರೆಗಳು ಸದ್ದಿಲ್ಲದೆ ಮಾಯವಾಗುತ್ತಿವೆ. ನಾಲ್ಕು ದಶಕಗಳ ಹಿಂದೆ ಇದ್ದ 6 ಸಾವಿರಕ್ಕೂ ಹೆಚ್ಚು ಕೆರೆಗಳ ಪೈಕಿ ಪ್ರಸ್ತುತ ಶೇ 8ರಷ್ಟು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪ್ರಭಾವಿಗಳ ಒತ್ತುವರಿಯಿಂದಾಗಿ ಈಗಿರುವ ಕೆರೆಗಳೂ ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ.

ಪಟ್ಟದಲ್ಲಿ ಸುಮಾರು 36 ಎಕರೆ ವಿಸ್ತೀರ್ಣದ ದೊಡ್ಡಕೆರೆ ಐದಾರು ಎಕರೆಯಷ್ಟು ಒತ್ತುವರಿಯಾಗಿದ್ದು, ಕಟ್ಟಡಗಳು ತಲೆ ಎತ್ತಿವೆ. 2012ರಲ್ಲಿ ತಾಲ್ಲೂಕಿನಲ್ಲಿ ಕೇವಲ 534 ಕೆರೆಗಳಿದ್ದವು. ಆಗಿನ ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್ ಅವರು ಕೆರೆ ಒತ್ತುವರಿ ತೆರವುಗೊಳಿಸಿ, ಜೀರ್ಣೋದ್ಧಾರ ಮಾಡಲು ಯತ್ನಿಸಿದರು.

ಕೆರೆಗಳ ಸರ್ವೆ ಕಾರ್ಯಕ್ಕಾಗಿ ಭೂದಾಖಲೆಗಳ ಹಾಗೂ ಭೂಮಾಪನ ಇಲಾಖೆಗೆ ಸುಮಾರು ₹ 50 ಲಕ್ಷ ನೀಡಿದ್ದು, ನಾಲ್ಕು ತಿಂಗಳಲ್ಲಿ ಸರ್ವೆ ಮುಗಿಸುವಂತೆ ಸೂಚಿಸಿದ್ದರು. ಸರ್ವೆ ಕೆಲಸ ಆರಂಭಿಸಲಾಯಿತಾದರೂ ನಿರೀಕ್ಷೆಯಂತೆ ಸರ್ವೆ ಕಾರ್ಯ ನಡೆದಿಲ್ಲ. ಕೆಲವೆಡೆ ಸರ್ವೆ ನಡೆದಿದೆ ಆದರೆ ಗಡಿ ಗುರುತಿಸುವ ಕೆಲಸ ಮಾಡಿಲ್ಲ. ಇನ್ನೂ ಕೆಲವೆಡೆ ಗಡಿ ಗುರುತಿಸಲಾಗಿದೆಯಾದರೂ ಒತ್ತುವರಿ ತೆರವುಗೊಳಿಸಿಲ್ಲ. ಬದಲಾಗಿ ಒತ್ತುವರಿ ಎಗ್ಗಿಲ್ಲದೆ ಸಾಗುತ್ತಿದೆ.

ತಾಲ್ಲೂಕಿನ ಕೆಜಿಎಫ್ ಗೌತಮನಗರದ ಬಳಿಯಿರುವ 11.17 ಎಕರೆ ಗೌಡನಕೆರೆ ಸಂಪೂರ್ಣ ಒತ್ತುವರಿಯಾಗಿದೆ. ಪ್ರಭಾವಿಗಳ ರಿಯಲ್ ಎಸ್ಟೇಟ್ ದಂಧೆಗೆ ಕೆರೆ ಬಲಿಯಾಗಿದೆ. ಆಂಡರ್ಸನ್ ಪೇಟೆ ಸಮೀಪದ ಗಂಗದೊಡ್ಡಿಯ ಸುಮಾರು 12 ಎಕರೆ ಕೆರೆ ಕಣ್ಮರೆಯಾಗಿದೆ. ಚಿಕ್ಕವಲಗಮಾದಿಯ 5.15 ಎಕರೆ ಕೆರೆ, ಆ ಗ್ರಾಮದಿಂದ ಕೆರೆಕಟ್ಟೆ ಮೇಲೆ ಸಿಂಗರಳ್ಳಿಗೆ ಇದ್ದ ರಸ್ತೆ ಹೊಲಗದ್ದೆಗಳಾಗಿ ಮಾರ್ಪಟ್ಟಿದೆ.

ಅನಗತ್ಯ ವಿಚಾರಗಳನ್ನು ವೈಯುಕ್ತಿಕವಾಗಿ ಸ್ವೀಕರಿಸುವ ರಾಜಕಾರಣಿಗಳು ಕೆರೆ, ಕುಂಟೆ ಗೋಮಾಳದಂತಹ ಸಾರ್ವಜನಿಕ ಆಸ್ತಿಗಳು ಅವರ ಕಣ್ಣುಮುಂದೆಯೇ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಉಳಿಸುವಲ್ಲಿ ಏಕೆ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರಾಜಕೀಯ ಇಚ್ಛಾಶಕ್ತಿ ಇಲ್ಲ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಶಾಶ್ವತ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ನನ್ನ ಹಾಗೂ ಕೃಷ್ನಯ್ಯ ಶೆಟ್ಟಿ ಅವಧಿಯಲ್ಲಿ ವರ್ತೂರು ಕೆರೆ ಕೋಡಿ ನೀರನ್ನು ಸಮೇತನಹಳ್ಳಿ ಬಳಿ ಸಂಸ್ಕರಿಸಿ ಮಾಲೂರು ಮತ್ತು ಬಂಗಾರಪೇಟೆಯ 28 ಕೆರೆಗಳಿಗೆ ನೀರು ಹರಿಸುವ ಪ್ರಸ್ತಾವನೆಗೆ ಅಂದಿನ ಜಗದೀಶ್ ಶೆಟ್ಟರ್ ಅವರ ಸಂಪುಟ ಸಭೆ ಒಪ್ಪಗೆ ನೀಡಿತ್ತು. ಅದನ್ನು ಮುಂದುವರೆಸುವುದಾಗಿ ತಿಳಿಸಿದ್ದ ಹಾಲಿ ಶಾಸಕರು ಆ ಬಗ್ಗೆ ಕಾಳಜಿ ವಹಿಸಿಲ್ಲ. ಕೆ.ಸಿ.ವ್ಯಾಲಿ, ಎತ್ತಿನ ಹೊಳೆ ಯೋಜನೆಗಳನ್ನು ಜಾರಿ ಮಾಡುವಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ
- ಎಂ.ನಾರಾಯಣಸ್ವಾಮಿ, ಜೆಡಿಎಸ್ ಟಿಕೆಟ್ ಆಕಾಂಕ್ಷಿ

**

ತಿಂಗಳೊಳಗೆ ಕೆರೆಗಳಿಗೆ ನೀರು

ಕೆ.ಸಿ.ವ್ಯಾಲಿ ಯೋಜನೆ ಅನುಷ್ಠಾನ ಮಾಡಿಯೇ ಮುಂದಿನ ಚುನಾವಣೆಗೆ ಜನರ ಬಳಿ ಹೋಗುತ್ತೇನೆ ಎಂದು ಹೇಳಿದ್ದೆ. ಹೇಳಿದಂತೆ ಯೋಜನೆ ಜಾರಿ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆರೆಗಳಿಗೆ ನೀರು ಹರಿಸುವುದು ಸ್ವಲ್ಪ ತಡವಾಗಿದೆ. ತಿಂಗಳೊಳಗೆ ನೀರು ಕೆರೆಗಳಿಗೆ ಹರಿಯಲಿದೆ
– ಎಸ್.ಎನ್.ನಾರಾಯಣ ಸ್ವಾಮಿ, ಕಾಂಗ್ರೆಸ್ ಶಾಸಕ

**

ಮಾತಿಗೆ ತಪ್ಪಿದ ಶಾಸಕ ನಾರಾಯಣಸ್ವಾಮಿ

ಕೆಸಿ ವ್ಯಾಲಿ ಯೋಜನೆ ನೀರನ್ನು ಆರು ತಿಂಗಳ ಒಳಗೆ ಬಂಗಾರಪೇಟೆ ಕೆರೆಗಳಿಗೆ ಹರಿಸಿಯೇ ಮುಂದಿನ ಚುನಾವಣೆಗೆ ಜನರ ಬಳಿ ಹೋಗುವೆ ಎಂದು 2015ರಲ್ಲೇ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಘೋಷಣೆ ಮಾಡಿದ್ದರು. ಆದರೆ ಅವರು ಮಾತಿಗೆ ತಪ್ಪಿದ್ದಾರೆ. ಇದನ್ನು ಮತದಾರರೇ ಪ್ರಶ್ನೆ ಮಾಡುತ್ತಿದ್ದಾರೆ.

2005-06ರಲ್ಲಿ ನನ್ನ ಅವಧಿಯಲ್ಲಿ ಯರಗೋಳ್‌ ಯೋಜನೆಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಕುಮಾರಸ್ವಾಮಿ ಶಂಕುಸ್ಥಾಪನೆ ಮಾಡಿದ್ದರು. ಅಧಿಕಾರ ಕಳೆದುಕೊಂಡಿದ್ದರಿಂದ ಯೋಜನೆ ಹಾಗೇ ಉಳಿಯಿತು.

ರಾಜ್ಯ ಸರ್ಕಾರ ಸುಮಾರು ₹ 260 ಕೋಟಿ ಹಣ ಬಿಡುಗಡೆ ಮಾಡಿ, ಆಂಧ್ರದ ಕಂಪೆನಿಗೆ ಗುತ್ತಿಗೆ ನೀಡಿದೆ. ಕಾಮಗಾರಿ ನಡೆದಿರುವುದು ಶೂನ್ಯ. ಅಣೆಕಟ್ಟು ಪೂರ್ಣಗೊಂಡಿದ್ದರೆ ಈ ಬಾರಿ ಸುರಿದ ಮಳೆಗೆ ಜಲಾಶಯ ತುಂಬಿ ಈ ಭಾಗಕ್ಕೆ 4 ವರ್ಷ ನೀರು ಪೂರೈಕೆ ಮಾಡಬಹುದಿತ್ತು. ನಿರೀಕ್ಷೆಯಂತೆ ಕಾಮಗಾರಿ ನಡೆದಿಲ್ಲ. ಎಸ್.ಎನ್ ನಾರಾಯಣಸ್ವಾಮಿ ಬರೀ ಮಾತುಗಾರ. ಕೆಲಸ ಮಾಡುವುದರಲ್ಲಿ ಶೂನ್ಯ
- ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಅಭ್ಯರ್ಥಿ

**

ಯರಗೋಳ್ ಅಣೆಕಟ್ಟು ಕಾಮಗಾರಿ ನಡೆದೇ ಇಲ್ಲ. 5 ವರ್ಷದ ಹಿಂದೆಯೇ ಪೈಪ್‌ಲೈನ್‌ ಹಾಕಿದೆ. ಹಣ ಲೂಟಿ ಮಾಡುವ ಸಲುವಾಗಿಯೇ ಸರ್ಕಾರ ಯೋಜನೆ ಜಾರಿ ಮಾಡುತ್ತಿದೆ 
– ಸೋಮಣ್ಣ, ಸ್ಥಳೀಯ ನಿವಾಸಿ

**

ರಾಜಕೀಯ ನಾಯಕರು ನುಡಿದಂತೆ ನಡೆಯುವುದಿಲ್ಲ. ನೀರಿನ ರಾಜಕೀಯ ನಡೆಸಿ ಜನರನ್ನು ವಂಚಿಸುತ್ತಿದ್ದಾರೆ. ಈ ಬಾರಿಯಾದರೂ ಎಚ್ಚೆತ್ತುಕೊಳ್ಳುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ
- ಬಾಬು, ಸ್ಥಳೀಯ ನಿವಾಸಿ

**

-ಕಾಂತರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT